ADVERTISEMENT

ಕನಕಗಿರಿ: ದಶಕ‌ ಕಳೆದರೂ ಆರಂಭವಾಗದ ಪಟ್ಟಣ ಪಂಚಾಯಿತಿಯ ಹೊಸ ಕಟ್ಟಡ

ಹುಡುಕಾಟದಲ್ಲಿಯೆ ಕಾಲ ಕಳೆದ ಅಧಿಕಾರಿಗಳು

ಮೆಹಬೂಬ ಹುಸೇನ
Published 17 ಫೆಬ್ರುವರಿ 2025, 5:36 IST
Last Updated 17 ಫೆಬ್ರುವರಿ 2025, 5:36 IST
<div class="paragraphs"><p>ಕನಕಗಿರಿಯ ಪಟ್ಟಣ ಪಂಚಾಯಿತಿ ಕಚೇರಿಯ ಕೊಠಡಿಯ ಮೇಲ್ಛಾವಣೆಯ‌ ಸಿಮೆಂಟ್ ಕಾಂಕ್ರೀಟ್ ಕಿತ್ತಿರುವುದು</p></div>

ಕನಕಗಿರಿಯ ಪಟ್ಟಣ ಪಂಚಾಯಿತಿ ಕಚೇರಿಯ ಕೊಠಡಿಯ ಮೇಲ್ಛಾವಣೆಯ‌ ಸಿಮೆಂಟ್ ಕಾಂಕ್ರೀಟ್ ಕಿತ್ತಿರುವುದು

   

ಕನಕಗಿರಿ: ಅಖಂಡ ಗಂಗಾವತಿ ತಾಲ್ಲೂಕಿನಲ್ಲಿ ಎರಡನೇಯ ಅತಿ ದೊಡ್ಡ ಗ್ರಾಮ‌ ಪಂಚಾಯಿತಿ ಸದಸ್ಯರನ್ನು‌ ಹೊಂದಿದ್ದ ಇಲ್ಲಿನ ಗ್ರಾಮ ಪಂಚಾಯಿತಿಯನ್ನು ಸಚಿವ ಶಿವರಾಜ ತಂಗಡಗಿ ಅವರ‌ ಪರಿಶ್ರಮದಿಂದ. 2015ರಲ್ಲಿ ಪಟ್ಟಣ‌ ಪಂಚಾಯಿತಿಯನ್ನಾಗಿ ಮೇಲ್ದರ್ಜೆಗೆ ಏರಿಸಲಾಗಿದ್ದರೂ ಸೌಲಭ್ಯಗಳ ಕೊರತೆಯಿಂದ‌ ಬಳಲುತ್ತಿದೆ. ಹಳೆಯ ಗ್ರಾಮ ಪಂಚಾಯಿತಿ‌‌ ಕಚೇರಿಯಲ್ಲಿ ಪಟ್ಟಣ‌ ಪಂಚಾಯಿತಿ ಆಡಳಿತ ನಡೆಯುತ್ತಿದ್ದು ಸಿಬ್ಬಂದಿಗೆ ತಕ್ಕಂತೆ ಜಾಗದ ವ್ಯವಸ್ಥೆ ಇಲ್ಲವಾಗಿದೆ.

ಕಚೇರಿಯ ಕೊಠಡಿಗಳ ಎಲ್ಲಾ ಮೇಲ್ಛಾವಣೆ‌ಗಳಿಗೆ ಹಾಕಿದ ಸಿಮೆಂಟ್ ಕಾಂಕ್ರೀಟ್, ಕಬ್ಬಿಣದ ಸರಳು ಕಿತ್ತಿಕೊಂಡು ಬಂದಿದ್ದು ಸಿಬ್ಬಂದಿಗಳು ಅತಂಕದಲ್ಲಿ ಕೆಲಸ‌ ಮಾಡುತ್ತಿದ್ದಾರೆ. ಕಚೇರಿಯ ಮುಂಭಾಗದ ಸ್ಥಿತಿ ದೇವರೆ ಬಲ್ಲ ಎನ್ನುವಂತಾಗಿದೆ. ನಾಮಫಲಕ ಬರೆಯುವ ಸ್ಥಳದಲ್ಲಿ ಸಿಮೆಂಟ್ ಫ್ಲಾಸ್ಟರ್ ಕಿತ್ತಿಕೊಂಡು ಬಂದಿದ್ದು ಅಸಹ್ಯ ಮೂಡಿಸುತ್ತದೆ.

ADVERTISEMENT

ಸಮುದಾಯ ಸಂಘಟಕರು, ಆರೋಗ್ಯ ನಿರೀಕ್ಷಕರು, ಲೋಡರ್ಸ್, ಡ್ರೈವರ್, ಸೇರಿದಂತೆ‌ ಅನೇಕ ಹುದ್ದೆಗಳು ಖಾಲಿ ಇವೆ. ಕಂದಾಯ ವಸೂಲಿಗಾರ, ಎಂಜಿನಿಯರ್ ಹುದ್ದೆ ಖಾಲಿವಿದ್ದರೂ ಕಳೆದ ನಾಲ್ಕು ವರ್ಷಗಳಿಂದಲೂ
ನಿಯೋಜನೆ ಮೆರೆಗೆ ಕೆಲಸ ಮಾಡುತ್ತಿದ್ದಾರೆ. ಸದ್ಯ ಕೆಲಸ ಮಾಡುತ್ತಿರುವ ಸಿಬ್ಬಂದಿಗಳಿಗೆ ಸಮರ್ಪಕವಾದ‌‌ ಜಾಗದ ವ್ಯವಸ್ಥೆ ಇಲ್ಲದ ಪರಿಣಾಮ‌ ಇಕ್ಕಟ್ಟಿನಲ್ಲಿಯೆ ಕುಳಿತುಕೊಂಡು‌ ಕೆಲಸ ಮಾಡಬೇಕಾಗಿದೆ. ತಿಜೋರಿ ಇಡಲು ಆಗುತ್ತಿಲ್ಲ ಹೀಗಾಗಿ ಕಚೇರಿಗೆ ಸಂಬಂಧಿಸಿದ ಕಡತಗಳು, ಫೈಲ್, ಇತರೆ ದಾಖಲೆಗಳನ್ನು ಟೇಬಲ್ ಮೇಲೆ ಹಾಕಬೇಕಾಗುತ್ತದೆ.

ನೀರು, ಮನೆ, ನಿವೇಶನ‌ ಕರ ತುಂಬಲು, ವಸತಿ ಯೋಜನೆ, ಬದಿ ಬದಿ ವ್ಯಾಪಾರ,  ಹಾಗೂ ಇತರೆ ಕೆಲಸಗಳಿಗೆ ಕಚೇರಿಗೆ ಬರುವ ಜನರು‌ ನಿಂತುಕೊಂಡು ವ್ಯವಹರಿಸಬೇಕಾಗಿದೆ. ಸ್ವಚ್ಛತೆ ಕೆಲಸಕ್ಕೆ ಹೋಗಲು ಹಾಗೂ ತಮ್ಮ ಕೆಲಸ ಮುಗಿಸಿಕೊಂಡು ಕಚೇರಿಗೆ ಬರುವ ಪೌರ ಕಾರ್ಮಿಕರಿಗೆ‌ ವಿಶ್ರಾಂತಿ ಪಡೆಯಲು, ಉಪಾಹಾರ ಸೇವಿಸಲು ವಿಶ್ರಾಂತಿ ಭವನ‌ ನಿರ್ಮಾಣ‌ ಮಾಡದ ಕಾರಣ ಕಚೇರಿಯ ಧ್ವಜದ ಕಟ್ಟೆ,‌ ಮೆಟ್ಟಿಲುಗಳ ಮೇಲೆ ಕುಳಿತುಕೊಳ್ಳುವಂತ ದುಸ್ಥಿತಿ‌ ಇಲ್ಲಿದೆ. ಹೇಳಿಕೊಳ್ಳುವಂತ ಶೌಚಾಲಯ, ಮೂತ್ರಾಲಯಗಳು‌ ಕಚೇರಿಯಲ್ಲಿ‌ ಇಲ್ಲ. ಕಚೇರಿಗೆ ಸಂಬಂಧಿಸಿದ ಟ್ರ್ಯಾಕ್ಟರ್, ಕಸದ ವಾಹನ, ನೀರಿನ ಟ್ಯಾಂಕರ್,‌ ಇತರೆ ವಾಹನಗಳನ್ನು‌‌‌ ನಿಲ್ಲಿಸಲು ಸ್ಥಳಾವಕಾಶ ಇಲ್ಲವಾಗಿದೆ.

ತಾ.ಪಂ ಕಚೇರಿಯಲ್ಲಿ ಸಾಮಾನ್ಯ ಸಭೆ: ಈಗಿನ ಪಟ್ಟಣ‌ ಪಂಚಾಯಿತಿಯಲ್ಲಿ ಸಾಮಾನ್ಯ ಸಭೆ ನಡೆಸಲು ಕಿರಿದಾದ ಸಭಾಂಗಣವಿದೆ. ಅಧಿಕಾರಿಗಳು, ಸದಸ್ಯರು, ಸಿಬ್ಬಂದಿ ಕುಳಿತುಕೊಂಡು ಸಭೆ ನಡೆಸಲು ಅನಾನುಕೂಲವಾಗುತ್ತದೆ ಹೀಗಾಗಿ ಡಿ.23ರಂದು ಜಿಲ್ಲಾ ಉಸ್ತುವಾರಿ ಸಚಿವರಾದ ಶಿವರಾಜ ತಂಗಡಗಿ ನೇತೃತ್ವದಲ್ಲಿ ಸಾಮಾನ್ಯ ಸಭೆಯನ್ನು ತಾಲ್ಲೂಕು ಪಂಚಾಯಿತಿಯ ಸಭಾಂಗಣದಲ್ಲಿ ನಡೆಸಬೇಕಾಯಿತು ಎಂದು ಸಿಬ್ಬಂದಿ ವಿವರಿಸಿದರು.

ಸ್ಥಳೀಯ ಸಂಸ್ಥೆಗಳು ಸೇರಿದಂತೆ‌ ಲೋಕಸಭೆ ಹಾಗೂ ವಿಧಾನಸಭಾ ಮತ್ತು ವಿಧಾನ ಪರಿಷತ್ತಿನ ಸ್ಥಾನಕ್ಕೆ ಚುನಾವಣೆ ನಡೆದರೆ ಪಂಚಾಯಿತಿ ಕಚೇರಿಯಲ್ಲಿ ಎರಡು ಬೂತ್ ತೆರೆಯಲಾಗುತ್ತಿದೆ , ಚುನಾವಣಾಧಿಕಾರಿಗಳು, ಸಿಬ್ಬಂದಿ ಕಿರಿದಾದ ಜಾಗದಲ್ಲಿ ಕುಳಿತು ಚುನಾವಣೆ ಪ್ರಕ್ರಿಯೆ ಮುಗಿಸಿ ಬೂತ್ ಜಾಗದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ ಹೋಗುತ್ತಿರುವುದು ಸಾಮಾನ್ಯವಾಗಿದೆ.

- ಪಟ್ಟಣ ಪಂಚಾಯಿತಿಯ ಹೊಸ ಕಚೇರಿಯ ಕಟ್ಟಡ ನಿರ್ಮಾಣಕ್ಕೆ ತೊಂಡೆತೇವರಪ್ಪನ ದೇವಾಲಯದ ಪರಿಸರದಲ್ಲಿ ನಿವೇಶನ‌ ಗುರುತಿಸಿ ಅಂತಿಮ ಗೊಳಿಸಲಾಗಿದೆ
ದತ್ತಾತ್ರೇಯ ಹೆಗ್ಡೆ ಪಟ್ಟಣ‌ ಪಂಚಾಯಿತಿ ಮುಖ್ಯಾಧಿಕಾರಿ

ಹುಡುಕಾಟದಲ್ಲಿ‌ ಕಾಲ ಕಳೆದ ಅಧಿಕಾರಿಗಳು

ಪಟ್ಟಣ ಪಂಚಾಯಿತಿಯ‌ ಹೊಸ ಕಟ್ಟಡ ನಿರ್ಮಾಣಕ್ಕೆ ಜಾಗದ ಹುಡುಕಾಟದಲ್ಲಿಯೆ ಅಧಿಕಾರಿಗಳು ಹಾಗೂ ಆಡಳಿತ ಮಂಡಳಿಯವರು ಕಾಲ‌ ಕಳೆದರು ಎಂದು ಸ್ಥಳೀಯರು ದೂರುತ್ತಾರೆ. ಪೊಲೀಸ್ ಠಾಣೆಯ ಹಳೆಯ ಕಚೇರಿ ಹಳೆಯ ಪ್ರಾಥಮಿಕ ಆರೋಗ್ಯ ಕೇಂದ್ರ ಹೂಗಾರ ಅವರ‌ ನಿವೇಶನ ಹೀಗೆ ಹಲವು ಕಡೆ ಜಾಗ ಗುರುತಿಸಿದ್ದರೂ ವಿವಿಧ ಕಾರಣಗಳಿಂದಾಗಿ ಅಂತಿಮಗೊಳಿಸಲಿಲ್ಲ.  ಹೀಗಾಗಿ ಪಂಚಾಯಿತಿ ಕಚೇರಿಯಲ್ಲಿಯೇ ಉಳಿಯಬೇಕಾಗಿದೆ ಎಂದು ಹೆಸರು ಬಯಸದ ಸಿಬ್ಬಂದಿಯೊಬ್ಬರು ಅಳಲು ತೋಡಿಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.