ADVERTISEMENT

ಅಭಿವೃದ್ಧಿ ಕೆಲಸಗಳಲ್ಲಿ ಪಕ್ಷ ರಾಜಕಾರಣ ಬೇಡ

ಕನಕಗಿರಿ: ಪಟ್ಟಣ ಪಂಚಾಯಿತಿ ನೂತನ ಅಧ್ಯಕ್ಷ–ಉಪಾಧ್ಯಕ್ಷರ ಪದಗ್ರಹಣ

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2024, 14:25 IST
Last Updated 8 ಅಕ್ಟೋಬರ್ 2024, 14:25 IST
ಕನಕಗಿರಿಯ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಹುಸೇನಬೀ ಚಳ್ಳಮರದ ಹಾಗೂ ಉಪಾಧ್ಯಕ್ಷ ಕಂಠಿರಂಗ ನಾಯಕ ಅವರನ್ನು ಸನ್ಮಾನಿಸಲಾಯಿತು
ಕನಕಗಿರಿಯ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಹುಸೇನಬೀ ಚಳ್ಳಮರದ ಹಾಗೂ ಉಪಾಧ್ಯಕ್ಷ ಕಂಠಿರಂಗ ನಾಯಕ ಅವರನ್ನು ಸನ್ಮಾನಿಸಲಾಯಿತು   

ಕನಕಗಿರಿ: ‘ಪಟ್ಟಣದ ಅಭಿವೃದ್ಧಿಗೆ ಪಕ್ಷ ಭೇದ ಮರೆತು ಒಂದಾಗಿ‌ ಕೆಲಸ ಮಾಡುವುದು ಅಗತ್ಯವಿದೆ’ ಎಂದು ಕಾಂಗ್ರೆಸ್, ಬಿಜೆಪಿ ಮುಖಂಡರು ಸಲಹೆ ನೀಡಿದರು.

ಇಲ್ಲಿನ ಪಟ್ಟಣ ಪಂಚಾಯಿತಿಯ ನೂತನ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಅಧಿಕಾರ ಪದಗ್ರಹಣ ಕಾರ್ಯಕ್ರಮದಲ್ಲಿ
ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಕೆ. ಗಂಗಾಧರಸ್ವಾಮಿ, ಕೃಷಿ ಪ್ರಾಥಮಿಕ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಬಿ. ಕನಕಪ್ಪ, ಪ್ರಮುಖರಾದ ಸಿದ್ದಪ್ಪ ನೀರ್ಲೂಟಿ, ಸಣ್ಣ ಕನಕಪ್ಪ, ಪಟ್ಟಣ ಪಂಚಾಯಿತಿ ಸದಸ್ಯ ನೂರುಸಾಬ ಗಡ್ಡಿಗಾಲ ಮಾತನಾಡಿದರು.

‘ಅಧಿಕಾರ ಶಾಶ್ವತವಲ್ಲ, ಅಧಿಕಾರವಿದ್ದಾಗ ಮಾಡುವ ಅಭಿವೃದ್ಧಿ ಮಾಡುವುದು ಮುಖ್ಯ. ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಮಧ್ಯೆ ಸಮನ್ವಯತೆ ಇದ್ದಾಗ ಮಾತ್ರ ಅಭಿವೃದ್ಧಿ ಕೆಲಸಗಳಿಗೆ ವೇಗ ಸಿಗುತ್ತದೆ. ಪಟ್ಟಣದ ಅಭಿವೃದ್ಧಿ ವಿಷಯದಲ್ಲಿ ಪಕ್ಷ
ರಾಜಕಾರಣ ಮಾಡುವುದು ಸರಿಯಲ್ಲ’ ಎಂದರು.

ADVERTISEMENT

ಗಂಗಾಧರಸ್ವಾಮಿ ಮಾತನಾಡಿ, ‘ಪಟ್ಟಣದಲ್ಲಿ ಸಾಕಷ್ಟು‌ ಜನ ವಸತಿ‌ ರಹಿತ ಹಾಗೂ ನಿವೇಶನ ರಹಿತ ಜನರಿದ್ದಾರೆ ಅಂಥವರನ್ನು ಗುರುತಿಸಿ ಸೌಲಭ್ಯ ಕಲ್ಪಿಸಬೇಕು’ ಎಂದು ಹೇಳಿದರು.

ತಹಶೀಲ್ದಾರ್ ವಿಶ್ವನಾಥ ಮುರುಡಿ ಮಾತನಾಡಿ, ‘ಅಭಿವೃದ್ಧಿ ವಿಷಯದಲ್ಲಿ ಸಾರ್ವಜನಿಕರ ಪಾತ್ರ ಮುಖ್ಯವಾಗಿದ್ದು ಪ್ರತಿಯೊಬ್ಬರೂ ಸಹಕಾರ ನೀಡಬೇಕು’ ಎಂದು ತಿಳಿಸಿದರು.

ಪಟ್ಟಣ‌ ಪಂಚಾಯಿತಿ ಸದಸ್ಯ ಅನಿಲಕುಮಾರ ಬಿಜ್ಜಳ ಮಾತನಾಡಿ, ‘ಮಹರ್ಷಿ ವಾಲ್ಮೀಕಿ ವೃತ್ತದಲ್ಲಿ ರಸ್ತೆ ವಿಸ್ತರಣೆ ಅವಶ್ಯಕತೆ ಇದೆ’ ಎಂದು ತಿಳಿಸಿದರು.

ಮುಖ್ಯಾಧಿಕಾರಿ ದತ್ತಾತ್ರೇಯ ಹೆಗ್ಡೆ ಮಾತನಾಡಿ, ‘ಸ್ವಚ್ಛತೆ, ಕುಡಿಯುವ ನೀರು, ಬೀದಿ ದೀಪ, ವಸತಿ ಸೌಲಭ್ಯಕ್ಕೆ ಆದ್ಯತೆ‌ ನೀಡಲಾಗಿದೆ’ ಎಂದರು.

ಅಧ್ಯಕ್ಷೆ‌ ಹುಸೇನಬೀ ಚಳ್ಳಮರದ, ಉಪಾಧ್ಯಕ್ಷ ಕಂಠಿರಂಗ ನಾಯಕ ಅವರನ್ನು ವಿವಿಧ ಪಕ್ಷದ ಮುಖಂಡರು, ಅಭಿಮಾನಿಗಳು ಸನ್ಮಾನಿಸಿದರು.

ಶಿಶು ಅಭಿವೃದ್ಧಿ ಯೋಜನಾಧಿಕಾರಿ ವಿರುಪಾಕ್ಷಿ, ಪಟ್ಟಣ ಸದಸ್ಯರಾದ ಸುರೇಶ ಗುಗ್ಗಳಶೆಟ್ರ, ಸಂಗಪ್ಪ ಸಜ್ಜನ್, ಹನುಮಂತಪ್ಪ ಬಸರಿಗಿಡದ, ರಾಜಾಸಾಬ್ ನಂದಾಪುರ, ತನುಶ್ರೀ ರಾಮಚಂದ್ರ,‌ ಶರಣೆಗೌಡ ಪಾಟೀಲ, ರಾಕೇಶ‌ ಕಂಪ್ಲಿ, ನಂದಿನಿ ಓಣಿಮನಿ, ಶೇಷಪ್ಪ ಪೂಜಾರ, ಬಸಮ್ಮ‌ ಕುರುಗೋಡ, ಸೈನಾಜ್ ಬೇಗ್ಂ, ಹುಸೇನಬೀ ಸಂತ್ರಾಸ್, ಶಿಕ್ಷಕ‌ ಮೌನೇಶ ಬಡಿಗೇರ ಸೇರಿದಂತೆ ಪಟ್ಟಣ ಪಂಚಾಯಿತಿ ಸದಸ್ಯರು, ನಗರ ಅಶ್ರಯ ಸಮಿತಿ ಸದಸ್ಯರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.