ADVERTISEMENT

ಕನಕಗಿರಿ ಪ.ಪಂ. ಚುನಾವಣೆ: ಟಿಕೆಟ್‌ ಗಿಟ್ಟಿಸಲು ಹತ್ತಾರು ತಂತ್ರ

ಕನಕಗಿರಿ ಪ.ಪಂ. ಚುನಾವಣೆ; ಮತದಾರರ ಮನೆ ಬಾಗಿಲಿಗೆ ಆಕಾಂಕ್ಷಿಗಳು

ಮೆಹಬೂಬ ಹುಸೇನ
Published 5 ಡಿಸೆಂಬರ್ 2021, 6:44 IST
Last Updated 5 ಡಿಸೆಂಬರ್ 2021, 6:44 IST
ಕನಕಗಿರಿ ಪಟ್ಟಣ ಪಂಚಾಯಿತಿ ಕಚೇರಿ
ಕನಕಗಿರಿ ಪಟ್ಟಣ ಪಂಚಾಯಿತಿ ಕಚೇರಿ   

ಕನಕಗಿರಿ: ಇಲ್ಲಿನ ಪಟ್ಟಣ ಪಂಚಾಯಿತಿಯ ಐದು ವರ್ಷದ ಅಧಿಕಾರ ಅವಧಿ (2016-2021) ಮುಗಿದು ಎಂಟು ತಿಂಗಳ ನಂತರ ಹೈಕೋರ್ಟ್ ಆದೇಶದ ಮೆರೆಗೆ ಡಿ. 27ರಂದು ಚುನಾವಣೆ ನಡೆಯುತ್ತಿದ್ದು, ರಾಜಕೀಯ ಚಟುವಟಿಕೆಗಳು ಬಿರುಸಿನಿಂದ ನಡೆದಿವೆ.

ಪಟ್ಟಣ ಪಂಚಾಯಿತಿ ಮೇಲ್ದರ್ಜೆಗೆ ಏರಿದ ನಂತರ ನಡೆಯುತ್ತಿರುವ ಎರಡನೇಯ ಚುನಾವಣೆ ಇದಾಗಿದ್ದು, ಹೊಸ, ಹಳೆ ಮುಖಗಳು ಟಿಕೆಟ್‌ಗಾಗಿ ಪೈಪೋಟಿ ನಡೆಸಿದ್ದಾರೆ. ಆಯಾ ಪಕ್ಷದ ಟಿಕೆಟ್ ಆಕಾಂಕ್ಷಿಗಳು ಮುಖಂಡರ ದುಂಬಾಲು ಬಿದ್ದು, ಟಿಕೆಟ್ ಗಿಟ್ಟಿಸಿಕೊಳ್ಳಲು ವಿವಿಧ ತಂತ್ರಗಳನ್ನು ಹೂಡಿರುವುದು ಕಂಡು ಬರುತ್ತಿದೆ.

ಒಟ್ಟು 17 ಸದಸ್ಯರಿದ್ದು ಕಳೆದ ಅವಧಿಯಲ್ಲಿ 9 ಕಾಂಗ್ರೆಸ್, 5 ಬಿಜೆಪಿ ಹಾಗೂ ಮೂವರು ಪಕ್ಷೇತರ ಸದಸ್ಯರು ಆಯ್ಕೆಯಾಗಿದ್ದರೂ ಮೂರು ಜನ ಪಕ್ಷೇತರರು ಕಾಂಗ್ರೆಸ್‌ನೊಂದಿಗೆ ಗುರುತಿಸಿಕೊಂಡಿದ್ದರು.

ADVERTISEMENT

ಚುನಾವಣೆ ಮುಂಚೆಯೇ ಅಧ್ಯಕ್ಷ ಸ್ಥಾನವನ್ನು ಪರಿಶಿಷ್ಟ ಜಾತಿಗೆ ಮೀಸಲಾತಿ ಘೋಷಣೆ ಮಾಡಿದ ಹಿನ್ನೆಲೆಯಲ್ಲಿ ಸ್ಪಷ್ಟ ಬಹುಮತ ಹೊಂದಿದ್ದ ಕಾಂಗ್ರೆಸ್‌ನ ರವಿ ಭಜಂತ್ರಿ, ಉಪಾಧ್ಯಕ್ಷರಾಗಿ ಮಂಜುನಾಥ ಗಡಾದ ಅವರು ಮೊದಲ 30 ತಿಂಗಳ ಅವಧಿಗೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದರು.

ಆಶ್ರಯ ಯೋಜನೆಯ ಫಲಾನುಭವಿಗಳ ಆಯ್ಕೆ ಹಾಗೂ ಸಾರ್ವಜನಿಕ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಅಧ್ಯಕ್ಷ ರವಿ ಭಜಂತ್ರಿ ಅವರು ಆಡಿದ ಮಾತಿನಿಂದ ಆಕ್ರೋಶಗೊಂಡಿದ್ದ 16 ಮಂದಿ ಸದಸ್ಯರು ಪಕ್ಷ ಭೇದ ಮರೆತು ಭಜಂತ್ರಿ ವಿರುದ್ದ ಅವಿಶ್ವಾಸ ಗೊತ್ತುವಳಿ ಮಂಡಿಸಿ ಅಧಿಕಾರದಿಂದ ಕೆಳಗೆ ಇಳಿಸಿದ್ದು ಗಮನ ಸೆಳೆದಿತ್ತು. ಉಳಿದ ನಾಲ್ಕು ತಿಂಗಳ ಅವಧಿಗೆ ಬಿಜೆಪಿಯ ಸರಸ್ವತಿ ಸಣ್ಣ ಕನಕಪ್ಪ ಆಯ್ಕೆಯಾಗಿದ್ದರು.

ಎರಡನೇಯ ಅವಧಿಯ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಮೀಸಲಾತಿಗೆ ಸಂಬಂಧಿಸಿದಂತೆ ಹೈಕೋರ್ಟ್‌ನಲ್ಲಿ ವಾದ-ವಿವಾದ ನಡೆದ ಕಾರಣದಿಂದ 26 ತಿಂಗಳ ಕಾಲ ಅಧ್ಯಕ್ಷ ಹಾಗೂ ಉಪಾಧ್ಯಕ್ಷರು ಇರಲಿಲ್ಲ, ತಹಶೀಲ್ದಾರ್ ಅವರು ಆಡಳಿತಾಧಿಕಾರಿಯಾಗಿ ಕೆಲಸ ಮಾಡಿದರು.

2020ರಲ್ಲಿ ಹೈಕೋರ್ಟ್ ಮೀಸಲಾತಿ ಪ್ರಕಟಿಸಿದಾಗ ಇಬ್ಬರು ಪಕ್ಷೇತರ ಸದಸ್ಯರು, ಸಂಸದ ಹಾಗೂ ಶಾಸಕರ ಮತ ಪಡೆದ ಬಿಜೆಪಿಯ ರವೀಂದ್ರ ಸಜ್ಜನ್ ಹಾಗೂ ಸರಸ್ವತಿ ಅವರು ಅಧ್ಯಕ್ಷ ಹಾಗೂ ಉಪಾಧ್ಯಕ್ಷರಾಗಿ ಕಳೆದ ವರ್ಷ ಅ.20ರಂದು ಆಯ್ಕೆಯಾಗಿದ್ದರು.

ಚುನಾವಣೆ ಯಾವಾಗ ಬರುತ್ತದೆ ಎಂಬುದನ್ನು ತುದಿಗಾಲ ಮೇಲೆ ನಿಂತು ಕಾಯುತ್ತಿದ್ದ ಕಾಂಗ್ರೆಸ್, ಬಿಜೆಪಿ ಆಕಾಂಕ್ಷಿಗಳು ಟಿಕೆಟ್ ಕೊಡುವ ಮುಂಚೆಯೇ ಕಾಲಿಗೆ ಚಕ್ರ ಕಟ್ಟಿಕೊಂಡು ಮತದಾರರ ಮನೆಗೆ ತಿರುಗಾಡುತ್ತಿದ್ದಾರೆ.

ತಮಗೆ ಪಕ್ಷದ ಟಿಕೆಟ್ ಗ್ಯಾರಂಟಿ ಎಂದು ತಿಳಿದವರು ಹಾಗೂ ಪಕ್ಷ ಇಲ್ಲವೆ ಪಕ್ಷೇತರರಾಗಿ ಸ್ಪರ್ಧಿಸಲು ತಯಾರಿ ನಡೆಸಿದವರು ನಾಮಪತ್ರ ಸಲ್ಲಿಸಲು ಬೇಕಾದ ಜಾತಿ ಪ್ರಮಾಣ ಪತ್ರ, ಬಾಂಡ್, ತೆರಿಗೆ ಪಾವತಿ ರಶೀದಿ, ವಂಶಾವಳಿ ಪ್ರಮಾಣ ಪತ್ರ ಪಡೆಯುತ್ತಿದ್ದಾರೆ.

ಬಹಳಷ್ಟು ಜನ ಆಕಾಂಕ್ಷಿಗಳು ರಂಜಾನ್, ಕೊರೊನಾ ನೆಪದಲ್ಲಿ ಮನೆ ಬಾಗಿಲಿಗೆ 2 ವರ್ಷಗಳ ಕಾಲ ಆಹಾರದ ಕಿಟ್, ಅಕ್ಕಿ ಚೀಲ, ತರಕಾರಿ ನೀಡಿ ಹಣ ವೆಚ್ಚ ಮಾಡಿದ್ದು, ಟಿಕೆಟ್ ಪಡೆದು ಗೆಲುವಿನ ನಿರೀಕ್ಷೆಯಲ್ಲಿದ್ದಾರೆ. ಡಿ. 30ರಂದು ಮತಎಣಿಕೆ
ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.