
ಕಾರಟಗಿ: ಇಲ್ಲಿಯ ಭತ್ತ ಮತ್ತು ಅಕ್ಕಿ ಉತ್ಪನ್ನಗಳ ವಿಶೇಷ ಎಪಿಎಂಸಿ ಮಾರುಕಟ್ಟೆ ವ್ಯಾಪ್ತಿಯಲ್ಲೇ ಏಷ್ಯಾ ಖಂಡದಲ್ಲೇ ಮೊದಲನೆಯದಾದ ‘ರೈಸ್ ಟೆಕ್ನಾಲಜಿ ಪಾರ್ಕ್’ (ಆರ್‌ಟಿಪಿ) ಇದೆ. ಜೊತೆಗೆ ಸಿದ್ದಾಪುರದ ಉಪ ಮಾರುಕಟ್ಟೆ ಇದೆ. ಇಲ್ಲಿಯ ‘ವಿಶೇಷ’ ಎಪಿಎಂಸಿ ಶ್ರೀಮಂತದ್ದು. ಆದರೆ ಆರ್‌ಟಿಪಿಯ ಭೂಸ್ವಾಧೀನದ ವಿಷಯವಾಗಿ ನ್ಯಾಯಾಲಯದ ಖರ್ಚಿಗೇ ಬಹುಪಾಲು ಆದಾಯ ಸೋರುತ್ತಿದ್ದು, ಅಭಿವೃದ್ದಿಗೆ ಆದ್ಯತೆ ನೀಡಲು ಸಾಧ್ಯವಾಗುತ್ತಿಲ್ಲ. ಮೂಲಭೂತ ಸೌಕರ್ಯ ಅಷ್ಟೇನೂ ಇಲ್ಲ. ಅಭಿವೃದ್ದಿಯಾಗದೆಯೂ ವಿಶೇಷ ಎಂಬ ಕಿರೀಟಗಳ ಧಾರಣೆ ಮುಡಿಗೇರಿಸಿಕೊಂಡಿದೆ’ ಎಂಬ ಅಭಿಪ್ರಾಯ ಕೆಲ ರೈತರು, ವರ್ತಕರದ್ದಾಗಿದೆ.
ಇದನ್ನು ನಿರಾಕರಿಸುವ ವಿಶೇಷ ಎಪಿಎಂಸಿ ಮೂಲಗಳು ಆವರಣದುದ್ದಕ್ಕೂ ಸಿಸಿ ರಸ್ತೆ, ಬೆಳಕಿನ, ಕುಡಿಯುವ ನೀರಿನ, ಸರಕು ಒಣಗಿಸಲು ಕಟ್ಟೆಗಳನ್ನು, ಸುರಕ್ಷತೆಯ ಹಿನ್ನೆಲೆಯಲ್ಲಿ ಗೇಟ್‌ಗಳ ಅಳವಡಿಕೆ, ಗಾರ್ಡ್ ವ್ಯವಸ್ಥೆ ಮಾಡಲಾಗಿದೆ. ಕೃಷಿ ಚಟುವಟಿಕೆಗಳಲ್ಲಿ ತೊಡಗಿದಾಗ, ಎಪಿಎಂಸಿಗೆ ಕೆಲಸದ ನಿಮಿತ್ತ ಬರುವಾಗ ಮೃತರಾದರೆ ರೈತ ಸಂಜೀವಿನಿ ಅಪಘಾತ ವಿಮೆ ಯೋಜನೆ, ಕೃಷಿ ಚಟುವಟಿಕೆಗಳಲ್ಲಿ ತೊಡಗಿದಾಗ ಹಾವು ಕಚ್ಚಿದರೆ ಪರಿಹಾರ ನೀಡುವ ಯೋಜನೆಗಳು ವರದಾನವಾಗಿವೆ.
ಇಲ್ಲಿಯ ಎಪಿಎಂಸಿಗೆ ರೈತರ ಬೆಳೆ ಬರುವುದಿಲ್ಲ. ಬಹಿರಂಗ ಹರಾಜು ಪ್ರಕ್ರಿಯೆ ನಡೆಯುವುದಿಲ್ಲ. ಎಪಿಎಂಸಿ ಆವರಣ 13 ಎಕರೆ ಭೂ ಪ್ರದೇಶ ಹೊಂದಿದೆ. 3 ನಿವೇಶನ ಬಿಟ್ಟರೆ ಉಳಿದೆಲ್ಲವೂ ವ್ಯಾಪಾರಿಗಳಿಗೆ ಲೀಸ್ ಕಂ ಸೇಲ್ ಆಗಿವೆ. ಖಾಲಿ ಇರುವ ನಿವೇಶನಗಳು ಮೂತ್ರಾಲಯವಾಗಿ ಬಳಕೆಯಾಗುತ್ತಿವೆ. ಮುಖ್ಯರಸ್ತೆಗೆ ಹೊಂದಿಕೊಂಡ ಮಳಿಗೆಗಳನ್ನು ಬಾಡಿಗೆಗೆ ನೀಡಲಾಗಿದೆ. 500ಕ್ಕೂ ಹೆಚ್ಚು ಲೈಸನ್ಸ್ ಹೊಂದಿರುವ ದಲಾಲಿ ವ್ಯಾಪಾರಿಗಳಿಗೆ ಸ್ಥಳಾವಕಾಶವಿಲ್ಲದೇ ವಿವಿಧೆಡೆ ಕಾರ್ಯನಿರ್ವಹಿಸುತ್ತಿವೆ.
ಎಪಿಎಂಸಿ ಆವರಣದಲ್ಲಿ ಸಮುದಾಯ ಭವನ, ಉಪಹಾರ ಭವನ, ಶ್ರಮಿಕರ ಭವನ ನಿರುಪಯುಕ್ತವಾಗುಳಿದಿವೆ. ಹರಾಜು ನಡೆದರೂ ಯಾರೂ ಬರುತ್ತಿಲ್ಲ. ರೈತ ಭವನವು ಉಪನೋಂದಣಿ ಕಚೇರಿಯಾಗಿ, ಹಿಂದಿನ ಆಡಳಿ ಕಚೇರಿ ಉಪ ಖಜಾನೆ ಕಚೇರಿಯಾಗಿ ಕಾರ್ಯನಿರ್ವಹಿಸುತ್ತಿವೆ. ಇನ್ನು ಆವರಣದಲ್ಲಿರುವ ಕೊಠಡಿಗಳಲ್ಲೇ ನ್ಯಾಯಾಲಯ, ತಹಶೀಲ್ದಾರ್ ಕಚೇರಿ ಕಾರ್ಯನಿರ್ವಹಿಸುತ್ತಿವೆ. ತಹಶೀಲ್ದಾರ್ ಕಚೇರಿಯ ಕೋಟ್ಯಂತರ ರೂಪಾಯಿ ಬಾಡಿಗೆ ಬಾಕಿ ಉಳಿದಿರುವುದನ್ನು ಬಿಟ್ಟರೆ ಉಳಿದ ಕಚೇರಿಯ ಬಾಡಿಗೆ ನಿಯಮಿತವಾಗಿ ಬರುತ್ತಿದೆ ಎನ್ನುತ್ತವೆ ಮೂಲಗಳು.
ಇರುವ ಎರಡು ಮೂತ್ರಾಲಯ, ಶೌಚಾಲಯಗಳು ಈಚೆಗೆ ಸದಾ ಬಾಗಿಲು ತೆರೆದುಕೊಳ್ಳುತ್ತಿವೆ. ಸರ್ಕಾರ ಶೇ 0.60 ಸೆಸ್ ಜಾರಿ ಮಾಡಿದ್ದೇ ಎಪಿಎಂಸಿಗೆ ಬರುವ ಆದಾಯ. ಜೊತೆಗೆ ಸರ್ಕಾರಿ ಕಚೇರಿಗಳ ಮತ್ತು ವ್ಯಾಪಾರಿ ಮಳಿಗೆಗಳ ಬಾಡಿಗೆ, ಇದಲ್ಲದೇ ಆರ್‌ಟಿಪಿ ಗೋದಾಮು ಬಾಡಿಗೆ, ಸಿದ್ದಾಪುರ ಮಾರುಕಟ್ಟೆಯಲ್ಲಿ ಸಮುದಾಯ ಭವನದ ಬಾಡಿಗೆಯೂ ಆದಾಯದ ಮೂಲಗಳಾಗಿವೆ.
ಕಳೆದ ವರ್ಷ ₹6ಕೋಟಿ ಸೆಸ್ ಸಂಗ್ರಹದ ಗುರಿ ಇತ್ತು, ಆದರೆ ₹6.3 ಕೋಟಿ ಸಂಗ್ರಹಿಸಲಾಗಿತ್ತು. ಪ್ರಸ್ತುತ ₹7 ಕೋಟಿ ಗುರಿ ಹೊಂದಲಾಗಿದ್ದು, ನವೆಂಬರ್ ವೇಳೆಗೆ ₹3.92 ಕೋಟಿ ಗುರಿ ತಲುಪಲಾಗಿದೆ. ಇನ್ನು ಗುರಿ ಮೀರಿ ಸಾಧನೆ ಮಾಡಲು ನನ್ನೊಂದಿಗೆ ಸಹ ಕಾರ್ಯದರ್ಶಿ ಹರೀಶ ಪತ್ತಾರ, ಅಧಿಕಾರಿಗಳಾದ ಗುರುಪ್ರಸಾದ ಚನ್ನಳ್ಳಿ, ಸೈಯದ್ ನಿಸಾರ ಮತ್ತು ಸಿಬ್ಬಂದಿ ಇದ್ದಾರೆ ಎಂಬ ವಿಶ್ವಾಸವನ್ನು ಕಾರ್ಯದರ್ಶಿ ಶಿವಾನಂದ ಕುಂಬಾರ ವ್ಯಕ್ತಪಡಿಸಿದರು.
ಆರ್‌ಟಿ 315. 18 ಎಕರೆ ಜಾಗೆಯಲ್ಲಿದೆ. ಹಿಂದೆ ಭೂಮಿ ಖರೀದಿಗೆ ನೀಡಿದ್ದ, ಭೂ ಸ್ವಾಧೀನ ಮಾಡಿಕೊಂಡಿದ್ದರಲ್ಲಿ 136 ಎಕರೆಗೆ ಸಂಬಂಧಿಸಿದ 36 ಪ್ರಕರಣಗಳು ವಿವಿಧ ನ್ಯಾಯಾಲಯದ ಹಂತದಲ್ಲಿವೆ. ನ್ಯಾಯಾಲಯದ ಖರ್ಚು ಭರಿಸುವಲ್ಲಿ ಎಪಿಎಂಸಿ ಬಹುದೊಡ್ಡ ಆರ್ಥಿಕ ಸಮಸ್ಯೆ ಎದುರಿಸುತ್ತಿದೆ. ಆರ್‌ಟಿಪಿಗೆ ₹155 ಕೋಟಿ ಸಾಲ ಪಡೆಯಲಾಗಿದೆ. ಈಚೆಗೆ ಅಭಿವೃದ್ದಿಗೆ ₹20ಕೋಟಿ ಸಾಲ ಪಡೆಯಲಾಗಿದೆ. ಅಭಿವೃದ್ದಿ ಕಾರ್ಯಗಳಾಗಿವೆಯಾದರೂ ಆದಾಯವಿರದೇ ನಿರುಪಯುಕ್ತವಾಗಿವೆ. ವ್ಯಾಜ್ಯ ಇರದ ಜಾಗೆಯನ್ನು ವ್ಯಾಪಾರಿಗಳಿಗೆ ನೀಡಲು ನಿರ್ಧರಿಸಲಾಗಿದೆ. ಇದೇ ಸಲಹೆಯನ್ನು ಸಚಿವ ಶಿವರಾಜ ತಂಗಡಗಿಯವರೂ ನೀಡಿದ್ದಾರೆ. ಕಾರಟಗಿ ಹಾಗೂ ಸಿದ್ದಾಪುರದಲ್ಲಿಯ ತಲಾ 8 ಗೋದಾಮುಗಳ ಬಾಡಿಗೆ ದುಬಾರಿ ಎಂಬ ಕಾರಣದಿಂದ ಖಾಲಿ ಉಳಿದಿವೆ.
ಇನ್ನು ಸಿದ್ದಾಪುರ ಉಪಮಾರುಕಟ್ಟೆಯಿಂದ ಸಮುದಾಯ ಭವನ, ಆರ್‌ಟಿಪಿಯ ಗೋದಾಮು ಬಾಡಿಗೆ, ಕಾರಟಗಿಯದು ಸೆಸ್ ಹಾಗೂ ಇತರೆ ಕಟ್ಟಡಗಳ ಬಾಡಿಗೆ ಹಣವೇ ಎಪಿಎಂಸಿ ಆದಾಯದ ಮೂಲವಾಗಿವೆ.
ರೈತರಿಗೆ ಎಪಿಎಂಸಿಯಿಂದ ಏನೂ ಸೌಲಭ್ಯ ಇಲ್ಲವೇ ಇಲ್ಲ. ಆವರಣದಲ್ಲಿಯ ರಸ್ತೆಗಳಲ್ಲಿ ಭತ್ತ ಒಣಗಿಸಲು ಬಳಸುತ್ತಿರುವುದೇ ರೈತರಿಗೆ ಬಹುದೊಡ್ಡ ಸೌಲಭ್ಯ. ರೈತರಿಗೆ ರೈತರ ಬದಲು ವರ್ತಕರಿಗೇ ಎಪಿಎಂಸಿ ಹೆಚ್ಚು ಗಮನ ಹರಿಸುತ್ತಿದೆ- ಪರಸಪ್ಪ ಉಪ್ಪಾರ 2ನೇ ವಾರ್ಡ್‌ನ ರೈತ
ಮತ್ತಷ್ಟು ಅಭಿವೃದ್ದಿ ಕಾರ್ಯ ಕೈಗೆತ್ತಿಕೊಂಡು ರೈತರಿಗೆ ವರ್ತಕರಿಗೆ ಹೆಚ್ಚಿನ ಸೌಕರ್ಯ ಕಲ್ಪಿಸಬೇಕು ಎಂದು ಉತ್ಸುಕತೆಯಿಂದ ಕೆಲಸ ಮಾಡುತ್ತಿದ್ದೇವೆ. ನ್ಯಾಯಾಲದಲ್ಲಿರುವ ಪ್ರಕರಣಗಳು ಇತ್ಯರ್ಥವಾದರೆ ಅಭಿವೃದ್ದಿ ಕಾರ್ಯಕ್ಕೆ ಪ್ರಥಮಾದ್ಯತೆ ನೀಡಲಾಗುವುದು-ಶಿವಾನಂದ ಕುಂಬಾರ ಕಾರ್ಯದರ್ಶಿ ಭತ್ತ ಮತ್ತು ಅಕ್ಕಿ ಉತ್ಪನ್ನಗಳ ವಿಶೇಷ ಎಪಿಎಂಸಿ ಕಾರಟಗಿ
ಪಟ್ಟಣದ ಎಪಿಎಂಸಿಯಲ್ಲಿ ಮೂಲ ಸೌಕರ್ಯ ಕಲ್ಪಿಸಬೇಕು. ಆವರಣ ಗೋಡೆ ಎತ್ತರಿಸಬೇಕು. ಶೌಚಾಲಯ ಮೂತ್ರಾಲಯ ನಿರ್ಮಿಸುವುದಕ್ಕೆ ಆದ್ಯತೆ ನೀಡಬೇಕು ಎಂದು ಸಲ್ಲಿಸಿದ ಮನವಿಗೆ ಕಾರ್ಯದರ್ಶಿ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆಬಸವರಾಜ್ ಪಗಡದಿನ್ನಿ ದಲಾಲಿ ವರ್ತಕರ ಸಂಘದ ಅಧ್ಯಕ್ಷ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.