
ಪ್ರಾತಿನಿಧಿಕ ಚಿತ್ರ
ಕುಷ್ಟಗಿ: ಮಕ್ಕಳ ಕಳ್ಳಿ ಎಂಬ ಸಂಶಯಗೊಂಡ ಸಾರ್ವಜನಿಕರು ಬುದ್ಧಿಮಾಂದ್ಯ ಮಹಿಳೆಯನ್ನು ಹಿಗ್ಗಾಮುಗ್ಗಾ ಥಳಿಸಿ ಅವಮಾನಿಸಿದ ಘಟನೆ ತಾಲ್ಲೂಕಿನ ತಳುವಗೇರಾದಲ್ಲಿ ಕೆಲ ದಿನಗಳ ಹಿಂದೆ ನಡೆದಿರುವುದು ಬೆಳಕಿಗೆ ಬಂದಿದೆ.
ಅಷ್ಟೇ ಅಲ್ಲದೆ ಈ ವಿಷಯಕ್ಕೆ ಸಂಬಂಧಿಸಿದಂತೆ ಮಹಿಳೆಯನ್ನು ಸಾರ್ವಜನಿಕ ಸ್ಥಳದಲ್ಲಿ ಪುರುಷರು ಮನಬಂದಂತೆ ಥಳಿಸುವ ವಿಡಿಯೊಗಳನ್ನು ಬಹಳಷ್ಟು ಜನರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.
ಆಗಿದ್ದೇನು?: ಪೊಲೀಸ್ ಮೂಲಗಳು ತಿಳಿಸಿರುವ ಪ್ರಕಾರ ಪಕ್ಕದ ಯಲಬುರ್ಗಾ ತಾಲ್ಲೂಕು ಬುಡಕುಂಟಿ ಗ್ರಾಮದವರು ಎನ್ನಲಾದ ಮಧ್ಯವಯಸ್ಸಿನ ಮಹಿಳೆ ತನ್ನ ಸಹೋದರಿಯನ್ನು ಭೇಟಿ ಮಾಡಲು ತಳುವಗೇರಾ ಗ್ರಾಮದಿಂದ ಕಾಲ್ನಡಿಗೆಯಲ್ಲಿ ಹೋಗುತ್ತಿದ್ದಾಗ ಕುಡಿಯಲು ನೀರು ಕೇಳಿದ್ದಾರೆ. ಅಷ್ಟೇ ಅಲ್ಲದೆ ಅಲ್ಲಿದ್ದ ಮಗುವನ್ನು ಎತ್ತಿಕೊಂಡಿದ್ದು ಗ್ರಾಮಸ್ಥರಲ್ಲಿ ಅನುಮಾನಕ್ಕೆ ಕಾರಣವಾಗಿ ಮಕ್ಕಳನ್ನು ಅಪರಿಸಲು ಬಂದಿರಬಹುದು ಎಂದು ಆಕೆಯನ್ನು ಮಾತನಾಡಿಸಿದ್ದಾರೆ. ಆದರೆ ಸ್ಪಷ್ಟ ಮಾಹಿತಿ ನೀಡದ ಕಾರಣ ಅನುಮಾನ ಮತ್ತಷ್ಟೂ ಬಲಗೊಂಡು ಪುರುಷರು ಮಹಿಳೆಯ ಜಡೆ ಹಿಡಿದು ಎಳೆದಾಡಿ ಮನಸೋ ಇಚ್ಛೆ ಥಳಿಸಿದ್ದಾರೆ. ನಂತರ 112 ಪೊಲೀಸ್ ಗಸ್ತು ವಾಹನಕ್ಕೆ ಕರೆ ಮಾಡಿದ್ದಾರೆ.
ತದನಂತರ ಮಹಿಳೆಯನ್ನು ಪೊಲೀಸ್ ಠಾಣೆಗೆ ಕರೆದೊಯ್ಯಲಾಗಿದೆ. ಹೆಚ್ಚಿನ ಮಾಹಿತಿ ಸಂಗ್ರಹಿಸಿದ ಪೊಲೀಸರು ಮಹಿಳೆಯ ಸಂಬಂಧಿಕರನ್ನು ಕರೆಯಿಸಿಕೊಂಡು ಅವರೊಂದಿಗೆ ಕಳಿಸಿಕೊಟ್ಟಿದ್ದಾರೆ.
ಒಂದೊಮ್ಮೆ ಜನರಿಗೆ ಮಹಿಳೆಯ ಮೇಲೆ ಶಂಕೆ ಬಂದಿದ್ದರೆ ಅದನ್ನು ಪೊಲೀಸರ ಗಮನಕ್ಕೆ ತರಬೇಕಿತ್ತು. ಆದರೆ ಕಾನೂನನ್ನು ಕೈಗೆ ತೆಗೆದುಕೊಂಡವರಂತೆ ಮೃಗೀಯವಾಗಿ ವರ್ತಿಸಬಾರದಿತ್ತು ಎಂದು ವಿಡಿಯೊ ಗಮನಿಸಿದ ಇತರೆ ಜನರು ಅಸಮಾಧಾನ ಹೊರಹಾಕಿದರು.
ಮಹಿಳೆಯನ್ನು ಅವಮಾನಿಸಿ ಹಲ್ಲೆ ನಡೆಸಿರುವುದಕ್ಕೆ ಸಂಬಂಧಿಸಿದಂತೆ ಪೊಲೀಸರು ಸ್ವಯಂ ಪ್ರೇರಿತ ದೂರು ದಾಖಲಿಸಿಕೊಳ್ಳಬೇಕಿತ್ತು ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಈ ಪ್ರಕರಣ ದಾಖಲಾಗದ ಕುರಿತು ಮಾಹಿತಿಗಾಗಿ ಸಬ್ ಇನ್‌ಸ್ಪೆಕ್ಟರ್ ಹನುಮಂತಪ್ಪ ತಳವಾರ ಅವರನ್ನು 'ಪ್ರಜಾವಾಣಿ' ಸಂಪರ್ಕಿಸಿದಾಗ ಅವರು ಏನನ್ನೂ ಪ್ರತಿಕ್ರಿಯಿಸದೆ ಜಾರಿಕೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.