ADVERTISEMENT

ಕೊಪ್ಪಳ: ಬಜೆಟ್‌ನಲ್ಲಿ ಅನ್ಯಾಯ, ಸಂಗಣ್ಣ ಕರಡಿ ರಾಜೀನಾಮೆಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2023, 13:56 IST
Last Updated 3 ಫೆಬ್ರುವರಿ 2023, 13:56 IST
ಗಂಗಾಧರ ಕುಷ್ಟಗಿ
ಗಂಗಾಧರ ಕುಷ್ಟಗಿ   

ಕೊಪ್ಪಳ: ‘ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಬಜೆಟ್‌ನಲ್ಲಿ ಭದ್ರಾ ಮೇಲ್ದಂಡೆ ಯೋಜನೆಗೆ ಮಾತ್ರ ಹಣ ನೀಡಿ ಕೊಪ್ಪಳ ಏತ ನೀರಾವರಿಗೆ ಅನುಕೂಲವಾಗುತ್ತಿದ್ದ ಕೃಷ್ಣಾ ಮೇಲ್ದಂಡೆ ಯೋಜನೆಯನ್ನು ಕಡೆಗಣಿಸಿದ್ದಾರೆ. ಇದನ್ನು ಖಂಡಿಸಿ ಸಂಸದ ಸಂಗಣ್ಣ ಕರಡಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು’ ಎಂದು ರಾಜ್ಯ ನೀರಾವರಿ ಹೋರಾಟದ ಸಂಚಾಲಕ ಗಂಗಾಧರ ಕುಷ್ಟಗಿ ಆಗ್ರಹಿಸಿದರು.

ಇಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ‘ಆಲಮಟ್ಟಿ ಜಲಾಶಯದ ಕ್ರಸ್ಟ್‌ಗೇಟ್‌ಗಳನ್ನು ಎತ್ತರಿಸಬಾರದು ಎಂದು ಆಂಧ್ರ ಸುಪ್ರೀಂ ಕೋರ್ಟ್‌ ಮೊರೆ ಹೋಗಿದೆ. ನೆರೆ ರಾಜ್ಯಗಳಿಗೆ ಅನುಕೂಲ ಕಲ್ಪಿಸಲು ಕರ್ನಾಟಕಕ್ಕೆ ಅನ್ಯಾಯ ಮಾಡುತ್ತಿದೆ. ಹಣಕಾಸು ಸಚಿವೆಗೆ ಧಾರವಾಡ ಕಸೂತಿಯ ಸೀರೆ ಕೊಟ್ಟ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ನೀರಿಲ್ಲದ ಜಲಾಶಯದಲ್ಲಿ ಬಾಗಿನ ಬಿಡುವಂತೆ ಮಾಡಿದ್ದಾರೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಬಸವರಾಜ ಬೊಮ್ಮಾಯಿ ನೀರಾವರಿ ಸಚಿವರಾಗಿದ್ದಾಗ ಮತ್ತು ಮುಖ್ಯಮಂತ್ರಿಯಾದ ಬಳಿಕ ಕೇವಲ ಬೋಗಸ್‌ ಹೇಳಿಕೆಗಳನ್ನು ನೀಡಿ ಕಾಲ ಕಳೆಯುತ್ತಿದ್ದಾರೆ. ನೀರಾವರಿ ಯೋಜನೆಗೆ ಭೂಮಿ ಕೊಟ್ಟ ಮಾಲೀಕರಿಗೆ ಬೇರೆ ಭಾಗದಲ್ಲಿ ದೊಡ್ಡ ಮೊತ್ತವನ್ನು ನೀಡಲಾಗಿದ್ದು, ಕೃಷ್ಣಾ ಮೇಲ್ದಂಡೆ ಭಾಗದ ಭೂ ಮಾಲೀಕರಿಗೆ ಪ್ರತಿ ಎಕರೆಗೆ ₹1.5 ಲಕ್ಷ ಕೊಡುವುದಾಗಿ ಹೇಳುತ್ತಿದ್ದಾರೆ. ಈ ಕುರಿತು ಶ್ವೇತಪತ್ರ ಹೊರಡಿಸಬೇಕು’ ಎಂದು ಒತ್ತಾಯಿಸಿದರು.

ADVERTISEMENT

‘ಕೊಪ್ಪಳ ಏತ ನೀರಾವರಿಯಾದರೆ ಜಿಲ್ಲೆಯ ಲಕ್ಷಾಂತರ ರೈತರಿಗೆ ಅನುಕೂಲವಾಗುತ್ತಿತ್ತು. ಜನರ ಹಿತಾಸಕ್ತಿಗಾಗಿ ರಾಜೀನಾಮೆ ನೀಡಬೇಕು. ಈ ಮೂಲಕ ಇಲ್ಲಿನ ಜನರ ಋಣ ತೀರಿಸಬೇಕು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.