ADVERTISEMENT

ಕೊಪ್ಪಳ |ಮಕ್ಕಳ ಕಲಿಕೆ ಸುಲಭವಾಗಿಸಿದ ಶಿಕ್ಷಕರು

ಮಕ್ಕಳ ಓದಿನ ಆಸಕ್ತಿ ಹೆಚ್ಚಳಕ್ಕೆ ನೆರವಾದ ‘ನೋಡಿ ಕಲಿ’ ಮಾದರಿ

ಪ್ರಮೋದ ಕುಲಕರ್ಣಿ
Published 30 ಜುಲೈ 2025, 5:48 IST
Last Updated 30 ಜುಲೈ 2025, 5:48 IST
ಕೊಪ್ಪಳ ಜಿಲ್ಲೆಯ ಕುಕನೂರು ತಾಲ್ಲೂಕಿನ ಕುದುರಿಮೋತಿ ಗ್ರಾಮದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳು ಊಟ ಮಾಡುತ್ತಲೇ ಕಲಿಯಲು ನೆರವಾಗುತ್ತಿರುವ ಗೋಡೆಬರಹ   ಪ್ರಜಾವಾಣಿ ಚಿತ್ರ: ಭರತ್ ಕಂದಕೂರ
ಕೊಪ್ಪಳ ಜಿಲ್ಲೆಯ ಕುಕನೂರು ತಾಲ್ಲೂಕಿನ ಕುದುರಿಮೋತಿ ಗ್ರಾಮದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳು ಊಟ ಮಾಡುತ್ತಲೇ ಕಲಿಯಲು ನೆರವಾಗುತ್ತಿರುವ ಗೋಡೆಬರಹ   ಪ್ರಜಾವಾಣಿ ಚಿತ್ರ: ಭರತ್ ಕಂದಕೂರ   

ಕೊಪ್ಪಳ: ಪಠ್ಯಕ್ಕೆ ಸಂಬಂಧಿಸಿದ ಬರಹ, ಚಿತ್ರಗಳನ್ನು ತರಗತಿ ಹಾಗೂ ಶಾಲೆಯ ಆವರಣದಲ್ಲಿಯೂ ನೋಡಿ ವಿದ್ಯಾರ್ಥಿಗಳು ಸುಲಭವಾಗಿ ಕಲಿಯುವಂತೆ ಮಾಡುವ ಕೆಲಸವನ್ನು ಜಿಲ್ಲೆಯ ಸರ್ಕಾರಿ ಶಾಲೆಗಳ ಶಿಕ್ಷಕರು ಪರಿಣಾಮಕಾರಿಯಾಗಿ ಮಾಡುತ್ತಿದ್ದಾರೆ. 

ಜಿಲ್ಲೆಯ ಕುಕನೂರು ತಾಲ್ಲೂಕಿನ ಕುದುರಿಮೋತಿ ಗ್ರಾಮದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 633 ವಿದ್ಯಾರ್ಥಿಗಳು ಹಾಗೂ 18 ಜನ ಶಿಕ್ಷಕರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಈ ಶಾಲೆಯ ಮಕ್ಕಳಲ್ಲಿ ಕಲಿಕಾ ಆಸಕ್ತಿ ಪರಿಣಾಮಕಾರಿಯಾಗಿಸಲು ಶಾಲಾ ಸಿಬ್ಬಂದಿ ಪಠ್ಯಕ್ಕೆ ಸಂಬಂಧಿಸಿದ ವಿಷಯಗಳನ್ನು ಗೋಡೆಯ ಮೇಲೆ ಬರೆಯಿಸಿದ್ದಾರೆ.

ಪ್ರೌಢಶಾಲೆ ಹಂತದಲ್ಲಿ ಓದುವ ಮಕ್ಕಳು ಕಬ್ಬಿಣದ ಕಡಲೆ ಎಂದುಕೊಳ್ಳುವ ವಿಜ್ಞಾನ, ಗಣಿತ ಹಾಗೂ ಇಂಗ್ಲಿಷ್‌ ವಿಷಯಕ್ಕೆ ಸಂಬಂಧಿಸಿದಂತೆ ಹೆಚ್ಚು ವಿಷಯಗಳ ಚಿತ್ರಗಳನ್ನು ಬರೆಯಲಾಗಿದೆ. ಉಳಿದ ವಿಷಯಗಳ ಬಗ್ಗೆ ಪ್ರಾಜೆಕ್ಟರ್‌ಗಳ ಮೂಲಕ ತೋರಿಸಿ ಕಲಿಕೆ ಸುಲಭ ಮತ್ತು ಪರಿಣಾಮಕಾರಿಯಾಗಿ ಮಾಡಲಾಗುತ್ತಿದೆ.

ADVERTISEMENT

ನೆರವಾದ ಶಿಕ್ಷಕರ ತಂಡ: ಸರ್ಕಾರಿ ಶಾಲೆಗಳ ಸಬಲೀಕರಣಕ್ಕಾಗಿ ಸರ್ಕಾರಿ ಶಿಕ್ಷಕರು ಸೇರಿ ‘ವಿಶ್ವಬಂಧು ಸೇವಾ ಗುರುಬಳಗ’ ಎನ್ನುವ ತಂಡವನ್ನು ಕೊಟ್ಟಿಕೊಂಡು ಸರ್ಕಾರಿ ಶಾಲೆಗಳಲ್ಲಿ ಫ್ಲೆಕ್ಸ್‌ಗಳನ್ನು ಅಳವಡಿಸಿ ಅದರಲ್ಲಿ ಪಠ್ಯಕ್ಕೆ ಸಂಬಂಧಿಸಿದ ವಿಷಯಗಳನ್ನು ಪೇಂಟಿಂಗ್‌ ಮಾಡಿದ್ದಾರೆ. ಫ್ಲೆಕ್ಸ್‌ ಜೊತೆಗೆ ಗೋಡೆಯಲ್ಲೂ ವಿಜ್ಞಾನ, ಸೌರಮಂಡಲ, ಸೌರಶಕ್ತಿ, ಗಣಿತದ ಪ್ರಮೇಯಗಳು ಹೀಗೆ ಅನೇಕ ವಿಷಯಗಳ ಬಗ್ಗೆ ಚಿತ್ರಿಸಲಾಗಿದೆ. ವಿದ್ಯಾರ್ಥಿಗಳು ಶಾಲೆಯ ಆವರಣದಲ್ಲಿ ಓಡಾಡುವಾಗ ಆ ಚಿತ್ರಗಳು ಆಕರ್ಷಿಸುತ್ತಿವೆ. ಇದು ಮಕ್ಕಳ ಕಲಿಕೆಯ ಆಸಕ್ತಿ ಹೆಚ್ಚಳಕ್ಕೂ ಕಾರಣವಾಗುತ್ತಿದೆ ಎನ್ನುತ್ತಾರೆ ಕುದುರಿಮೋತಿ ಶಾಲೆಯ ಶಿಕ್ಷಕರು.

20 ಜನ ಶಿಕ್ಷಕರಿಂದ ಆರಂಭವಾದ ಗುರುಬಳಗ ಈಗ 150ಕ್ಕೂ ಹೆಚ್ಚು ಜನರ ತಂಡವನ್ನು ಹೊಂದಿದೆ. ವಿವಿಧ ತಂಡಗಳಾಗಿ ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿ ಮಾಡುತ್ತಿದ್ದು, ಕುದುರಿಮೋತಿ ಶಾಲೆಯಲ್ಲಿ ಮಾಡಿದ ಪಠ್ಯಗಳ ಗೋಡೆಬರಹದ ಚಿತ್ತಾರ ಮಕ್ಕಳ ಕಲಿಕೆಗೆ ಪೂರಕವಾಗಿದೆ. ಈ ತಂಡ ಐದು ವರ್ಷಗಳಿಂದ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳ ಕಲಿಕೆಗೆ ನೆರವಾಗುತ್ತಿದೆ. ಕುದರಿಮೋತಿಯಂತೆಯೇ ಬೇರೆ ಸರ್ಕಾರಿ ಶಾಲೆಗಳಲ್ಲಿಯೂ ಇದು ಮಕ್ಕಳಿಗೆ ಅನುಕೂಲವಾಗಿದೆ.

ಕೊಪ್ಪಳ ಜಿಲ್ಲೆಯ ಕುಕನೂರು ತಾಲ್ಲೂಕಿನ ಕುದರಿಮೋತಿ ಗ್ರಾಮದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರಾಜೆಕ್ಟರ್‌ ಮೂಲಕ ಮಕ್ಕಳಿಗೆ ಕಲಿಸುತ್ತಿದ್ದ ಶಿಕ್ಷಕಿ  ಪ್ರಜಾವಾಣಿ ಚಿತ್ರ: ಭರತ್ ಕಂದಕೂರ

ಐದು ವರ್ಷಗಳ ಹಿಂದೆ ಆರಂಭವಾಗಿರುವ ಶಿಕ್ಷಕರ ಸೇವಾಬಳಗ ಫ್ಲೆಕ್ಸ್‌ಗಳು, ಗೋಡೆಬರಹದ ಮೂಲಕ ಕಲಿಕೆಗೆ ಪ್ರೇರಣೆ ಮಕ್ಕಳ ಕಲಿಕಾ ಆಸಕ್ತಿ ಹೆಚ್ಚಿಸುತ್ತಿರುವ ಪಠ್ಯದ ಚಿತ್ರಗಳು

ಗೋಡೆಗಳ ಮೇಲಿನ ಪಠ್ಯದ ಬರಹ ಹಾಗೂ ಚಿತ್ರಗಳು ಮಕ್ಕಳಿಗೆ ಕಲಿಕೆಯನ್ನು ಸುಲಭವಾಗಿಸಿವೆ. ಕಡಿಮೆ ಅವಧಿಯಲ್ಲಿ ಪರಿಣಾಮಕಾರಿ ಬೋಧನೆಗೆ ಅನುಕೂಲವಾಗಿವೆ.
ಮಂಗಳಪ್ಪ ಯಲಿಗಾರ ಪ್ರಭಾರ ಮುಖ್ಯೋಪಾಧ್ಯಾಯ ಕುದರಿಮೋತಿ ಶಾಲೆ
ಸರ್ಕಾರಿ ಶಾಲೆಗಳ ಬಲವರ್ಧನೆ ನಮ್ಮ ಆಶಯ. ಆದ್ದರಿಂದ ಶಿಕ್ಷಕರು ತಂಡ ಕಟ್ಟಿಕೊಂಡು ಶಾಲೆಗಳನ್ನು ಅಂದಗೊಳಿಸಿ ನಲಿಯುತ್ತಲೇ ಮಕ್ಕಳು ಕಲಿಯಬೇಕು ಎಂದು ಗೋಡೆಬರಹ ಬರೆಯುತ್ತಿದ್ದೇವೆ.
ಸಿದ್ದಲಿಂಗಪ್ಪ ಶಾಗೋಟಿ ವಿಶ್ವಬಂಧು ಸೇವಾ ಗುರುಬಳಗದ ಮುಖ್ಯಸ್ಥ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.