ಕನಕಗಿರಿ: ಮೌರ್ಯರು ಹಾಗೂ ವಿಜಯನಗರ ಕಾಲದಿಂದಲೂ ಪ್ರಖ್ಯಾತಿಯಾಗಿರುವ ಕನಕಗಿರಿ ಪ್ರಮುಖ ಪಾಳೆಯಗಾರಿಕೆಯಲ್ಲಿ ಒಂದಾಗಿದೆ. ದೊರೆಗಳ ರಾಜಕೀಯ, ಸಾಂಸ್ಕೃತಿಕ ಪ್ರೇಮಕ್ಕೆ ಸಾಕ್ಷಿಯಾಗಿ ಅನೇಕ ಸ್ಮಾರಕಗಳು ಕಾಣ ಸಿಗುತ್ತವೆ. ಆದರೆ ದೊರೆಗಳು ನಿರ್ಮಿಸಿದ ಸ್ಮಾರಕಗಳು ಇಂದು ಅಳಿವಿನಂಚಿಗೆ ತಲುಪಿವೆ.
ಪಟ್ಟಣದ ಎಪಿಎಂಸಿ ಆವರಣದಲ್ಲಿರುವ ವೆಂಕಟಚಲಪತಿ ಭಾವಿ ಅಥವಾ ರಾಣಿಸ್ನಾನಗೃಹ, ಪುಷ್ಕರಣಿ, ಕನಕಾಚಲಪತಿ ದೇಗುಲ, ಪ್ರವಾಸಿ ಮಂದಿರದಲ್ಲಿರುವ ಭಾವಿ, ಅಚ್ಚಮ್ಮ ಬಾವಿ, ಹೀಗೆ ಅನೇಕ ಸ್ಮಾರಕಗಳು ಇಲ್ಲಿವೆ. ವೆಂಕಟಚಲಪತಿಬಾವಿ ಅಥವಾ ರಾಣಿಸ್ನಾನಗೃಹ ಎಂದು ಕರೆಯುವ ಈ ಸ್ಮಾರಕದ ಅಭಿವೃದ್ಧಿಗೆ ಯಾವ ಸರ್ಕಾರ ಸಹ ಪ್ರಯತ್ನ ಮಾಡುತ್ತಿಲ್ಲ ಎನ್ನುತ್ತಾರೆ ಸ್ಥಳೀಯರು.
ರಾಣಿ ಗೌರಮ್ಮ ಅವರು ನಿರ್ಮಿಸಿದ ಈ ಬಾವಿ ಕಲಾತ್ಮಕ ಕೆತ್ತನೆಯಿಂದ ಕೂಡಿದೆ. ಬಾವಿಯೊಳಗೆ ದೇಗುಲಗಳಿದ್ದು ಅವುಗಳ ಅಂದ ಹೆಚ್ಚಿಸಲು ಬಾಗಿಲ ಹತ್ತಿರವೇ ಅಂದವಾದ ಚಿತ್ರಗಳನ್ನು ಕಲ್ಲಿನಿಂದ ಕೆತ್ತಲಾಗಿದೆ. ಪಕ್ಕದಲ್ಲಿಯೆ ನಾಗರಮೂರ್ತಿಗಳಿದ್ದು ಈ ಭಾಗದಲ್ಲಿ ಬಂಗಾರ ಇರುತ್ತದೆ ಎಂಬ ಭಾವನೆಯಿಂದ ನಿಧಿಚೋರರರು ಗೋಡೆಯನ್ನು ಅಗೆದಿದ್ದಾರೆ. ಬಾವಿಯೊಳಗೆ ಶಿವಲಿಂಗವಿದ್ದು ಅದನ್ನು ಸಹ ನಿಧಿಗಾಸೆಗಾಗಿ ಕಿಡಿಗೇಡಿಗಳು ಭಗ್ನಗೊಳಿಸಿದ್ದಾರೆ.
ಸಿಂಹದ ಬಾವಿಯೊಳಗೆ ಕಲ್ಲಿನಗುಂಡಿದ್ದು ಅದು ತಿರುಗುವಂತೆ ಕೆತ್ತನೆ ಮಾಡಲಾಗಿದೆ. ನಿಧಿಗಳ್ಳರು ಗುಂಡುಗಳನ್ನು ಧ್ವಂಸ ಮಾಡಿದ್ದಾರೆ. ಅಪರೂಪದ ಬಾವಿಯಾದ ವೆಂಕಟಚಲಪತಿ ಬಾವಿ ನೋಡುಗರನ್ನು ಆಕರ್ಷಿಸುತ್ತದೆ. ಆದರೆ ರಕ್ಷಣೆ ಕೊರತೆಯಿಂದ ನಲುಗಿ ಹೋಗಿದೆ ಎಂದು ಸ್ಥಳೀಯ ಕನಕರೆಡ್ಡಿ ಕೆರಿ ಅಸಮಾಧಾನ ವ್ಯಕ್ತಪಡಿಸುತ್ತಾರೆ.
ಅನಾಥವಾದ ಪುಷ್ಕರಣಿ: ಬಸ್ ನಿಲ್ದಾಣದಿಂದ ಸರ್ಕಾರಿ ಪಿಯು ಕಾಲೇಜಿಗೆ ತೆರಳುವ ಮಾರ್ಗದಲ್ಲಿ ಪುಷ್ಕರಣಿ ಅಥವಾ ನರಸಿಂಹ ತೀರ್ಥಕೊಂಡ ಎಂಬ ಸ್ಮಾರಕವಿದ್ದು, ಅಭಿವೃದ್ಧಿಗಾಗಿ ಕಾದು ಕುಳಿತಿದೆ. ಈ ಪ್ರದೇಶವನ್ನು ಎರಡನೆಯ ತಿರುಪತಿ, ಬಡವರ ತಿರುಪತಿ ಎಂದು ಕರೆಯಲಾಗುತ್ತಿದ್ದು ಭಕ್ತರು ಇಲ್ಲಿ ಸಹ ತಲೆಮುಡಿ ಕೊಡುತ್ತಾರೆ.
ತಲೆಮುಡಿ ನೀಡಿದ ಭಕ್ತರ ಸ್ನಾನಕ್ಕಾಗಿ ಪುಷ್ಕರಣಿಯಲ್ಲಿರುವ ನೀರನ್ನು ಬಳಕೆ ಮಾಡುತ್ತಿದ್ದರು. ಈಗ ಪುಷ್ಕರಣಿಯಲ್ಲಿ ಹನಿ ನೀರು ಸಹ ಇಲ್ಲವಾಗಿದೆ. ಜಾತ್ರೆಯ ಸಮಯದಲ್ಲಿ ಪುಷ್ಕರಣಿಗೆ ಹೊಂದಿಕೊಂಡಂತೆ ವಾಟರ್ ಟ್ಯಾಂಕರ್ ಮೂಲಕ ನೀರಿನ ಹತ್ತಾರು ನಲ್ಲಿಗಳನ್ನು ಜೋಡಿಸಿ ಸ್ನಾನಕ್ಕೆ ಅನುಕೂಲ ಮಾಡಿಕೊಡಲಾಗುತ್ತಿದೆ. ತಲೆಮುಡಿ ಸೇವೆ ದೇವಸ್ಥಾನ ಸಮಿತಿಯವರಿಗೆ ಸೇರಿದ್ದರೂ ಆದಾಯಕ್ಕೆ ಮಾತ್ರ ಸೀಮಿತವಾಗಿರುವ ಸಮಿತಿಯವರು ಸ್ವಚ್ಛತೆ ಕಾಪಾಡುವಲ್ಲಿ ವಿಫಲರಾಗಿದ್ದಾರೆ ಎನ್ನುವ ಆರೋಪ ಸ್ಥಳೀಯರದ್ದು.
ತಲೆಮಂಡಿಯ ಕೂದಲುಗಳನ್ನು ಐದಾರು ಪ್ಲಾಸ್ಟಿಕ್ ಚೀಲಗಳಲ್ಲಿ ತುಂಬಿದ್ದು ಅಲ್ಲಿಯೆ ಬಿಟ್ಟು ಹೋಗಿದ್ದಾರೆ. ಪುಷ್ಕರಣಿಯ ಮೆಟ್ಟಿಲು ಬಳಿ ಸ್ನಾನ ಮಾಡಿ ಭಕ್ತರು ಬಿಟ್ಟು ಹೋಗಿರುವ ಬಟ್ಟೆಗಳನ್ನು ಹಾಗೆಯೇ ಇವೆ ಅವುಗಳನ್ನು ಬೇರೆಡೆಗೆ ಸಾಗಿಸುವಲ್ಲಿ ಕನಕಾಚಲಪತಿ ದೇವಸ್ಥಾನ ವ್ಯವಸ್ಥಾಪನಾ ಮಂಡಳಿ ನಿರ್ಲಕ್ಷ್ಯ ವಹಿಸಿದೆ. ಪುಷ್ಕರಣಿಯ ಪರಿಸರದಲ್ಲಿ ದೇಗುಲಗಳಿದ್ದು ಶಿಥಲಾವಸ್ಥೆಯಲ್ಲಿವೆ. ದೇಗುಲಗಳ ನಿರ್ಮಾಣಕ್ಕೆ ಬಳಸಿದ ಕಲ್ಲು, ಗರ್ಚು, ಇತರೆ ಕಿತ್ತಿಕೊಂಡು ಬಂದಿವೆ.
ಅಚ್ವಮ್ಮನ ಭಾವಿ: ಇಮ್ಮಡಿ ಉಡಚಪ್ಪ ನಾಯಕರ ರಾಣಿಯಾಗಿರುವ ರಾಣಿ ಅಚ್ಚಮ್ಮ ಅವರು ಕನಕಗಿರಿ- ಸೋಮಸಾಗರ ಗ್ರಾಮದ ರಸ್ತೆಯಲ್ಲಿ ಸಾರ್ವಜನಿಕರ ಉಪಯೋಗ, ಕೃಷಿ, ನೀರಾವರಿ ಉದ್ದೇಶಕ್ಕಾಗಿ ಬಾವಿ ನಿರ್ಮಿಸಿದ್ದು ಅದನ್ನು ಅಚ್ಚಮ್ಮ ಬಾವಿ ಎಂದು ಕರೆಯಲಾಗುತ್ತಿದೆ.
ಕನಕಗಿರಿಯ ಕಲಾತ್ಮಕ ಬಾವಿಗಳಲ್ಲಿ ಇದೊಂದು ಬಾವಿಯಾಗಿದ್ದು ಪ್ರವೇಶ ಮೆಟ್ಟಿಲುಗಳ ಎರಡು ಬದಿಯ ಗೋಡೆಗಳಲ್ಲಿ ಶಿವಲಿಂಗ ಹಾಗೂ ಅನಂತಶಯನರ ದೇವತಾಗೃಹಗಳಿವೆ. ಆಂಜನೇಯ, ಗರುಡ, ಗಜಾನನ, ಗಜಕಾಳಗ, ನಗ್ನಸ್ತ್ರೀ, ಮೀನು, ಸರ್ಪ ಇತರೆ ಶಿಲ್ಪಗಳಿಂದ ಅಲಂಕೃತವಾಗಿದೆ. ಈ ಬಾವಿಗೂ ರಕ್ಷಣೆ ಇಲ್ಲವಾಗಿದೆ.
ಈಚೆಗೆ ಗಂಗಾವತಿಯ ಚಾರಣ ಬಳಗದವರು ಸ್ವಚ್ಛಗೊಳಿಸಿದ್ದಾರೆ. ಅಚ್ಚಮ್ಮ ಬಾವಿಯನ್ನು ರಾಜ್ಯ ಸಂರಕ್ಷಿತ ಸ್ಮಾರಕವೆಂದು ಘೋಷಿಸುವ ಉದ್ದೇಶದಿಂದ ಕರ್ನಾಟಕ ಪ್ರಾಚೀನ ಮತ್ತು ಐತಿಹಾಸಿಕ ಸ್ಮಾರಕಗಳ ಮತ್ತು ಪುರಾತತ್ವ ನಿವೇಶನಗಳು ಮತ್ತು ಅವಶೇಷಗಳು ಅಧಿನಿಯಮ 1961 ರ ಕಲಂ 4(1) ರಡಿ ಪ್ರಾಥಮಿಕ ಅಧಿಸೂಚನೆಯನ್ನು ಕಳೆದ ನವೆಂಬರ್ ತಿಂಗಳಲ್ಲಿ ಹೊರಡಿಸಲಾಗಿತ್ತು. ಸಂಬಂಧಪಟ್ಟ ಇಲಾಖೆಗಳು ಈ ಕಡೆಗೆ ಗಮನ ಹರಿಸಿ ಅಭಿವೃದ್ಧಿ ಪಡಿಸಿದರೆ ಬಾವಿಗೆ ಮತ್ತಷ್ಟು ಮೆರಗು ಬರಲಿದೆ ಎಂದು ಪಂಪಾಪತಿ ತಿಳಿಸುತ್ತಾರೆ.
ಇವುಗಳಲ್ಲದೆ ಪಟ್ಟಣದ ಸುತ್ತಮುತ್ತಲ್ಲಿನ ಚಿಕ್ಕ ಕನಕಪ್ಪನಬಾವಿ, ಪ್ರವಾಸಿ ಮಂದಿರದಲ್ಲಿರುವ ಬಾವಿ, ಶಂಕರಾಚಾರ್ಯಮಠ, ಕಾಲೇಜು ಪಕ್ಕದಲ್ಲಿರುವ ಪುಷ್ಕರಣಿ, ದೇಗುಲಗಳು, ಇತರೆ ಸ್ಮಾರಕಗಳು ಅಭಿವೃದ್ಧಿಯಿಂದ ದೂರ ಉಳಿದಿವೆ.
ಐತಿಹಾಸಿಕ ತಾಣದಲ್ಲಿರುವ ಸ್ಮಾರಕಗಳನ್ನು ರಕ್ಷಣೆ ಮಾಡುವಲ್ಲಿ ಪ್ರತಿಯೊಂದು ಸರ್ಕಾರಗಳು ನಿರ್ಲಕ್ಷ್ಯ ವಹಿಸಿವೆ. ಪ್ರಾಚ್ಯ ವಸ್ತು ಇಲಾಖೆಯ ಅಧಿಕಾರಿಗಳು ಸಹ ಈ ಕಡೆಗೆ ಗಮನ ನೀಡಿಲ್ಲ. ಹೀಗಾಗಿ ಸ್ಮಾರಕಗಳು ಹಾಳಾಗುತ್ತಿದ್ದು ಅನೈತಿಕ ತಾಣಗಳಾಗಿ ಪರಿವರ್ತನೆಗೊಂಡಿವೆಕನಕರೆಡ್ಡಿ ಕೆರಿ ಇತಿಹಾಸ ಪ್ರೇಮಿ
ರಾಜ್ಯ ಪುರಾತತ್ವ ಇಲಾಖೆ ಮತ್ತು ಪ್ರವಾಸೋದ್ಯಮ ಇಲಾಖೆಗಳು ಕನಕಗಿರಿ ಸ್ಮಾರಕ ಸಂರಕ್ಷಣ ಯೋಜನೆ ರೂಪಿಸಿ ಪುನರುಜ್ಜೀವನಗೊಳಿಸಬೇಕಾದದ್ದು ಅತ್ಯಂತ ಅಗತ್ಯದ ಕಾರ್ಯವಾಗಿದೆ. ಆ ನಿಟ್ಟಿನಲ್ಲಿ ಜಿಲ್ಲಾಡಳಿತವೂ ಕ್ರಿಯಾಶೀಲವಾಗಲಿ. ಇಲ್ಲದಿದ್ದರೆ ಇನ್ನೂ ಕೆಲವೇ ದಿನಗಳಲ್ಲಿ ಕಣ್ಣಿದ್ದವರು ನೋಡಬೇಕಾದ ಕನಕಗಿರಿ ಎಂಬ ನಾಣ್ನುಡಿ ಅರ್ಥ ಕಳೆದು ಕೊಳ್ಳುತ್ತದೆಶರಣಬಸಪ್ಪ ಕೋಲ್ಕಾರ ಇತಿಹಾಸ ಸಂಶೋಧಕ
ದೇಗುಲಗಳು ಶಿಲಾಶಾಸನ ಬಾವಿ ಪುಷ್ಕರಣಿ ಇತರೆ ಸ್ಮಾರಕಗಳು ರಾಷ್ಟ್ರಿಯ ಸಂಪತ್ತು ಆಗಿವೆ. ಇಂಥ ಐತಿಹಾಸಿಕ ಸ್ಮಾರಕಗಳನ್ನು ಉಳಿಸಿ ಸಂರಕ್ಷಣೆ ಮಾಡುವಲ್ಲಿ ಪ್ರತಿಯೊಬ್ಬರ ಆದ್ಯ ಕರ್ತವ್ಯವಾಗಿದೆ ಈ ನಿಟ್ಟಿನಲ್ಲಿ ಸರ್ಕಾರ ಸ್ಥಳೀಯರು ಮುಂದಾಗಬೇಕುಅಮರೇಶ ಪಟ್ಟಣಶೆಟ್ರ ಸ್ಥಳೀಯ ಮುಖಂಡ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.