ADVERTISEMENT

ಬಾಹ್ಯಾಕಾಶ, ತಂತ್ರಜ್ಞಾನ: ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 30 ಡಿಸೆಂಬರ್ 2019, 9:54 IST
Last Updated 30 ಡಿಸೆಂಬರ್ 2019, 9:54 IST
ವಿದ್ಯಾರ್ಥಿಗಳೊಂದಿಗೆ ಇಸ್ರೋದ ವಿಶ್ರಾಂತ ಅಧ್ಯಕ್ಷ ಡಾ.ಎ.ಎಸ್‌.ಕಿರಣ್‌ಕುಮಾರ್‌ ಸಂವಾದ
ವಿದ್ಯಾರ್ಥಿಗಳೊಂದಿಗೆ ಇಸ್ರೋದ ವಿಶ್ರಾಂತ ಅಧ್ಯಕ್ಷ ಡಾ.ಎ.ಎಸ್‌.ಕಿರಣ್‌ಕುಮಾರ್‌ ಸಂವಾದ   

ಕೊಪ್ಪಳ: ಇಸ್ರೋ ಬಾಹ್ಯಾಕಾಶ ತಂತ್ರಜ್ಞಾನವನ್ನು ಸ್ವಾವಲಂಬಿಯಾಗಿ ನಿರ್ವಹಣೆ ಮಾಡಿದೆ. ಅದರಿಂದ ನಮ್ಮ ದೇಶಕ್ಕೆ ಮಾತ್ರವಲ್ಲದೇ ಬೇರೆ ದೇಶಗಳಿಗೂ ಉಪಯೋಗ ಆಗಿದೆ. ಈ ಮೂಲಕ ಭಾರತ ವಿಶ್ವಗುರುವಾಗಲು ಇಸ್ರೋ ಕೆಲಸ ಮಾಡುತ್ತಿದೆ ಎಂದು ಇಸ್ರೋದ ವಿಶ್ರಾಂತ ಅಧ್ಯಕ್ಷ ಡಾ.ಎ.ಎಸ್‌.ಕಿರಣ್‌ಕುಮಾರ್‌ ಹೇಳಿದರು.

ತಾಲ್ಲೂಕಿನ ಕಿಡದಾಳ ಗ್ರಾಮದಲ್ಲಿರುವ ಶಾರದಾ ಇಂಟರ್‌ನ್ಯಾಷನಲ್‌ ಶಾಲೆಯಲ್ಲಿ ಶನಿವಾರ ಶಾರದಾ ಉತ್ಸವ ಕಾರ್ಯಕ್ರಮದಲ್ಲಿ ‘ಬಾಹ್ಯಾಕಾಶ ಮತ್ತು ತಂತ್ರಜ್ಞಾನ’ ಕುರಿತು ನಡೆದ ವಿಜ್ಞಾನ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ತಂತ್ರಜ್ಞಾನ ಬಳಕೆ ಮಾಡುವುದರಲ್ಲಿ ನಮ್ಮ ದೇಶ ಐದು ಅಥವಾ ಆರನೇ ಸ್ಥಾನದಲ್ಲಿ ಇರಬಹುದು. ಆದರೆ ತಂತ್ರಜ್ಞಾನವನ್ನು ಸಮಾಜಕ್ಕೆ ಉಪಯೋಗ ಮಾಡುವುದರಲ್ಲಿ ಭಾರತ ಮೊದಲ ಸ್ಥಾನದಲ್ಲಿದೆ ಎಂದು ಪ್ರಪಂಚವೇ ಹೇಳುತ್ತಿದೆ. ಇದು ಹೆಮ್ಮೆಯ ಸಂಗತಿ ಎಂದರು.

ADVERTISEMENT

ನಾವಿಕ್ ಉಪಗ್ರಹ ಎಂದರೆ ಏಳು ಉಪಗ್ರಹಗಳನ್ನು ಸಮೂಹ ಮಾಡುವ ವಿಧಾನ. ನಾವು ಎಲ್ಲಿ ಇದ್ದೇವೆ. ನದಿಯಿಂದ ಎಷ್ಟು ಎತ್ತರದಲ್ಲಿದ್ದೇವೆ. ಯಾವ ದಿಕ್ಕಿನಲ್ಲಿದ್ದೇವೆ. ಮಾತೃಭಾಷೆಯಲ್ಲಿ ಹೆಚ್ಚಿನ ಮಾಹಿತಿ ಪಡೆಯುವುದು. ಪ್ರಕೃತಿ ವಿಕೋಪ ಸೇರಿದಂತೆ ಅಪಾಯಕಾರಿಯಾದ ವಾತಾವರಣದಲ್ಲಾಗುವ ವಿದ್ಯಮಾನಗಳನ್ನು ತಿಳಿಯುವುದು. ಹಡಗು ಬೇರೆ ದೇಶದ ಗಡಿಗೆ ಹೋಗುವುದನ್ನು ಸೂಚಿಸುವುದು ಸೇರಿದಂತೆ ಅನೇಕ ಮಾಹಿತಿಗಳನ್ನುನಾವಿಕ್‌ ಉಪಗ್ರಹ ಮೊಬೈಲ್‌ ಹಾಗೂ ಗ್ಯಾಜೆಟ್‌ ಮೂಲಕ ರವಾನಿಸುತ್ತದೆ. ಇಂತಹ ಆತ್ಯಾಧುನಿಕ ಉಪಕರಣಗಳನ್ನು ಬಳಸಿ ಆವಿಷ್ಕರಿಸಿದ ಸಂಶೋಧನಾ ವಸ್ತುಗಳನ್ನು ದೈನಂದಿನ ಜೀವನದಲ್ಲಿ ಉಪಯೋಗಿಸುತ್ತೇವೆ. ಇದಕ್ಕೆ ಮೀನುಗಾರರೇ ಸಾಕ್ಷಿಯಾಗಿದ್ದಾರೆ ಎಂದರು.

ಹಿಂದಿನ ಕಾಲದಲ್ಲಿ ಶೀಘ್ರವಾಗಿ ಸಂದೇಶಗಳನ್ನು ಕಳುಹಿಸಲು ಮತ್ತು ಸಂಪರ್ಕ ಸಾಧಿಸಲು ಆಗುತ್ತಿರಲಿಲ್ಲ. ಆದರೆ ಪ್ರಸ್ತುತ ಅನೇಕ ಸಂಶೋಧನೆಗಳಿಂದಾಗಿ ಕ್ಷಣಾರ್ಧದಲ್ಲಿ ಮಾಹಿತಿ ವಿನಿಮಯ
ಮಾಡಲು ಹಾಗೂ ಸಂಪರ್ಕ ಸಾಧಿಸಲು ಸಹಕಾರಿಯಾಗಿವೆ. ಇಡೀ ಪ್ರಪಂಚವನ್ನು ಜೋಡಿಸಲು ಕೂಡಾ ಅನುಕೂಲವಾಗಿದೆ. ಆಗ ಸೈಕ್ಲೋನ್‌ ಬಂದರೆ ನದಿ ತೀರದಲ್ಲಿರುವ ಸುಮಾರು 15ರಿಂದ 20 ಸಾವಿರ ಜನರು ಸಾವಿಗೀಡಾಗುತ್ತಿದ್ದರು. ಆದರೆ ಪ್ರಸ್ತುತ ಚಕ್ರವಾಹದ ಸಹಾಯದಿಂದ ಯಾವ ಸಮಯಕ್ಕೆ ಎಲ್ಲಿ ಸೈಕ್ಲೋನ್‌ ಬರುತ್ತದೆ ಎನ್ನುವ ಮಾಹಿತಿಯನ್ನು ಪೂರ್ವದಲ್ಲಿಯೇ ಪಡೆಯಬಹುದಾಗಿದೆ. ಇದರಿಂದ ಜೀವಹಾನಿ ಸಂಖ್ಯೆ ಬೆರಳೆಣಿಕೆಗೆ ಇಳಿದಿದೆ ಎಂದರು.ವಿಜ್ಞಾನಿ ಸುಹಾಸಿನಿ ಕಿರಣ್‌ಕುಮಾರ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.