
ಕನಕಗಿರಿ: ನಿರೀಕ್ಷೆಯಂತೆ ಇಲ್ಲಿನ ಪಟ್ಟಣ ಪಂಚಾಯಿತಿಯ ನೂತನ ಅಧ್ಯಕ್ಷರಾಗಿ 14ನೇ ವಾರ್ಡ್‌ನ ಸದಸ್ಯೆ ತನುಶ್ರೀ ಟಿಜೆ ರಾಮಚಂದ್ರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಹುಸೇನಬೀ ಚಳ್ಳಮರದ ಅವರ ರಾಜೀನಾಮೆಯಿಂದ ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಪಟ್ಟಣ ಪಂಚಾಯಿತಿ ಸಭಾಂಗಣದಲ್ಲಿ
ಶನಿವಾರ ನಡೆದ ಚುನಾವಣೆಯಲ್ಲಿ ತನುಶ್ರೀ ಮಾತ್ರ ನಾಮಪತ್ರ ಸಲ್ಲಿಸಿದ್ದರಿಂದ ಚುನಾವಣಾಧಿಕಾರಿಯಾಗಿದ್ದ ತಹಶೀಲ್ದಾರ್ ವಿಶ್ವನಾಥ ಮುರುಡಿ ಅವಿರೋಧ ಆಯ್ಕೆ ಘೋಷಣೆ ಮಾಡಿದರು.
ಆಯ್ಕೆ ಪ್ರಕ್ರಿಯೆ ಮುಗಿಯುತ್ತಿದ್ದಂತೆ ಕಾಂಗ್ರೆಸ್ ಕಾರ್ಯಕರ್ತರು, ಅಭಿಮಾನಿಗಳು ರಾಜಬೀದಿಯಲ್ಲಿ ಪಟಾಕಿ ಸಿಡಿಸಿ ಸಂತಸ ವ್ಯಕ್ತಪಡಿಸಿದರು. ತನುಶ್ರೀ ಅವರ ಪತಿ ರಾಮಚಂದ್ರ ಸಚಿವ ಶಿವರಾಜ ತಂಗಡಗಿ ಅವರ ಕಾಲಿಗೆ ಬಿದ್ದು ಕೃತಘ್ನತೆ ಸಲ್ಲಿಸಿದರು.
ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಮಾತನಾಡಿ, ‘ರಾಜ್ಯ ಹಣಕಾಸು ಆಯೋಗ ಅಥವಾ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಅನುದಾನ ಬಳಸಿಕೊಂಡು ಪಟ್ಟಣದ ಸುಂದರೀಕರಣ ಮಾಡಲಾಗುವುದು, ಸಿಮೆಂಟ್ ಕಾಂಕ್ರಿಟ್ ರಸ್ತೆ ಸೇರಿದಂತೆ ಇತರೆ ಮೂಲ ಸೌಲಭ್ಯ ಕಲ್ಪಿಸಲಾಗುವುದು’ ಎಂದರು.
ಪಟ್ಟಣ ಪಂಚಾಯಿತಿಯ ಹೊಸ ಕಟ್ಟಡ ನಿರ್ಮಾಣ ಮಾಡಲಾಗುವುದು, ಈ ಮುಂಚೆ ತೊಂಡೆತೇವರಪ್ಪ ದೇಗುಲದ ಪರಿಸರದಲ್ಲಿರುವ ಸಿಎ ನಿವೇಶನದಲ್ಲಿ ಹೊಸ ಕಟ್ಟಡಕ್ಕೆ ಜಾಗ ಗುರುತಿಸಲಾಗಿತ್ತು, ಸ್ಥಳೀಯ ಮುಖಂಡರು ಜಾಗದ ಕುರಿತು ಆಕ್ಷೇಪ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ವಿಶ್ವಾಸಕ್ಕೆ ತೆಗೆದುಕೊಂಡು ಅವರು ಗುರುತಿಸಿದ ಸ್ಥಳದಲ್ಲಿ ಹೊಸಕಟ್ಟಡ ನಿರ್ಮಾಣ ಮಾಡಲಾಗುವುದು, ಈ ಬಗ್ಗೆ ಪ್ರಸ್ತಾವ ಸಲ್ಲಿಸಿ ಎಂದು ನೂತನ ಅಧ್ಯಕ್ಷೆಗೆ ತಂಗಡಗಿ ಸೂಚಿಸಿದರು.
ಪಟ್ಟಣದಲ್ಲಿ ಉಪನೋಂದಣಿ ಕಚೇರಿ ಸ್ಥಾಪಿಸಲು ಬೇಕಾದ ಎಲ್ಲಾ ಪ್ರಕ್ರಿಯೆಗಳು ಆರಂಭವಾಗಿವೆ, ಇದೇ ತಿಂಗಳ ಕೊನೆಯ ವಾರದಲ್ಲಿ ಚಾಲನೆ ನೀಡಲಾಗುವುದು ಎಂದು ಹೇಳಿದರು.
ಪಟ್ಟಣ ಪಂಚಾಯಿತಿ ಉಪಾಧ್ಯಕ್ಷ ಕಂಠಿರಂಗ ನಾಯಕ, ಜಿಲ್ಲಾ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ರಡ್ಡಿಶ್ರೀನಿವಾಸ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ. ಗಂಗಾಧರಸ್ವಾಮಿ, ಪ್ರಚಾರ ಸಮಿತಿ ಅಧ್ಯಕ್ಷ ರಮೇಶ ನಾಯಕ, ವಕ್ತಾರ ಶರಣಬಸಪ್ಪ ಭತ್ತದ, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಸಿದ್ದಪ್ಪ ನೀರ್ಲೂಟಿ, ಜಿ.ಪಂ ಮಾಜಿ ಸದಸ್ಯರಾದ ವೀರೇಶ ಸಮಗಂಡಿ, ಅಮರೇಶ ಗೋನಾಳ, ತಾ.ಪಂ ಮಾಜಿ ಅಧ್ಯಕ್ಷರಾದ ಬಸಂತಗೌಡ ಪಾಟೀಲ, ಮಹ್ಮದರಫಿ, ಬ್ರಾಹ್ಮಣ ಅಭಿವೃದ್ಧಿ ನಿಗಮದ ಸದಸ್ಯ ವೆಂಕಟೇಶ ಕುಲಕರ್ಣಿ, ವೀರಶೈವ ಅಭಿವೃದ್ಧಿ ನಿಗಮದ ಸದಸ್ಯ ಮಲ್ಲಿಕಾರ್ಜುನ ಗೌಡ, ಪಟ್ಟಣ ಪಂಚಾಯಿತಿ ಸದಸ್ಯರು, ಪ್ರಮುಖರು ಇದ್ದರು.
ಪಟ್ಟಣ ಪಂಚಾಯಿತಿ ಸದಸ್ಯೆ ಬಸಮ್ಮ ಕುರುಗೋಡು ಹೊರತುಪಡಿಸಿ ಮುಖ್ಯಾಧಿಕಾರಿ ಲಕ್ಷ್ಮಣ ಕಟ್ಟಿಮನಿ ಹಾಗೂ 16 ಜನ ಸದಸ್ಯರು ಚುನಾವಣಾ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.