
ಕೊಪ್ಪಳ: ಅಂಗವಿಕಲರ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ಅಂಗವಿಕಲರ ರಾಜ್ಯ ಒಕ್ಕೂಟದ (ಕೆ.ಎ.ಆರ್.ಓ) ಜಿಲ್ಲಾ ಘಟಕದ ನೇತೃತ್ವದಲ್ಲಿ ಅಂಗವಿಕಲರು ನಗರದ ಜಿಲ್ಲಾಡಳಿತ ಭವನದ ಮುಂಭಾಗದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು.
21 ರೀತಿಯ ಅಂಗವಿಕಲರಿಗೆ ಮಾಶಾಸನವನ್ನು ₹5000ಕ್ಕೆ ಏರಿಸಬೇಕು. ರಾಜ್ಯದಾದ್ಯಂತ ಎಲ್ಲರಿಗೂ ಉಚಿತ ಬಸ್‌ಪಾಸ್ ಸೌಲಭ್ಯ ಒದಗಿಸಬೇಕು. ಸ್ಥಳೀಯ ಸಂಸ್ಥೆಗಳಲ್ಲಿ ಅಂಗವಿಕಲರಿಗೆ ಮೀಸಲಾಗಿರುವ ಶೇ. 5 ಅನುದಾನ ಸಮರ್ಪಕವಾಗಿ ಬಳಕೆ ಮಾಡಬೇಕು, ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಂಗವಿಕಲರ ಕುಂದುಕೊರತೆ ಸಭೆಗಳನ್ನು ನಿಯಮಿತವಾಗಿ ಹಮ್ಮಿಕೊಳ್ಳಬೇಕು ಎಂದು ಹೋರಾಟ ನಿರತರು ಆಗ್ರಹಿಸಿದರು.
ಸ್ಥಳೀಯ ಸಂಸ್ಥೆಗಳ ಯೋಜನೆಯಲ್ಲಿ ನಿವೇಶನ ಅಥವಾ ಮನೆಯನ್ನು ಒದಗಿಸಬೇಕು. ಸ್ವಯಂ ಉದ್ಯೋಗ ಮಾಡಲು ವಿವಿಧ ಅಭಿವೃದ್ಧಿ ನಿಗಮಗಳಲ್ಲಿ ವಿಕಲಚೇತನರಿಗೆ ಸಾಲ ಸೌಲಭ್ಯ ಹೆಚ್ಚಿನ ಪ್ರಾದ್ಯಾನತೆ ನೀಡಬೇಕು ಎಂದು ಒಕ್ಕೂಟದ ಪದಾಧಿಕಾರಿಗಳು ಒತ್ತಾಯಿಸಿ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ವೆಂಕಟೇಶ ದೇಶಪಾಂಡೆ ಅವರಿಗೆ ಮನವಿ ಸಲ್ಲಿಸಿದರು.
ಒಕ್ಕೂಟದ ರಾಜ್ಯ ಉಪಾಧ್ಯಕ್ಷ ಮಲ್ಲಿಕಾರ್ಜುನ್ ಪೂಜಾರ, ಜಿಲ್ಲಾಧ್ಯಕ್ಷ ಅನ್ವರ್ ಪಟೇಲ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ವೀರೇಶ ಹಾಲಗುಂಡಿ, ಜಿಲ್ಲಾ ಉಪಾಧ್ಯಕ್ಷ ಅನುರಾಧ ಬಾಳೆತೋಟ, ಖಜಾಂಚಿ ಮಂಜುನಾಥ ಮಂತ್ರಿ, ಕೋರ್ ಕಮಿಟಿ ಸದಸ್ಯರಾದ ಮಂಜುನಾಥ ಹೊಸಕೇರಿ, ಹನುಮಾಕ್ಷಿ ಹಣಗಿ, ಆದಪ್ಪ ಮಾಲಿಪಾಟೀಲ್, ಮಹಾಂತೇಶ ಹಿರೇಮಠ, ಸಿದ್ದಲಿಂಗಮ್ಮ ಹಾಲಗುಂಡಿ ಇದ್ದರು.