ಗಂಗಾವತಿ: ‘ಭಗವಂತನ ಕೃಪೆ ನನ್ನ ಮೇಲೆ ಇರುವವರೆಗೆ ಯಾರು ಎಷ್ಟೇ, ಕುತಂತ್ರಗಳು ಹಣೆದರೂ, ಅದರಿಂದ ವಿಮುಕ್ತಿಯಾಗಿ ಬರುವೆ. ಜನರ ಸೇವೆಯಲ್ಲಿ ಇರಬೇಕು ಎನ್ನುವುದು ನನ್ನ ಆಶಯ’ ಎಂದು ಜನಾರ್ದನ ರೆಡ್ಡಿ ಹೇಳಿದರು.
ತಾಲ್ಲೂಕಿನ ಅಂಜನಾದ್ರಿ ಬೆಟ್ಟಕ್ಕೆ ಸೋಮವಾರ ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಒಂದು ತಿಂಗಳು ಜೈಲುವಾಸ ಅನುಭವಿಸಿ, ಜಾಮೀನು ಪಡೆದು ಇದೇ ಮೊದಲ ಬಾರಿಗೆ ಭೇಟಿ ನೀಡಿ ಆಂಜನೇಯನ ದರ್ಶನ ಪಡೆದು ಅವರು ಮಾತನಾಡಿದರು.
‘ಜೀವನದಲ್ಲಿ ಯಾವಾಗಲೂ ಖುಷಿಯಿಂದಲೇ ಇರಬೇಕು ಎನ್ನುವುದು ತಪ್ಪು. ಆ ಭಗವಂತ ನನ್ನ ಶತ್ರುಗಳು 30 ದಿನ ಖುಷಿಯಾಗಿ ಇರಲಿ ಅಂತ, ನನಗೆ ಶಾಕ್ ನೀಡಿ, ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಶಿಕ್ಷೆಯಾಗುವಂತೆ ಮಾಡಿದ್ದಾನೆ. ಶಿಕ್ಷೆ ಪ್ರಶ್ನಿಸಿ ಮೇಲ್ಮನವಿ ಹೋದ ನಂತರ ಅಕ್ರಮ ಗಣಿಗಾರಿಕೆ ವಿಚಾರದಲ್ಲಿ ಮುಕ್ತಿ ಪಡೆದಿದ್ದೇನೆ. ಈಗ ಲೈಸೆನ್ಸ್ ವಿಚಾರದಲ್ಲಿ ವಿಚಾರಣೆ ನಡಿಯಬೇಕಿದೆ. ನನ್ನ ಮೇಲಿನ ಅಕ್ರಮ ಗಣಿಗಾರಿಕೆ ಪ್ರಕರಣ ಆರೋಪ ಸತ್ಯಕ್ಕೆ ದೂರವಾಗಿದೆ’ ಎಂದು ಹೇಳಿದರು.
‘ಅಭಿಮಾನಿಗಳು ದೈವದತ್ತ ಹೋಗಿ, ಪೂಜೆ ಸಲ್ಲಿಸಿದ್ದು, ಆ ಆಂಜನೇಯ ನನ್ನ ಮೇಲೆ ಕೃಪೆ ತೋರಿ, ಪ್ರಕರಣದ ಜೈಲುವಾಸದ ವಿಚಾರದಲ್ಲಿ ತಡೆಯಾಜ್ಞೆ ನೀಡಿದ್ದಾನೆ. ನ್ಯಾಯ ದೇವತೆ ಮೇಲೆ ನಂಬಿಕೆಯಿದ್ದು, ನಾನು ಎಲ್ಲವುಗಳಿಂದ ವಿಮುಕ್ತಿ ಪಡೆಯುತ್ತೇನೆ. ಹನುಮಂತನ ಸೇವಕನಾಗಿ ಅಂಜನಾದ್ರಿ ಅಭಿವೃದ್ಧಿ ಮಾಡುತ್ತೇನೆ’ ಎಂದರು.
‘ಸಂಡೂರ ಉಪಚುನಾವಣೆಯಲ್ಲೆ ಹೇಳಿದ್ದೆ, ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ದುರಪಯೋಗ ಮಾಡಿ ಸಂಡೂರು ಚುನಾವಣೆ ಮಾಡಿದ್ದಾರೆ. ಇಡಿ ಅವರು ಆಧಾರಗಳಿಲ್ಲದೆ ಯಾರ ಮೇಲೂ ದಾಳಿ ಮಾಡಲ್ಲ. 5 ಮಂದಿ ಶಾಸಕರು, ಸಂಸದರು ರೆಡ್ ಹ್ಯಾಂಡ್ ಆಗಿ ಸಿಕ್ಕಿಕೊಂಡಿದ್ದಾರೆ’ ಎಂದು ಹೇಳಿದರು.
ಬೆಳಿಗ್ಗೆ ಗಂಗಾವತಿ ಜಯನಗರದಲ್ಲಿ ಕೇದಾರ ಪೀಠದ ಭೀಮಾಶಂಕರಲಿಂಗ ಶಿವಾಚಾರ್ಯ ಸ್ವಾಮೀಜಿಗೆ ಪತ್ನಿ ಅರುಣಾಲಕ್ಷ್ಮಿ ಅವರೊಂದಿಗೆ ಭೇಟಿ ಮಾಡಿ, ಆಶೀರ್ವಾದ ಪಡೆದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.