ADVERTISEMENT

ಕೊಪ್ಪಳ ‌ಜಿಲ್ಲಾಡಳಿತ ವತಿಯಿಂದ ‌ಎರಡು ಕಡೆ ಯೋಗ ದಿನಾಚರಣೆ

​ಪ್ರಜಾವಾಣಿ ವಾರ್ತೆ
Published 21 ಜೂನ್ 2022, 1:55 IST
Last Updated 21 ಜೂನ್ 2022, 1:55 IST
ಕೊಪ್ಪಳ ಜಿಲ್ಲೆ ಗಂಗಾವತಿ ತಾಲ್ಲೂಕಿನ ಅಂಜನಾದ್ರಿ ಬೆಟ್ಟದ ಕೆಳಗೆ ಇರುವ ಪಂಪಾಪತಿ ದೇವಸ್ಥಾನ ಸಮೀಪ ನಡೆಯುತ್ತಿರುವ ಯೋಗ
ಕೊಪ್ಪಳ ಜಿಲ್ಲೆ ಗಂಗಾವತಿ ತಾಲ್ಲೂಕಿನ ಅಂಜನಾದ್ರಿ ಬೆಟ್ಟದ ಕೆಳಗೆ ಇರುವ ಪಂಪಾಪತಿ ದೇವಸ್ಥಾನ ಸಮೀಪ ನಡೆಯುತ್ತಿರುವ ಯೋಗ   

ಕೊಪ್ಪಳ: ಅಂತರರಾಷ್ಟ್ರೀಯ ಯೋಗ ದಿನದ ಕಾರ್ಯಕ್ರಮವನ್ನು ಜಿಲ್ಲಾಡಳಿತದ ವತಿಯಿಂದ ಜಿಲ್ಲೆಯ ಎರಡು ಕಡೆ ಆಯೋಜಿಸಲಾಗಿದೆ.

ಗಂಗಾವತಿ ತಾಲ್ಲೂಕಿನ ಅಂಜನಾದ್ರಿ ಬೆಟ್ಟದ ಕೆಳಗೆ ಮತ್ತು ಕುಕನೂರು ತಾಲ್ಲೂಕಿನ ಐತಿಹಾಸಿಕ ಇಟಗಿಯ‌ ಮಹಾದೇವ ದೇವಾಲಯದಲ್ಲಿ ಯೋಗ ನಡೆಯುತ್ತಿದೆ. ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಳ್ಕರ್ ಹಾಗೂ ಜಿಲ್ಲಾ ಪಂಚಾಯ್ತಿ ಸಿಇಒ ಫೌಜಿಯಾ ತಮರುನ್ ಸೇರಿದಂತೆ ಹಲವು ಅಧಿಕಾರಿಗಳು ಇಟಗಿಯಲ್ಲಿ ಯೋಗ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ.

ಕೊಪ್ಪಳದ ಗವಿಸಿದ್ದೇಶ್ವರ ಕಾಲೇಜು ಮೈದಾನದಲ್ಲಿ ಕಾಲೇಜು ವತಿಯಿಂದ ಆಯೋಜಿಸಿರುವ ಕಾರ್ಯಕ್ರಮವನ್ನು ಸಂಸದ ಸಂಗಣ್ಣ ಕರಡಿ ಉದ್ಘಾಟಿಸಿದರು.

ADVERTISEMENT

ಬಳಿಕ ಮಾತನಾಡಿದ ಸಂಗಣ್ಣ ಕರಡಿ ನಮ್ಮ ಪುಣ್ಯಭೂಮಿಯಲ್ಲಿ, ಗವಿಸಿದ್ದೇಶ್ವರನ ಸನ್ನಿಧಿಯಲ್ಲಿ ಯೋಗ ದಿನ ಆಚರಣೆ ಮಾಡುತ್ತಿರುವುದು ನಮ್ಮ ಸುದೈವ. ದೇಶದ ಪ್ರಾಚೀನ ವಿದ್ಯೆಗಳಲ್ಲಿ ಯೋಗವೂ ಒಂದು. ಅಂತರರಾಷ್ಟ್ರೀಯ ಮಟ್ಟದಲ್ಲಿ ಯೋಗ ಪ್ರಚುರಪಡಿಸಿದಪ್ರಧಾನಿ‌‌ ನರೇಂದ್ರ ಮೋದಿ ಅವರು ‌ಮೈಸೂರಿಗೆ‌ ಬಂದು ಯೋಗ ಮಾಡುತ್ತಿರುವುದು ನಮಗೆಲ್ಲ ಹೆಮ್ಮೆ ಎಂದರು.

ಯೋಗದ ಮೌಲ್ಯ ಜಗತ್ತಿಗೆ ಸಾರಿದ ಕೀರ್ತಿ ಮೋದಿ ಅವರಿಗೆ ಸಲ್ಲಬೇಕು. ಮಾನಸಿಕ ಹಾಗೂ ಶಾರೀರಿಕ ಸಂಪತ್ತಿಗೆ ಯೋಗ ಸಹಕಾರಿ. ಸದಾ ಚಟುವಟಿಕೆಯಿಂದ ಇರಲು ಯೋಗ ನೆರವಾಗುತ್ತದೆ. ಇದರಿಂದ ಉತ್ತಮ‌ ಸಮಾಜ ಕಟ್ಟಲು ಸಾಧ್ಯವಾಗುತ್ತದೆ. ಕೋವಿಡ್ ‌ಸಮಯದಲ್ಲಿ ದೇಶದ ಜನರ ರಕ್ಷಣೆಗೆ ಯೋಗ ನೆರವಾಗಿದೆ. ಎಲ್ಲರೂ‌ ನಿತ್ಯ ಯೋಗ ಮಾಡಬೇಕು ಎಂದರು.

ಹರಿದ್ವಾರದ ಪತಂಜಲಿ ಯೋಗ ಪೀಠದ ವಿಶ್ವದೇವ ಸ್ವಾಮೀಜಿ ಮಾತನಾಡಿ ಯೋಗದಿಂದ ಬದುಕಿನ ಯೋಗವೂ ಬದಲಾಗುತ್ತದೆ. ಸತ್ಯ, ಅಹಿಂಸೆ ಪ್ರತಿಪಾದಿಸಬೇಕು. ದೇಹದ ಎಂಟು ಅಂಗಗಳು ಯೋಗದಿಂದ ರೋಗ ಮುಕ್ತವಾಗುತ್ತವೆ. ದೇವರ ಧ್ಯಾನ‌ ಮಾಡಬೇಕು ಎಂದರು.

ಗವಿಸಿದ್ದೇಶ್ವರ ಆಯುರ್ವೇದ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯ ಸ್ವಸ್ಥ ವೃತ, ಎನ್ ಎಸ್ ಎಸ್ ಘಟಕ ಹಾಗೂ ಪತಂಜಲಿ ಯೋಗ ಸಮಿತಿ‌ ಸಹಯೋಗದಲ್ಲಿ ಗವಿಸಿದ್ದೇಶ್ವರ ‌ಕಾಲೇಜಿನ ಮೈದಾನದಲ್ಲಿ ಯೋಗ ದಿನದ ಕಾರ್ಯಕ್ರಮ ಆಯೋಜನೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.