ಕೊಪ್ಪಳ: ‘ಇಸ್ಲಾಮಿಯರು ಹಾಗೂ ಬ್ರಿಟಿಷರು ಸೇರಿದಂತೆ ಸಾಕಷ್ಟು ಜನರ ಆಕ್ರಮಣ ಎದುರಿಸಿಯೂ ಭಾರತ ಗಟ್ಟಿಯಾಗಿ ಉಳಿದುಕೊಂಡಿದೆ. ಯುಗಯುಗಗಳಿಂದಲೂ ಇರುವ ನಮ್ಮ ಸಾಂಸ್ಕೃತಿಕ ಗಟ್ಟಿತನವೇ ಇದಕ್ಕೆ ಕಾರಣ’ ಎಂದು ಹಿಂದೂ ಜಾಗರಣ ವೇದಿಕೆಯ ದಕ್ಷಿಣ ಮಧ್ಯಕ್ಷೇತ್ರದ ಸಂಯೋಜಕ ಜಗದೀಶ್ ಕಾರಂತ್ ಹೇಳಿದರು.
ವಿಜಯದಶಮಿ ಉತ್ಸವ ಅಂಗವಾಗಿ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ನಗರದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಪಥಸಂಚಲನದ ಬಳಿಕ ತಾಲ್ಲೂಕು ಕ್ರೀಡಾಂಗಣದಲ್ಲಿ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ‘ಪ್ರಸ್ತುತ ಜಗತ್ತಿನ ಯಾವ ನಾಗರಿಕತೆಯೂ ಅಸ್ತಿತ್ವದಲ್ಲಿಲ್ಲ. ಆದರೆ ಎಲ್ಲ ಆಕ್ರಮಣ ಸಹಿಸಿಕೊಂಡೂ ಭಾರತ ಗಟ್ಟಿಯಾಗಿರುವ ಇತಿಹಾಸವೇ ರೋಮಾಂಚಕ. ದೇಶದ ಪ್ರತಿಯೊಂದು ಇತಿಹಾಸದ ಘಟನೆಗೂ ಜೀವಂತ ಸಾಕ್ಷಿ ದೇಶದ ಮಣ್ಣಿನ ನೆಲದಲ್ಲಿವೆ. ಇಸ್ಲಾಮಿಯರ ದಾಳಿ ಭಾರತದ ಮೇಲಷ್ಟೇ ಆಗಿರಲಿಲ್ಲ; ಅದು ನಮ್ಮ ಸಂಸ್ಕೃತಿಯ ಮೇಲಾಗಿತ್ತು. ನೂರು ವರ್ಷಗಳನ್ನು ಪೂರೈಸಿರುವ ಆರ್‌ಎಸ್‌ಎಸ್ ಸಂಘಟನೆಯ ಶತಮಾನದ ಹಾದಿಯಲ್ಲಿ ಅನೇಕ ಮುಳ್ಳಿನ ಹಾದಿಗಳನ್ನು ದಾಟಿದೆ. ಈಗ ದೇಶದಲ್ಲಿ ಆರ್‌ಎಸ್‌ಎಸ್ ಬಿಟ್ಟು ಚರ್ಚೆ ನಡೆಯಲು ಸಾಧ್ಯವೇ ಇಲ್ಲ’ ಎಂದು ಪ್ರತಿಪಾದಿಸಿದರು.
‘ಧರ್ಮ ಹಾಗೂ ಅಧರ್ಮಗಳ ನಡುವಿನ ಸಂಘರ್ಷದಲ್ಲಿ ಸಾಧಿಸಿದ ಗೆಲುವೇ ವಿಜಯದಶಮಿ. ರಾಮಾಯಣ ಹಾಗೂ ಮಹಾಭಾರತ ಕೂಡ ಧರ್ಮ ಮತ್ತು ಅಧರ್ಮಗಳ ನಡುವಿನ ಸಂಘರ್ಷವನ್ನೇ ಹೇಳಿದೆ. ಭಾರತ ಸಾಕ್ಷಾತ್ ದೇವರು ಅವತಾರ ತಾಳಿದ ದೇವಭೂಮಿಯಾಗಿದೆ’ ಎಂದರು.
ನಗರದ ವಿವಿಧೆಡೆ ಪಥ ಸಂಚಲನ ನಡೆಯಿತು. ಮಾರ್ಗದುದ್ದಕ್ಕೂ ಜನ ಹೂಮಳೆಗೆರೆದು ಸ್ವಾಗತಿಸಿದರು. ಆರ್‌ಎಸ್‌ಎಸ್ ಶತಮಾನೋತ್ಸವ ವರ್ಷವಾದ ಕಾರಣ ಪ್ರತಿವರ್ಷಕ್ಕಿಂತಲೂ ಹೆಚ್ಚಿನ ಗಣವೇಷಧಾರಿಗಳು ಭಾಗಿಯಾಗಿದ್ದರು.
ಕರ್ನಾಟಕ ದಲಿತ ಸಂಘರ್ಷ ಸಮಿತಿ (ಭೀಮವಾದ) ಜಿಲ್ಲಾಧ್ಯಕ್ಷ ಪ್ರಕಾಶ ಹೊಳೆಯಪ್ಪನವರ, ಆರ್‌ಎಸ್‌ಎಸ್ ಉತ್ತರ ಪ್ರಾಂತೀಯ ಸಂಚಾಲಕ ಬಸವರಾಜ ಡಂಬಳ ವೇದಿಕೆ ಮೇಲಿದ್ದರು.
ಬಿಜೆಪಿ ಜಿಲ್ಲಾಧ್ಯಕ್ಷ ಬಸವರಾಜ ದಢೇಸೂಗೂರು, ಪಕ್ಷದ ರಾಜ್ಯ ಕಾರ್ಯಕಾರಿಣಿ ಸದಸ್ಯ ಡಾ. ಬಸವರಾಜ ಕ್ಯಾವಟರ್, ಚಂದ್ರಶೇಖರ ಹಲಗೇರಿ, ರಾಘವೇಂದ್ರ ಪಾನಘಂಟಿ ಸೇರಿದಂತೆ ಅನೇಕರು ಗಣವೇಷಧಾರಿಗಳಾಗಿ ಪಾಲ್ಗೊಂಡಿದ್ದರು. ವಿಧಾನಪರಿಷತ್ ಸದಸ್ಯೆ ಹೇಮಲತಾ ನಾಯಕ ಕಾರ್ಯಕ್ರಮದಲ್ಲಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.