ಕನಕಗಿರಿ: 1978ರಲ್ಲಿಯೇ ವಿಧಾನಸಭಾ ಕ್ಷೇತ್ರವಾದ ಕನಕಗಿರಿಯಲ್ಲಿ ವೃತ್ತಿಯಾಧಾರಿತ ಎಂಜಿನಿಯರ್, ಡಿಪ್ಲೊಮೊ, ಬಿ.ಇಡಿ ಹಾಗೂ ಬಿಪಿಇಡಿ ನಂತಹ ವೃತ್ತಿಯಾಧಾರಿತ ಕಾಲೇಜುಗಳ ಕೊರತೆ ಎದ್ದು ಕಾಣುತ್ತಿವೆ. ಈವರೆಗೆ ಹತ್ತಾರು ಜನ ಶಾಸಕರು, ಸಚಿವರು ಆಡಳಿತ ನಡೆಸಿದರೂ ಕಾಲೇಜು ಮಂಜೂರಾತಿಗೆ ಹೆಚ್ಚಿನ ಒಲವು ತೋರಿಲ್ಲ ಎನ್ನುವುದು ಸ್ಥಳೀಯರ ಆರೋಪ.
ಇತ್ತೀಚಿನ ವರ್ಷಗಳಲ್ಲಿ ಪಾಲಕರಲ್ಲಿ ಶೈಕ್ಷಣಿಕ ಜಾಗೃತಿ ಹೆಚ್ಚಿದ್ದು, ಬಡವರು ಸಹ ಕಾನ್ವೆಂಟ್ ಶಾಲೆಗಳಿಗೆ ಮೊರೆ ಹೋಗಿದ್ದಾರೆ. ಇಲ್ಲಿನ ಧನಿಕರು, ಉದ್ಯಮಿಗಳು ತಮ್ಮ ವ್ಯಾಪಾರ ವಹಿವಾಟುಗಳ ಬೆಳವಣಿಗೆಗೆ ಆದ್ಯತೆ ನೀಡಿದರೆ ವಿನಃ ಶಿಕ್ಷಣ ಸಂಸ್ಥೆಗಳನ್ನು ಹುಟ್ಟು ಹಾಕಲು ಗಮನ ಹರಿಸಲಿಲ್ಲ. ಹೀಗಾಗಿ ಬಹುತೇಕರು ಗಂಗಾವತಿಯ ಶಿಕ್ಷಣ ಸಂಸ್ಥೆಗಳನ್ನು ನೆಚ್ಚಿಕೊಂಡಿದ್ದಾರೆ ಎಂದು ಶಿಕ್ಷಣ ಪ್ರೇಮಿ ಕನಕರೆಡ್ಡಿಕೆರಿ, ಪಾಮಣ್ಣ ಅರಳಿಗನೂರು.
ಗಂಗಾವತಿಯಲ್ಲಿರುವ ಪ್ರತಿಯೊಂದು ಪ್ರತಿಷ್ಠಿತ ಕಾನ್ವೆಂಟ್ ಶಾಲೆಗಳಲ್ಲಿ ಇಲ್ಲಿನ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ದಾಖಲಾತಿ ಪಡೆದುಕೊಂಡಿದ್ದಾರೆ. ವೃತ್ತಿಯಾಧಾರಿತ ಕಾಲೇಜು ಶಿಕ್ಷಣಕ್ಕಾಗಿ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಬೆಂಗಳೂರು, ಮೂಡಬಿದರಿ, ಮಂಗಳೂರು, ದಾವಣಗೆರೆ, ಗದಗ, ಹುಬ್ಬಳ್ಳಿ-ಧಾರವಾಡ ಇತರೆ ದೂರದ ನಗರಗಳಿಗೆ ಹೋಗುತ್ತಿದ್ದಾರೆ.
ಕೌಶಲ ಹಾಗೂ ವೃತ್ತಿಯಾಧಾರಿತ ಶಿಕ್ಷಣವು ಇಂದಿನ ಅಗತ್ಯವಾಗಿದ್ದು, ತಾಲ್ಲೂಕಿನಲ್ಲಿ ಸರ್ಕಾರಿ ಮೆಡಿಕಲ್, ಎಂಜಿನಿಯರಿಂಗ್, ಪಾಲಿಟೆಕ್ನಿಕ್ ಮೊದಲಾದ ಕಾಲೇಜುಗಳು ಇಲ್ಲದ ಕಾರಣ, ವಿದ್ಯಾರ್ಥಿಗಳು ಕಲಾ ವಿಭಾಗಕ್ಕೆ ಸೇರಿಕೊಳ್ಳುತ್ತಿದ್ದಾರೆ. ಸ್ಥಳೀಯ ಮಟ್ಟದಲ್ಲಿ ಡಿಪ್ಲೊಮಾ ಕಾಲೇಜು ಇದ್ದರೆ ಬಡವರಿಗೆ ಅನುಕೂಲವಾಗುತ್ತಿತ್ತು ಎನ್ನುತ್ತಾರೆ ಸ್ಥಳೀಯರು.
ಮಾಜಿ ಶಾಸಕ ವೀರಪ್ಪ ಕೇಸರಹಟ್ಡಿ ಅವರ ಶ್ರಮದಿಂದ 2007ರಲ್ಲಿ ಪಟ್ಟಣದಲ್ಲಿ ಪ್ರಥಮ ದರ್ಜೆ ಕಾಲೇಜು ಆರಂಭಗೊಂಡಿದ್ದರಿಂದ ಸಾವಿರಾರು ಜನ ಪದವೀಧರರು ಹೊರ ಬಂದಿದ್ದಾರೆ. ಇದರಲ್ಲಿ ಬಹುತೇಕರು ಬಿ.ಇಡಿ ಶಿಕ್ಷಣಕ್ಕಾಗಿ ದೂರದ ಸ್ಥಳಗಳಿಗೆ ತೆರಳಬೇಕಾಗಿದೆ.
ವಿದ್ಯಾರ್ಥಿಗಳು ಕೌಶಲಧಾರಿತ ಹಾಗೂ ವೃತ್ತಿಪರ ಶಿಕ್ಷಣ ಪೂರೈಸಿದರೆ ಸರ್ಕಾರಿ ಅಥವಾ ಖಾಸಗಿ ಕಂಪನಿಗಳಲ್ಲಿ ಸುಲಭವಾಗಿ ಉದ್ಯೋಗ ದೊರೆಯುತ್ತದೆ. ಉದ್ಯೋಗ ದೊರೆಯದಿದ್ದರೂ ಸ್ವಯಂ ಉದ್ಯೋಗ ಕೈಗೊಳ್ಳಲು ಆ ಶಿಕ್ಷಣ ನೆರವಾಗುತ್ತದೆ. ಆದ್ದರಿಂದ ಪಟ್ಟಣದಲ್ಲಿ ವೃತ್ತಿಯಾಧಾರಿಕ ಕಾಲೇಜುಗಳನ್ನು ತೆರೆಯಲು ಸರ್ಕಾರ ಕ್ರಮವಹಿಸಬೇಕು ಎಂದು ರವಿ ಬಲಿಜ,ಅಂಬರೇಶ ಪಟ್ಟಣ ಶೆಟ್ರ, ನಿಂಗಪ್ಪ ಪೂಜಾರ ಆಗ್ರಹಿಸಿದ್ದಾರೆ.
ಪಟ್ಟಣದಲ್ಲಿ ಕಳೆದ ದಶಕದಿಂದಲೂ ಸರ್ಕಾರಿ ಐಟಿಐ ಕಾಲೇಜಿದ್ದು, ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಕಾಲೇಜಿಗೆ ಸ್ವಂತ ಕಟ್ಟಡ ನಿರ್ಮಾಣಕ್ಕೆ ಸಚಿವ ಶಿವರಾಜ ತಂಗಡಗಿ ಅವರು ಅನುದಾನ ನೀಡಿದರೂ ಕೆಲಸ ಆರಂಭಿಸಿಲ್ಲ ಹೀಗಾಗಿ ಎಪಿಎಂಸಿಯ ಗೋದಾಮಿನಲ್ಲಿ ಕಾಲೇಜು ನಡೆಯುತ್ತಿದೆ. ರಾತ್ರಿ ಈ ಪರಿಸರದಲ್ಲಿ ಕುಡುಕರ ಹಾವಳಿ ಮಿತಿಮೀರಿದ್ದು ಬೆಳಿಗ್ಗೆ ಕಾಲೇಜಿನವರು ಮದ್ಯದ ಖಾಲಿ ಬಾಟಲಿ ಎಸೆದು ಸೆಟ್ರಸ್ ತೆರೆಯುವ ದುಸ್ಥಿತಿ ಇಲ್ಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.