ADVERTISEMENT

ಕೊಪ್ಪಳ: ಬಡ್ತಿಯಲ್ಲಿ ಅನ್ಯಾಯ; ಸರಿಪಡಿಸಲು ಆಗ್ರಹ

371ಜೆ ಅಡಿಯಲ್ಲಿ ವಿಶೇಷ ಸೌಲಭ್ಯ ಸಿಕ್ಕರೂ ಸರ್ಕಾರಿ ನೌಕರರಿಗೆ ಸಿಗದ ನ್ಯಾಯ

​ಪ್ರಜಾವಾಣಿ ವಾರ್ತೆ
Published 8 ಡಿಸೆಂಬರ್ 2025, 5:48 IST
Last Updated 8 ಡಿಸೆಂಬರ್ 2025, 5:48 IST
ಕೊಪ್ಪಳದಲ್ಲಿ ಭಾನುವಾರ ನಡೆದ ಸಭೆಯಲ್ಲಿ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷರೂ ಆದ 371 ಜೆ ಸಂಚಾಲಕ ನಾಗರಾಜ ಜುಮ್ಮನ್ನವರ ಮಾತನಾಡಿದರು
ಕೊಪ್ಪಳದಲ್ಲಿ ಭಾನುವಾರ ನಡೆದ ಸಭೆಯಲ್ಲಿ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷರೂ ಆದ 371 ಜೆ ಸಂಚಾಲಕ ನಾಗರಾಜ ಜುಮ್ಮನ್ನವರ ಮಾತನಾಡಿದರು   

ಕೊಪ್ಪಳ: ‘ವಿಶೇಷ ಸೌಲಭ್ಯ ಕಲ್ಪಿಸಿದ ನಂತರ ಕಲ್ಯಾಣ ಕರ್ನಾಟಕ ಭಾಗದ ನೌಕರರಿಗೆ ಪದೋನ್ನತಿ ನೀಡುವಾಗ ಜೇಷ್ಠತೆಯಲ್ಲಿ ಹಿರಿಯರಿದ್ದರೂ ಪದೋನ್ನತಿಯಿಂದ ವಂಚಿತರಾಗುತ್ತಿದ್ದಾರೆ. ಜೇಷ್ಠತೆಯಲ್ಲಿ ಕಿರಿಯರಿದ್ದರೂ ಕಲ್ಯಾಣ ಕರ್ನಾಟಕದ ಹೊರಗಿನ ನೌಕರರಿಗೆ ಪದೋನ್ನತಿ ನೀಡಲಾಗುತ್ತಿದೆ. ಹಿರಿಯ ನೌಕರರು ಕಿರಿಯ ನೌಕರರ ಕೆಳಗಡೆ ಕಾರ್ಯನಿರ್ವಹಿಸುವ ಅನಿವಾರ್ಯತೆ ಉಂಟಾಗುತ್ತಿದೆ’ ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷರೂ ಆದ 371 (ಜೆ) ಸಂಚಾಲಕ ನಾಗರಾಜ ಜುಮ್ಮನ್ನವರ ಬೇಸರ ವ್ಯಕ್ತಪಡಿಸಿದರು.

ಕಲ್ಯಾಣ ಕರ್ನಾಟಕ ಭಾಗಕ್ಕೆ ಸಂವಿಧಾನದ ಅನುಚ್ಛೇದ 371 (ಜೆ) ಅಡಿಯಲ್ಲಿ ವಿಶೇಷ ಸೌಲಭ್ಯ ಒದಗಿಸಲಾಗಿದ್ದು, ನೌಕರರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಚರ್ಚಿಸಲು ನಗರದಲ್ಲಿ ಭಾನುವಾರ ನಡೆದ ಸಭೆಯಲ್ಲಿ ಮಾತನಾಡಿದ ಅವರು ‘371 ಜೆ ಕಾನೂನಿಗೆ ಸೂಕ್ತ ತಿದ್ದುಪಡಿ ತಂದು ಕಲ್ಯಾಣ ಕರ್ನಾಟಕ ಭಾಗದ ನೌಕರರಿಗೆ ನ್ಯಾಯ ಒದಗಿಸಬೇಕು’ ಎಂದು ಆಗ್ರಹಿಸಿದರು.

ಕಲ್ಯಾಣ ಕರ್ನಾಟಕ ಭಾಗದ ಜಿಲ್ಲಾಧ್ಯಕ್ಷರು, ಪದೋನ್ನತಿ ವಂಚಿತ ನೌಕರರು ಸವಿಸ್ತಾರವಾಗಿ ವಿಷಯವನ್ನು ಸಭೆಯಲ್ಲಿ ಮಂಡಿಸಿದರು. ಸಭೆಯಲ್ಲಿ ಸುದೀರ್ಘವಾಗಿ ಚರ್ಚಿಸಿ ಮುಂದಿನ ದಿನಗಳಲ್ಲಿ ಸರ್ಕಾರದ ಗಮನಕ್ಕೆ ತಂದು ಸಮಸ್ಯೆ ಇತ್ಯರ್ಥಪಡಿಸಿಕೊಳ್ಳಲು ತೀರ್ಮಾನಿಸಲಾಯಿತು. ಮುಂದಿನ ಸಭೆಯನ್ನು 2026ರ ಜನವರಿಯಲ್ಲಿ ರಾಯಚೂರಿನಲ್ಲಿ ನಡೆಸಲು ನಿರ್ಧರಿಸಲಾಯಿತು.

ADVERTISEMENT

ಸಭೆಯಲ್ಲಿ ಸರ್ಕಾರಿ ನೌಕರರ ಸಂಘದ ವಿವಿಧ ಜಿಲ್ಲೆಗಳ ಅಧ್ಯಕ್ಷರಾದ ಸೋಮಶೇಖರ ಚಿದ್ರಿ (ಬೀದರ), ಕೃಷ್ಣ (ರಾಯಚೂರು), ಎಂ.ಎ. ಆಸೀಫ್‌ (ಬಳ್ಳಾರಿ), ಮಲ್ಲಿಕಾರ್ಜುನಗೌಡ (ವಿಜಯನಗರ), ಚಂದ್ರಕಾಂತ ಏರಿ (ಕಲಬುರಗಿ), ಯಾದಗಿರಿ ಪದಾಧಿಕಾರಿ ರಾಜಶೇಖರಗೌಡ, ಕಲಬುರಗಿ ವಿಭಾಗದ ಉಪಾಧ್ಯಕ್ಷ ನಿಜಲಿಂಗಪ್ಪ ಕೊರ್ಲಳ್ಳಿ, ಜಿಲ್ಲಾ ಸಂಘದ ಕಾರ್ಯದರ್ಶಿ ಶಿವಪ್ಪ ಜೋಗಿ, ರಾಜ್ಯ ಪರಿಷತ್ ಸದಸ್ಯ ಮಹಮ್ಮದ್ ಆಸೀಫ್‌ ಅಲಿ, ಗೌರವಾಧ್ಯಕ್ಷ ಸಿದ್ದಪ್ಪ ಮೇಳಿ, ಖಜಾಂಚಿ ಜಯತೀರ್ಥ ದೇಸಾಯಿ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.

2026ರ ರಾಯಚೂರಿನಲ್ಲಿ ಮುಂದಿನ ಸಭೆ | ಕಲ್ಯಾಣ ಕರ್ನಾಟಕ ವ್ಯಾಪ್ತಿಯ ಜಿಲ್ಲಾಧ್ಯಕ್ಷರು ಸಭೆಯಲ್ಲಿ ಭಾಗಿ | ಸಮಸ್ಯೆ ಸರ್ಕಾರದ ಗಮನಕ್ಕೆ ತರಲು ನಿರ್ಧಾರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.