ADVERTISEMENT

‘ಕ್ರೀಡಾ ಸಾಧಕರಿಗೆ ಉನ್ನತ ಹುದ್ದೆ ಅವಕಾಶ’

ಮುನಿರಾಬಾದ್: ಅಂತರಕಾಲೇಜು ಕ್ರೀಡಾಕೂಟಕ್ಕೆ ಚಾಲನೆ

​ಪ್ರಜಾವಾಣಿ ವಾರ್ತೆ
Published 8 ಡಿಸೆಂಬರ್ 2019, 2:53 IST
Last Updated 8 ಡಿಸೆಂಬರ್ 2019, 2:53 IST
ಮುನಿರಾಬಾದ್‍ನ ತೋಟಗಾರಿಕೆ ಕಾಲೇಜು ಮೈದಾನದಲ್ಲಿ ಶನಿವಾರ ಅಂತರ ಕಾಲೇಜು ಕ್ರೀಡಾಕೂಟದಲ್ಲಿ ವಿದ್ಯಾರ್ಥಿಗಳು ಧ್ವಜವಂದನೆ ಸಲ್ಲಿಸಿದರು
ಮುನಿರಾಬಾದ್‍ನ ತೋಟಗಾರಿಕೆ ಕಾಲೇಜು ಮೈದಾನದಲ್ಲಿ ಶನಿವಾರ ಅಂತರ ಕಾಲೇಜು ಕ್ರೀಡಾಕೂಟದಲ್ಲಿ ವಿದ್ಯಾರ್ಥಿಗಳು ಧ್ವಜವಂದನೆ ಸಲ್ಲಿಸಿದರು   

ಮುನಿರಾಬಾದ್: ‘ಶಾಲಾ ಕಾಲೇಜು ದಿನಗಳಲ್ಲಿ ಕ್ರೀಡೆಯಲ್ಲಿ ತೊಡಗಿಸಿಕೊಂಡ ಕ್ರೀಡಾ ಸಾಧಕರಿಗೆ ಭವಿಷ್ಯದಲ್ಲಿ ಉನ್ನತ ಹುದ್ದೆಯ ಅವಕಾಶಗಳು ಹುಡುಕಿ ಬರುತ್ತವೆ ಎಂಬುದಕ್ಕೆ ನಾನೇ ಪ್ರತ್ಯಕ್ಷ ಸಾಕ್ಷಿ’ ಎಂದು ಇಲ್ಲಿನ ಇಂಡಿಯಾ ರಿಸರ್ವ್ ಬೆಟಾಲಿಯನ್‍ನ (ಐಆರ್‌ಬಿ) ಕಮಾಡೆಂಟ್ ಮಹದೇವಪ್ರಸಾದ್ ಹೇಳಿದರು.

ಇಲ್ಲಿನ ತೋಟಗಾರಿಕೆ ಕಾಲೇಜು ಮೈದಾನದಲ್ಲಿ ಶನಿವಾರ ಆರಂಭವಾದ ಬಾಗಲಕೋಟೆ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ವ್ಯಾಪ್ತಿಯ ಅಂತರ ಕಾಲೇಜುಗಳ ಕ್ರೀಡಾಕೂಟ ಉದ್ಘಾಟಿಸಿ ಅವರು ಮಾತನಾಡಿದರು.

‘ನಾನು ವಾಲಿಬಾಲ್ ಆಟಗಾರ. ಕ್ರೀಡಾ ಕೋಟಾದಲ್ಲಿ ಮುಖಾಂತರ ಎಂಜಿನಿಯರಿಂಗ್ ಸೀಟು ಸುಲಭವಾಗಿ ಸಿಕ್ಕಿತು. ನಂತರ ಮೀಸಲು ಪೊಲೀಸ್‍ ಪಡೆಯಲ್ಲಿ ಪಿಎಸ್‌ಐ ಆಗಿ ಆಯ್ಕೆಯಾದೆ. ರಾಜ್ಯ ಪೊಲೀಸ್ ಕ್ರೀಡಾಧಿಕಾರಿ, ಉಪ ಕಮಾಡೆಂಟ್ ಈಗ ಕಮಾಂಡೆಂಟ್ ಆಗಿದ್ದೇನೆ’ ಎಂದು ಹೇಳಿದರು.

ADVERTISEMENT

‘ನಮ್ಮ ಕ್ರೀಡಾಪಟುಗಳಿಗೆ ಆಧುನಿಕ ಸೌಲಭ್ಯ ಸಿಗಬೇಕು. ಜಿಲ್ಲೆಗೊಂದು ಸುಸಜ್ಜಿತ ಕ್ರೀಡಾಂಗಣ ಇಲ್ಲದಿರುವುದು ದುರದೃಷ್ಟಕರ. ಸೂಕ್ತ ಮೈದಾನ, ಕ್ರೀಡಾ ಸಲಕರಣೆಗಳು ಸಿಗುವಂತೆ ವ್ಯವಸ್ಥೆಯಾಗಬೇಕು’ ಎಂದರು.

ಅಧ್ಯಕ್ಷತೆ ವಹಿಸಿದ್ದ ತೋಟಗರಿಕೆ ವಿಶ್ವವಿದ್ಯಾಲಯದ ಕುಲಪತಿ ಡಾ.ಕೆ.ಎಂ.ಇಂದಿರೇಶ್ ಮಾತನಾಡಿ, ಎಲ್ಲರೂ ಕ್ರೀಡಾ ಮನೋಭಾವದಿಂದ ಭಾಗವಹಿಸಬೇಕು. ಯಾರೇ ಗೆದ್ದರೂ ನಮ್ಮ ವಿಶ್ವವಿದ್ಯಾಲಯವನ್ನು ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದಲ್ಲಿ ಗುರುತಿಸುವಂತಾಗಬೇಕು. ನಿಮ್ಮ ಉತ್ಸಾಹ, ಸಾಧನೆ ನಿಮ್ಮ ಉಳಿದ ಸಹಪಾಠಿಗಳಿಗೆ ಮಾದರಿಯಾಗಬೇಕು. ಅವರಿಗೂ ಕ್ರೀಡೆಯಲ್ಲಿ ಪಾಳ್ಗೊಳ್ಳುವ ಸ್ಫೂರ್ತಿ ದೊರೆಯಲಿ’ ಎಂದು ಹಾರೈಸಿದರು.

ಬಾಗಲಕೋಟೆ ಕಾಲೇಜು ಡೀನ್ ಡಾ.ಎಸ್.ಐ.ಅಥಣಿ ಪ್ರಾಸ್ತಾವಿಕ ಮಾತನಾಡಿ, ‘ಬದುಕು ಚಟುವಟಿಕೆಗಳ ಆಗರ. ಕ್ರೀಡೆಯಿಂದ ದೇಹ, ಮನಸ್ಸು ಪ್ರಫುಲ್ಲವಾಗುತ್ತದೆ’ ಎಂದರು.

ಕೊಪ್ಪಳ, ಬೀದರ್, ದೇವಿಹೊಸೂರು, ಕೋಲಾರ, ಸಿರಸಿ, ಮೈಸೂರು, ಬಾಗಲಕೋಟೆ, ಬೆಂಗಳೂರು, ಅರಭಾವಿ ತೋಟಗಾರಿಕೆ ಕಾಲೇಜು, ವಿಜಯಪುರದ ನರೇಂದ್ರ ದೈಹಿಕ ಶಿಕ್ಷಣ (ಬಿ.ಪಿ.ಇಡಿ) ಕಾಲೇಜು ವಿದ್ಯಾರ್ಥಿಗಳು ಕ್ರೀಡಾಕೂಟದಲ್ಲಿ ಪಾಲ್ಗೊಂಡಿದ್ದರು.

ಮುನಿರಾಬಾದ್ ಕಾಲೇಜಿನ ಡೀನ್ ಡಾ.ಪಿ.ಎಂ.ಗಂಗಾಧರಪ್ಪ ಸ್ವಾಗತಿಸಿದರು. ಡಾ.ಎಂ.ಪ್ರಶಾಂತ್ ನಿರೂಪಿಸಿದರು. ಡಾ.ಸುರೇಶ್ ಪಾಟೀಲ್ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.