ಗಂಗಾವತಿ: ತಾಲ್ಲೂಕಿನ ಆನೆಗೊಂದಿ ಗ್ರಾಮದ ಚಿಂತಾಮಣಿ ಬಳಿ ತುಂಗಭದ್ರಾ ನದಿ ತೀರದಲ್ಲಿ ಭಾನುವಾರ ಶಾಸಕ ಜಿ. ಜನಾರ್ದನರೆಡ್ಡಿ ಗಂಗಾಮಾತೆಗೆ ವಿಶೇಷ ಪೂಜೆ ಸಲ್ಲಿಸಿದರು. ಇದೇ ವೇಳೆ ಧರ್ಮಸ್ಥಳ ಮಂಜುನಾಥ ಸ್ವಾಮಿಗೆ ಅಭಿಷೇಕ ಮಾಡಲು ಗಂಗಾಜಲ ತೆಗೆದುಕೊಳ್ಳಲಾಯಿತು.
ಬಿಜೆಪಿ ಪಕ್ಷ ಧರ್ಮಸ್ಥಳ ರಕ್ಷಿಸಿ, ಹಿಂದೂ ಧರ್ಮ ಉಳಿಸಿ ಅಭಿಯಾನ ಹಮ್ಮಿಕೊಂಡಿದ್ದು, ಇದರ ಭಾಗವಾಗಿ ಶಾಸಕ ಜನಾರ್ದನರೆಡ್ಡಿ ಧರ್ಮಸ್ಥಳದ ಮೇಲೆ ಹೋರಿಸಲಾದ ಆರೋಪ ಮುಕ್ತವಾಗಲಿ ಎಂದು ನದಿಗೆ ವಿಶೇಷ ಪೂಜೆ ಸಲ್ಲಿಸಿದರು.
ನಂತರ ನೇರವಾಗಿ ಅಂಜನಾದ್ರಿ ಬೆಟ್ಟಕ್ಕೆ ಭೇಟಿ ನೀಡಿ, ಬೆಟ್ಟದ ಕೆಲಭಾಗದಲ್ಲಿನ ಆಂಜನೇಯನ ಪಾದಗಟ್ಟೆಗೆ ವಿಶೇಷ ಪೂಜೆ ಸಲ್ಲಿಸಿದರು.
ನಂತರ ಶಾಸಕ ರೆಡ್ಡಿ ಮಾಧ್ಯಮದವರ ಜೊತೆ ಮಾತನಾಡಿ, ‘ಪವಿತ್ರ ಧರ್ಮಸ್ಥಳದ ವಿರುದ್ಧ ಕೆಲ ಯೂಟ್ಯೂಬ್, ಸಾಮಾಜಿಕ ಜಾಲತಾಣಗಳಿಂದ ಅಪಪ್ರಚಾರವಾಗಿದ್ದು, ಆ ದೇವರುಗಳೇ ತಮ್ಮತನವನ್ನು ಕಾಪಾಡಿಕೊಂಡಿದ್ದಾರೆ. ಧರ್ಮಸ್ಥಳ ಅಪಪ್ರಚಾರ ವಿರುದ್ಧ ಬಿಜೆಪಿ ಧರ್ಮಯುದ್ದ ಆರಂಭಿಸಿದ್ದು, ಬಿಜೆಪಿಯ ಎಲ್ಲ ನಾಯಕರು ಧರ್ಮಸ್ಥಳಕ್ಕೆ ಭೇಟಿ ನೀಡಿ ದರ್ಶನ ಪಡೆಯಲಿದ್ದಾರೆ’ ಎಂದರು.
‘ಕಂಪ್ಲಿ ಸೇತುವೆ ನಿರ್ಮಾಣಕ್ಕೆ ನಾನು ಸಚಿವನಿದ್ದ ಅವಧಿಯಲ್ಲಿ ₹ 70 ಕೋಟಿ ಅನುದಾನ ಬಂದಿತ್ತು. ಕೆಲ ಅಭಿವೃದ್ಧಿ ಕಾರ್ಯಗಳಿಗೆ ಬಳಸಲಾಗಿದೆ. ಈಚೆಗೆ ಸಚಿವ ಸತೀಶ ಜಾರಕಿಹೊಳಿ 3 ತಿಂಗಳಲ್ಲಿ ಸೇತುವೆ ಕಾಮಗಾರಿ ಆರಂಭಿಸುವ ಬಗ್ಗೆ ಭರವಸೆ ನೀಡಿದ್ದು, ಈ ಕೆಲಸವಾಗಲಿದೆ. ಸಚಿವ ತಂಗಡಗಿ ವೇಟೂ ಜಾಸ್ತಿಯಾಗಿದ್ದಾರೆ, ರೇಟೂ ಜಾಸ್ತಿಯಾಗಿದ್ದಾರೆ. ನಾನು ಅವರ ಬಗ್ಗೆ ಮಾತನಾಡಲ್ಲ. ಕಂಪ್ಲಿ ಸೇತುವೆ ಉತ್ತಮ ರೀತಿಯಲ್ಲಿ ಆಗಬೇಕಿದೆ’ ಎಂದರು.
‘ಅಂಜನಾದ್ರಿ ಅಭಿವೃದ್ದಿ ಕುರಿತು ಸಿಎಂ ಸಿದ್ದರಾಮಯ್ಯ ಅವರ ಗಮನಕ್ಕೆ ತಂದಿದ್ದು, ಮುಂದಿನ ದಿನಗಳಲ್ಲಿ ಕೆಲಸ ಆಗಲಿದೆ. ತುಂಗಭದ್ರಾ ಜಲಾಶಯದ ಎಲ್ಲ 33 ಕ್ರಸ್ಟ್ ಗೇಟ್‌ಗಳನ್ನೂ ತೆಗೆದು ನೂತನ ಗೇಟ್ ಅಳವಡಿಸುವ ಬಗ್ಗೆ ಡಿಸಿಎಂ ಭರವಸೆ ನೀಡಿದ್ದಾರೆ’ ಎಂದರು.
‘ಗಂಗಾವತಿ ನಗರದಲ್ಲಿ ಅನ್ನಭಾಗ್ಯ ಅಕ್ಕಿ ವಿದೇಶಕ್ಕೆ ರಫ್ತು ಆಗುತ್ತಿರುವ ದೊಡ್ಡ ಅನಾಹುತ. ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳಲು ಈಗಾಗಲೇ ಸೂಚನೆ ನೀಡಿ, ಗೋಡೌನ್ ಸೀಜ್ ಮಾಡಲು ತಹಶೀಲ್ದಾರರಿಗೆ ಸೂಚಿಸಲಾಗಿದೆ’ ಎಂದರು.
ಕಾಡಾ ಮಾಜಿ ಅಧ್ಯಕ್ಷ ಗಿರೇಗೌಡ, ತಿಪ್ಪೇರುದ್ರಸ್ವಾಮಿ, ನಗರ ಮಂಡಲ ಅಧ್ಯಕ್ಷ ಚಂದ್ರಶೇಖರ ಹೀರೂರು, ಮನೋಹರ ಗೌಡ, ಯಮನೂರ ಚೌಡ್ಕಿ, ನಾಗರಾಜ ಚಳಿಗೇರಿ ಸೇರಿದಂತೆ ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.