ADVERTISEMENT

ಕಲ್ಯಾಣ ಕರ್ನಾಟಕಕ್ಕೆ ಕೇಂದ್ರ ಸಚಿವ ಸ್ಥಾನ?: ಸಂಗಣ್ಣ ಕರಡಿ ಹೆಸರು ಮುಂಚೂಣಿಗೆ

ಜನರಲ್ಲಿ ನಿರೀಕ್ಷೆ

ಸಿದ್ದನಗೌಡ ಪಾಟೀಲ
Published 30 ಸೆಪ್ಟೆಂಬರ್ 2020, 19:31 IST
Last Updated 30 ಸೆಪ್ಟೆಂಬರ್ 2020, 19:31 IST
ಸಂಗಣ್ಣ ಕರಡಿ
ಸಂಗಣ್ಣ ಕರಡಿ   

ಕೊಪ್ಪಳ: ಕಲ್ಯಾಣ ಕರ್ನಾಟಕ ಭಾಗಕ್ಕೆ ಕೇಂದ್ರ ಸಚಿವ ಸ್ಥಾನ ನೀಡಬೇಕು ಎಂಬ ಬೇಡಿಕೆ ಬಿಜೆಪಿ ವಲಯದಲ್ಲಿ ಕೇಳಿ ಬರುತ್ತಿದೆ. ರೈಲ್ವೆ ಖಾತೆ ರಾಜ್ಯ ಸಚಿವರಾಗಿದ್ದ ಸುರೇಶ ಅಂಗಡಿ ನಿಧನದಿಂದ ತೆರವಾಗಿರುವ ಸಚಿವ ಸ್ಥಾನಕ್ಕೆ ಲಾಬಿ ಕೂಡಾ ಜೋರಾಗಿ ನಡೆದಿದ್ದು, ಇಲ್ಲಿಯ ಸಂಸದ ಸಂಗಣ್ಣ ಕರಡಿ ಹೆಸರು ಮಂಚೂಣಿಯಲ್ಲಿದೆ ಎಂಬ ಮಾತು ಕೇಳಿ ಬರುತ್ತಿದೆ.

ಶೀಘ್ರದಲ್ಲಿಯೇ ಮುಖ್ಯಮಂತ್ರಿ ಯಡಿಯೂರಪ್ಪನವರ ದೆಹಲಿ ಪ್ರವಾಸ ಮಾಡಲಿದ್ದು, ಸಚಿವ ಸಂಪುಟ ವಿಸ್ತರಣೆ ಜೊತೆಗೆ ಈ ವಿಷಯವನ್ನೂ ಪ್ರಸ್ತಾಪ ಮಾಡಲಿದ್ದಾರೆ ಎಂದು ಬಲ್ಲ ಮೂಲಗಳಿಂದ ತಿಳಿದು
ಬಂದಿದೆ.

‘ಬೀದರ್‌ ಲೋಕಸಭಾ ಕ್ಷೇತ್ರದಿಂದ ಭಗವಂತ ಖೂಬಾ ಎರಡು ಬಾರಿ,ರಾಯಚೂರು ಕ್ಷೇತ್ರದಿಂದ ರಾಜಾ ಅಮರೇಶ್ವರ ನಾಯಕ, ಬಳ್ಳಾರಿಯ ದೇವೇಂದ್ರಪ್ಪ, ಕಲಬುರ್ಗಿಯ ಡಾ.ಉಮೇಶ ಜಾಧವ ಪ್ರಥಮ ಬಾರಿ ಚುನಾಯಿತರಾಗಿದ್ದಾರೆ. ನಾಲ್ಕು ಬಾರಿ ಶಾಸಕರಾಗಿದ್ದ, ಎರಡು ಬಾರಿ ಸಂಸದರಾದ ಸಂಗಣ್ಣ ಕರಡಿ ಅವರಿಗೆ ಸಚಿವ ಸ್ಥಾನ ನೀಡಬೇಕು ಎಂಬ ಒತ್ತಾಯವಿದೆ.ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ನಳೀನ್‌ಕುಮಾರ್ ಕಟೀಲ್‌ ಅವರಿಗೂ ಸಂಗಣ್ಣ ಅತ್ಯಂತ ಆಪ್ತರಾಗಿದ್ದಾರೆ’ ಎನ್ನುತ್ತಾರೆ ಕರಡಿ ಅವರ
ಆಪ್ತರೊಬ್ಬರು.

ADVERTISEMENT

ಕರಡಿ ಅವರು ನಾಲ್ಕು ಬಾರಿ ಶಾಸಕರಾಗಿದ್ದರೂ ಒಮ್ಮೆಯೂ ರಾಜ್ಯ ಸರ್ಕಾರದಲ್ಲಿ ಮಂತ್ರಿಯಾಗುವ ಭಾಗ್ಯ ಬರಲಿಲ್ಲ. ಈಗ ಕೇಂದ್ರ ಸಚಿವ ಸ್ಥಾನದ ನಿರೀಕ್ಷೆಯಲ್ಲಿ ಪಕ್ಷದ ಕಾರ್ಯಕರ್ತರು ಸೇರಿದಂತೆ ಮುಖಂಡರೂ ಹೊಂದಿದ್ದಾರೆ.

ಸಂಘ ಪರಿವಾರದ ಬೆಂಬಲ ಇನ್ನೂ ದೊರೆಯಬೇಕಿದೆ.ಪಂಚಮಸಾಲಿ ಪೀಠಗಳು ಸಮಾಜಕ್ಕೆ ಸಚಿವ ಸ್ಥಾನ ನೀಡಬೇಕು ಎಂಬ ಮನವಿಯ ಕಾರಣ ಸಂಗಣ್ಣ ಕರಡಿ ಅವರಿಗೆ ಕೇಂದ್ರ ಸಚಿವ ಸ್ಥಾನ ಒಲಿದು ಬರಲಿದೆ ಎಂಬ ಮಾತು ಕೇಳಿ
ಬರುತ್ತಿದೆ.

ಮಾನದಂಡ: ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದಲ್ಲಿ ಕಲ್ಯಾಣ ಕರ್ನಾಟಕದವರು ಇಲ್ಲಿಯವರು ಒಬ್ಬರೂ ಮಂತ್ರಿಯಾಗಿಲ್ಲ. ಎಂಟು ಬಾರಿ ಗೆಲುವು ಸಾಧಿಸಿದ್ದ ಬೀದರ್‌ನ ರಾಮಚಂದ್ರ ವೀರಪ್ಪನವರಿಗೆ ವಯಸ್ಸಿನ ಕಾರಣದಿಂದ ಸಚಿವ ಸ್ಥಾನ ದೊರೆತಿರಲಿಲ್ಲ. ಈಗ ಲಿಂಗಾಯತ ಸಮಾಜದವರಿಗೆ ನೀಡಬೇಕು ಎಂಬ ಬೇಡಿಕೆ ಕಾರಣ ಸಂಗಣ್ಣ ಕರಡಿ ಕೇಂದ್ರ ಸರ್ಕಾರದಲ್ಲಿ ಸಚಿವ ಸ್ಥಾನ ಪಡೆಯಲಿದ್ದಾರೆ ಎಂದು ಅವರ ಬೆಂಗಲಿಗರು ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.