ADVERTISEMENT

ಕನಕದಾಸರ ಮೂರ್ತಿ ಭಗ್ನ ಪ್ರಕರಣ: ಸಚಿವ ಶಿವರಾಜ ತಂಗಡಗಿ ಭೇಟಿ, ಪರಿಶೀಲನೆ

​ಪ್ರಜಾವಾಣಿ ವಾರ್ತೆ
Published 6 ಜುಲೈ 2025, 6:32 IST
Last Updated 6 ಜುಲೈ 2025, 6:32 IST
ಕಾರಟಗಿ ತಾಲ್ಲೂಕಿನ ಬೇವಿನಾಳಲ್ಲಿ ಕನಕದಾಸ ಮೂರ್ತಿ ಭಗ್ನಗೊಳಿಸಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಶನಿವಾರ ಭೇಟಿ ನೀಡಿ ಪರಿಶೀಲಿಸಿದರು
ಕಾರಟಗಿ ತಾಲ್ಲೂಕಿನ ಬೇವಿನಾಳಲ್ಲಿ ಕನಕದಾಸ ಮೂರ್ತಿ ಭಗ್ನಗೊಳಿಸಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಶನಿವಾರ ಭೇಟಿ ನೀಡಿ ಪರಿಶೀಲಿಸಿದರು   

ಕಾರಟಗಿ: ತಾಲ್ಲೂಕಿನ ಬೇವಿನಾಳ ಗ್ರಾಮದಲ್ಲಿ ಕನಕದಾಸರ ಮೂರ್ತಿಯನ್ನು ಜೂನ್‌ 24ರಂದು ಭಗ್ನಗೊಳಿಸಿದ್ದು, ಸ್ಥಳಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಶನಿವಾರ ಭೇಟಿ ನೀಡಿ ಪರಿಶೀಲಿಸಿದರು.

ಘಟನೆ ಬಗ್ಗೆ ವಿಷಾದ ವ್ಯಕ್ತಪಡಿಸಿದ ಸಚಿವರು, 'ಈಗಾಗಲೇ ಆರೋಪಿಗಳ ಬಂಧನಕ್ಕೆ ಕ್ರಮಕೈಗೊಳ್ಳಬೇಕು ಎಂದು ಪೊಲೀಸರಿಗೆ ಸೂಚಿಸಲಾಗಿದೆ. ಸಿಸಿ ಕ್ಯಾಮರಾ ಇಲ್ಲದಿರುವುದರಿಂದ ಮೊಬೈಲ್‌ ಕರೆಗಳನ್ನು ಅವಲೋಕಿಸಲು ಅಧಿಕಾರಿಗಳು ಮುಂದಾಗಿದ್ದಾರೆ. ದುಷ್ಕರ್ಮಿಗಳು ಯಾರೇ ಆಗಿದ್ದರೂ ಕಠಿಣ ಕ್ರಮ ನಿಶ್ಚಿತ. ಈ ವಿಷಯದಲ್ಲಿ ಗ್ರಾಮಸ್ಥರು ಹಸ್ತಕ್ಷೇಪ ಮಾಡಬಾರದು’ ಎಂದು ಹೇಳಿದರು.

ಸಮಾಜದವರೊಂದಿಗೆ ನಾನಿದ್ದು ಸಮಾಲೋಚನೆ ನಡೆಸಿ, ಕಲ್ಲಿನ ಅಥವಾ ಫೈಬರ್‌ನ ಕನಕದಾಸರ ಮೂರ್ತಿಯನ್ನು ಶೀಘ್ರದಲ್ಲೇ ಮರು ಸ್ಥಾಪಿಸಲಾಗುವುದು. ಬಿಡದಿ ಬಳಿ ಫೈಬರ್‌ ಮೂರ್ತಿ ನಿರ್ಮಿಸುತ್ತಿದ್ದಾರೆ. ಆಯುಷ್ಯವೂ ಜಾಸ್ತಿ ಎಂದು ಕೇಳಿದ್ದೇನೆ. ಸಮಾಜದವರ ಅಭಿಪ್ರಾಯದಂತೆ ನಿರ್ಧಾರ ಕೈಗೊಳ್ಳಲಾಗುವುದು’ ಎಂದು ಸಚಿವರು ಹೇಳಿದರು. ವಿವಿಧ ಘಟಕಗಳ ಮುಖ್ಯಸ್ಥರು, ಅನೇಕ ಪ್ರಮುಖರು ಉಪಸ್ಥಿತರಿದ್ದರು.

ADVERTISEMENT

ಅಕ್ರಮ ಚಟುವಟಿಕೆಗಳಿಗೆ ಸಂಪೂರ್ಣ ಕಡಿವಾಣ: ಕ್ಷೇತ್ರದಲ್ಲಿ ಅಕ್ರಮ ಚಟುವಟಿಕೆಗಳು ನಡೆಯುತ್ತಿರುವುದಕ್ಕೆ ಹಿಂದೆ ಆಡಳಿತ ನಡೆಸಿದ ಬಿಜೆಪಿಯವರೇ ಕಾರಣ. ಹಿಂದಿನ ನನ್ನ 10 ವರ್ಷದ ಅಧಿಕಾರಾವಧಿಯಲ್ಲಿ ಅಕ್ರಮ ಚಟುವಟಿಕೆಗಳಿಗೆ ಆಸ್ಪದ ನೀಡಿರಲಿಲ್ಲ. ಅಕ್ರಮ ಚಟುವಟಿಕೆಗಳನ್ನು ಆರಂಭಿಸಿದವರೇ ಈಗ ನಮ್ಮ ಮೇಲೆ ಗೂಬೆ ಕೂರಿಸುತ್ತಿದ್ದಾರೆ. ಅಕ್ರಮಗಳಿಗೆಲ್ಲ ಸಂಪೂರ್ಣ ಕಡಿವಾಣ ಹಾಕಲು ಈಗಾಗಲೇ ಅಧಿಕಾರಿಗಳಿಗೆ ಸೂಚಿಸಲಾಗಿದೆ’ ಎಂದು ಸಚಿವ ಶಿವರಾಜ ತಂಗಡಗಿ ಅವರು ಮಾಜಿ ಶಾಸಕ ಬಸವರಾಜ ದಢೇಸೂಗೂರು ಆರೋಪಕ್ಕೆ ಪರೋಕ್ಷವಾಗಿ ತಿರುಗೇಟು ನೀಡಿದರು.

ಮೈಲಾಪುರ ಪಿಡಿಒ ಲಂಚಕ್ಕೆ ಬೇಡಿಕೆ ಇಟ್ಟ ವಿಷಯ ಗಮನಿಸಿದ್ದೇನೆ. ಜಿ.ಪಂ ಸಿಇಒ ಅವರೊಂದಿಗೆ ಪರಿಶೀಲಿಸಿ, ಅಗತ್ಯ ಕ್ರಮ ಕೈಗೊಳ್ಳಲು ಸೂಚಿಸಿದ್ದೇನೆ. ಪಟ್ಟಣದಲ್ಲಿ ಕಳ್ಳತನದ ಪ್ರಕರಣಗಳು ಹೆಚ್ಚುತ್ತಿದ್ದು, ಎಲ್ಲೆಡೆ ಸಿಸಿ ಕ್ಯಾಮೆರಾ ಅಳವಡಿಸಿ, ಗಸ್ತು ಹೆಚ್ಚಿಸಿ ಕ್ರಮಕ್ಕೆ ಮುಂದಾಗಬೇಕು ಎಂದು ಸಂಬಂಧಿಸಿದವರಿಗೆ ಸೂಚಿಸಿರುವೆ ಎಂದು ಹೇಳಿದರು.

‘ಬಿಜೆಪಿಯವರಿಗೆ ಸಂಸ್ಕಾರ, ಸಂಸ್ಕೃತಿಯೇ ಇಲ್ಲ. ರವಿಕುಮಾರ, ಮುಖ್ಯ ಕಾರ್ಯಕಾದರ್ಶಿಯ ಬಗ್ಗೆ, ಸಿ.ಟಿ. ರವಿ, ಲಕ್ಷ್ಮೀ ಹೆಬ್ಬಾಳ್ಕರ ಬಗ್ಗೆ ಮಾತನಾಡಿರುವುದನ್ನು ನೋಡಿದರೆ ಆರ್‌ಎಸ್‌ಎಸ್‌ನಲ್ಲಿ ಇಂಥಹದರ ಬಗ್ಗೆ ತರಬೇತಿ ನೀಡಲಾಗುತ್ತಿದೆಯೇ ಎಂದು ಪ್ರಶ್ನಿಸಿದರು. ರವಿಕುಮಾರ ತಪ್ಪನ್ನು ನಾರಾಯಣಸ್ವಾಮಿ ಛಲವಾದಿಯಂತವರು ಸಮರ್ಥಿಸಿಕೊಳ್ಳುವುದನ್ನು ಬಿಟ್ಟು, ತಪ್ಪನ್ನು ಒಪ್ಪಿಕೊಳ್ಳಲಿ. ಮುಖ್ಯಮಂತ್ರಿಗಳ ಬೆಳಗಾವಿ ಕಾರ್ಯಕ್ರಮದಲ್ಲಿ ನಾನೂ ಉಪಸ್ಥಿತನಿದ್ದೆ, ಕಾರ್ಯನಿರ್ವಹಣೆಯ ಬಗ್ಗೆ ರೇಗಿ ಒಂದು ಮಾತು ಆಡಿದರು. ಬಿಜೆಪಿಯವರಂತೆ ಅಸಂಬದ್ಧವಾಗಿ ಮಾತನಾಡಲಿಲ್ಲವಲ್ಲ ಎಂದು ತಂಗಡಗಿ ಹೇಳಿದರು.

==

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.