ಕಾರಟಗಿ: ಸಂಯೋಜನೆ ಹೆಸರಲ್ಲಿ ಸರ್ಕಾರಿ ಶಾಲೆ ಮುಚ್ಚುವ ನಿರ್ಧಾರ ಖಂಡಿಸಿ, ಎಐಡಿಎಸ್ಓ ವಿದ್ಯಾರ್ಥಿ ಸಂಘಟನೆ ಸದಸ್ಯರು ತಾಲ್ಲೂಕಿನ ಉಳೇನೂರ ಗ್ರಾಮದಲ್ಲಿ ಭಾನುವಾರ ಸಾರ್ವಜನಿಕರ ಸಹಿ ಸಂಗ್ರಹ ಅಭಿಯಾನ ನಡೆಸಿದರು.
ಸ್ಥಳೀಯ ಸಮಿತಿ ಮುಖಂಡ, ಎಐಡಿಎಸ್ಓ ಜಿಲ್ಲಾ ಸಂಚಾಲಕ ಗಂಗರಾಜ ಅಳ್ಳಳ್ಳಿ ಮಾತನಾಡಿ, ‘ಸರ್ಕಾರಿ ಶಾಲೆಗಳಿಗೆ ಉತ್ತೇಜನ ನೀಡಿ, ಗುಣಮಟ್ಟ ಹೆಚ್ಚಿಸಿ, ಸರ್ವರಿಗೂ ಶಿಕ್ಷಣ ದೊರಕಿಸಲು ಮುಂದಾಗಬೇಕೇ ಹೊರತು ಸರ್ಕಾರಿ ಶಾಲೆಗಳನ್ನು ಮುಚ್ಚುವ ನಿರ್ಧಾರ ಕೈಬಿಡಬೇಕು’ ಎಂದು ಆಗ್ರಹಿಸಿದರು.
‘ಸರ್ಕಾರದ ನಿರ್ಧಾರ ಖಂಡಿಸಿ 50 ಲಕ್ಷ ಸಹಿ ಸಂಗ್ರಹದ ಗುರಿ ಹೊಂದಲಾಗಿದೆ. ಮುಚ್ಚುವ ಪಟ್ಟಿಯ ಶಾಲೆಗಳ ಪೈಕಿ ಉಳೆನೂರು, ಬೆನ್ನೂರು ತಾಂಡಾ, ಶಾಲಿಗನೂರು, ಈಳಿಗನೂರಕ್ಯಾಂಪ್, ಬೂದಗುಂಪ ಶಾಲೆಗಳೂ ಸೇರಿವೆ. ನಮ್ಮ ಅಭಿಯಾನಕ್ಕೆ ಗ್ರಾಮಸ್ಥರು ಸಹಕಾರ ನೀಡಿ ಪ್ರೋತ್ಸಾಹಿಸಿದ್ದಾರೆ’ ಎಂದರು. ಎಐಡಿಎಸ್ಓ ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯ ರವಿಕಿರಣ ಮಾತನಾಡಿದರು.
ರಾಜ್ಯ ಕಾರ್ಯಕಾರಿ ಮಂಡಳಿ ಸದಸ್ಯರಾದ ಸಿಂಧು ಕೆ, ಸಂಘಟಕ ಬಾಬು ಶಾಲುಂಚಮರ ಕಾರ್ಯಕರ್ತರಾದ ಸದಾಶಿವ, ಬಾಬು, ದೀಪ, ದುರ್ಗಮ್ಮ, ವಿಜಯಲಕ್ಷ್ಮಿ ದೇವಮ್ಮ ,ರಮೇಶ, ಲಕ್ಷ್ಮಣ, ಶಾಂತಮ್ಮ, ರುದ್ರೇಶ, ಹುಲ್ಲೇಶ, ವಿದ್ಯಾರ್ಥಿಗಳು, ಸ್ಥಳೀಯ ನಿವಾಸಿಗಳು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.