
ಮುನಿರಾಬಾದ್: ಇಲ್ಲಿನ ಭಾರತೀಯ ಮೀಸಲು ಪಡೆ (ಐಆರ್‌ಬಿ)ಯ ಘಟಕದಲ್ಲಿ ಮೂರು ವರ್ಷಗಳಿಂದ ಕವಾಯತಿನಲ್ಲಿ ಕನ್ನಡ ಅನುರಣಿಸುತ್ತಿದೆ. ಯೋಧರು ತಮ್ಮ ನಾಯಕ (ಪರೇಡ್ ಕಮಾಂಡರ್) ಕನ್ನಡದಲ್ಲಿ ನೀಡುವ ಆದೇಶಗಳನ್ನು ತಪ್ಪದೇ ಪಾಲಿಸುತ್ತಾರೆ.
ಸಾವಧಾನ, ಭುಜಶಸ್ತ್ರ, ಕೆಳಶಸ್ತ್ರ, ಸ್ಥಳಕ್ಕೆ ಹೋಗಿ, ವಿಶ್ರಾಂತಿ, ಶಸ್ತ್ರ ತೆಗೆಯಿರಿ, ಹಿಂದಿರುಗಿಸಿ, ಗುಂಡನ್ನು ತುಂಬಿ, ಗುಂಡನ್ನು ಹಾರಿಸಿ ಎಂಬ ಕನ್ನಡದ ಶಬ್ದಗಳು ಅನುರಣಿಸುತ್ತಿವೆ.
ಪ್ರತಿ ಸೋಮವಾರ ಹಾಗೂ ಶುಕ್ರವಾರ ನಿಗದಿತ ಕವಾಯತು, ರಾಷ್ಟ್ರೀಯ ಹಬ್ಬ, ಸ್ವಾತಂತ್ರ್ಯ ದಿನಾಚರಣೆ, ಗಣರಾಜ್ಯೋತ್ಸವ ಮತ್ತು ಪೊಲೀಸ್ ಹುತಾತ್ಮರ ದಿನಾಚರಣೆ ಹೀಗೆ ವಿಶೇಷ ಸಂದರ್ಭಗಳಲ್ಲಿ ನಡೆಯುವ ಕವಾಯತಿನಲ್ಲಿ ಕನ್ನಡ ರಿಂಗಣಿಸುತ್ತದೆ.
ಇವೆಲ್ಲ ಶಬ್ದಗಳು ಹಿಂದೆ ಆಂಗ್ಲ ಭಾಷೆಯಲ್ಲಿ ಇರುತ್ತಿದ್ದವು. ಅಟೆನ್ಶನ್, ಟೇಕ್ ಪೋಸ್ಟ್, ಸ್ಟ್ಯಾಂಡ್ ಅಟ್ ಈಸ್, ಫೈಯರ್ ಎಂಬ ಶಬ್ದಗಳು ಕ್ರಮೇಣ ಮಾಯವಾಗಿವೆ.
ವಿಶೇಷ ಸಂದರ್ಭಗಳಲ್ಲಿ ಕವಾಯತು ನಡೆಸಲು ಮತ್ತು ಮುಕ್ತಾಯಗೊಳಿಸಲು ಮುಖ್ಯ ಅತಿಥಿಗಳ ಅನುಮತಿಯನ್ನು ಕನ್ನಡದಲ್ಲಿ ಕೇಳಲಾಗುತ್ತದೆ.
‘ಮಾತೃಭಾಷೆಯ ವಿಷಯದಲ್ಲಿ ರಾಜಿ ಇಲ್ಲ. ಕಚೇರಿ ಮತ್ತು ಕಚೇರಿಯ ಹೊರಗಡೆ ಕನ್ನಡವನ್ನು ಕಡ್ಡಾಯವಾಗಿ ಬಳಸುತ್ತೇವೆ’ ಎಂದು ಹೇಳುತ್ತಾರೆ ಘಟಕದ ಕಮಾಂಡೆಂಟ್ ಬಿ.ಎಂ.ಪ್ರಸಾದ್ ಅವರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.