ADVERTISEMENT

ಮದ್ಯ, ಜೂಜಾಟ, ಮಟ್ಕಾ ನಿಷೇಧಕ್ಕೆ ನಿರ್ಧಾರ

ಬೂದಗುಂಪಾ ಸಿದ್ದೇಶ್ವರ ಶ್ರೀಗಳ ನೇತೃತ್ವದಲ್ಲಿ ಉಳೆನೂರಲ್ಲಿ ಗ್ರಾಮಸಭೆ

​ಪ್ರಜಾವಾಣಿ ವಾರ್ತೆ
Published 24 ಜನವರಿ 2026, 5:12 IST
Last Updated 24 ಜನವರಿ 2026, 5:12 IST
ಕಾರಟಗಿ ತಾಲ್ಲೂಕಿನ ಉಳೆನೂರಲ್ಲಿ ನಡೆದ ಗ್ರಾಮಸಭೆಯಲ್ಲಿ ಅಧಿಕಾರಿಗಳಿಗೆ ಮಹಿಳೆಯರು ಮನವಿ ಸಲ್ಲಿಸಿದರು
ಕಾರಟಗಿ ತಾಲ್ಲೂಕಿನ ಉಳೆನೂರಲ್ಲಿ ನಡೆದ ಗ್ರಾಮಸಭೆಯಲ್ಲಿ ಅಧಿಕಾರಿಗಳಿಗೆ ಮಹಿಳೆಯರು ಮನವಿ ಸಲ್ಲಿಸಿದರು   

ಕಾರಟಗಿ: ಅನೇಕ ಸಂಸಾರಗಳ ಸಂಬಂಧದ ಕೊಂಡಿ ಕಳಚುವ, ಮಾರಕ ರೋಗಕ್ಕೆ ತುತ್ತಾಗಿಸುವ, ಸಾಲದ ಸುಳಿಯಲ್ಲಿ ಸಿಲುಕಿಸಿ ಜೀವನವನ್ನೇ ಹಾಳು ಮಾಡುವ ಮದ್ಯ, ಜೂಜಾಟ, ಮಟ್ಕಾ ನಿಷೇಧಕ್ಕೆ ತಾಲ್ಲೂಕಿನ ಉಳೆನೂರಲ್ಲಿ ಬೂದಗುಂಪಾ ಸಿದ್ದೇಶ್ವರ ಶ್ರೀಗಳ ನೇತೃತ್ವದಲ್ಲಿ ನಡೆದ ಗ್ರಾಮಸಭೆಯಲ್ಲಿ ಸಾರ್ವಜನಿಕರು ಶುಕ್ರವಾರ ನಿರ್ಧಾರ ಕೈಗೊಂಡರು.

ಗ್ರಾಮದಲ್ಲಿ ನಿರಂತರವಾಗಿ ನಡೆಯುತ್ತಿರುವ ಕಾನೂನು ಬಾಹಿರ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಆಗಮಿಸಿದ್ದ ವಿವಿಧ ಇಲಾಖೆಗಳ ಅಧಿಕಾರಿಗಳಿಗೆ ಗ್ರಾಮದ ಮಹಿಳೆಯರು, ನಾಗರಿಕರು ಮನವಿ ಸಲ್ಲಿಸಿ ಆಗ್ರಹಿಸಿದರು.

ಶಿಕ್ಷಕ ಭೀಮಣ್ಣ ಮಾತನಾಡಿ,‘ಉಳೇನೂರು ಗ್ರಾಮವು ಕಲೆ ಮತ್ತು ಕ್ರೀಡೆಯಲ್ಲಿ ಮುಂದಿರುವ ಹಾಗೂ ಬಹಳಷ್ಟು ಜನ ಯುವಕರನ್ನು ಒಳಗೊಂಡಿರುವ ಗ್ರಾಮವಾಗಿದೆ. ಆದರೆ, ಆ ಯುವಕರು ಸರಿಯಾದ ಮಾರ್ಗದರ್ಶನವಿಲ್ಲದೇ ದುಶ್ಚಟಗಳಿಗೆ ಬಲಿಯಾಗಿ, ವ್ಯಸನಿಗಳಾಗಿ, ಜೀವನವನ್ನೇ ಹಾಳು ಮಾಡಿಕೊಳ್ಳುತ್ತಿರುವುದು ದುರಂತವೇ ಸರಿ. ದುಶ್ಚಟಗಳಿಗೆ ಕಡಿವಾಣ ಹಾಕುವ ನಿರ್ಧಾರ ಕೈಗೊಂಡಿರುವುದು ಐತಿಹಾಸಿಕ ಕ್ಷಣವಾಗಿದೆ’ ಎಂದರು.

ADVERTISEMENT

ಅಬಕಾರಿ ನಿರೀಕ್ಷಕ ವಿಠಲ್ ಮಾತನಾಡಿ,‘ಇಲಾಖೆ ಮಾಡಬೇಕಾದ ಕೆಲಸವನ್ನು ಗ್ರಾಮದ ಯುವಕರು ಮಾಡಿರುವುದು ಶ್ಲಾಘನಾರ್ಹ. ಗಂಗಾವತಿ ವ್ಯಾಪ್ತಿಯಲ್ಲಿ ಈಗಾಗಲೇ 8 ಹಳ್ಳಿಗಳಲ್ಲಿ ಮದ್ಯ ನಿಷೇಧ ಮಾಡಿ ವ್ಯಸನಮುಕ್ತ ಗ್ರಾಮಗಳನ್ನಾಗಿ ಘೋಷಣೆ ಮಾಡಲಾಗಿದೆ. ಅದರಲ್ಲಿ ಉಳೇನೂರು ಗ್ರಾಮವೂ ಒಂದಾಗಿದೆ. ಗ್ರಾಮಸ್ಥರು ಗ್ರಾಮಸಭೆ ನಡೆಸಿ, ಅಧಿಕಾರಿಗಳನ್ನು ಕರೆಸಿರುವುದು ಆರೋಗ್ಯಕರ ಬೆಳವಣಿಗೆ. ಅಕ್ರಮ ಚಟುವಟಿಕೆಗಳು ನಡೆದರೆ ನೇರವಾಗಿ ನಮ್ಮನ್ನು ಸಂಪರ್ಕಿಸಿ, ನಿಮ್ಮೊಂದಿಗೆ ನಾವೂ ಕೈಜೋಡಿಸುತ್ತೇವೆ’ ಎಂದರು.

ಅನೇಕ ಮಹಿಳೆಯರು, ಸಂತ್ರಸ್ತೆಯರು,‘ನಮ್ಮೂರಿನಲ್ಲಿ ಮದ್ಯಪಾನ ನಿಷೇಧ ಆಗಲೇಬೇಕು. ನಮ್ಮ ಮಕ್ಕಳು, ಪತಿಯರು ಕುಡಿದು ಗಲಾಟೆ ಮಾಡಿ ಎಷ್ಟೋ ಸಂಸಾರಗಳು ಹಾಳಾಗಿವೆ. ಗ್ರಾಮಸಭೆ ಮಾಡಿ ಒಳ್ಳೆಯ ನಿರ್ಧಾರ ತೆಗೆದುಕೊಂಡಿರುವುದು ಅತೀವ ಸಂತಸವನ್ನುಂಟು ಮಾಡಿದೆ. ಉಳೇನೂರು ಗ್ರಾಮದಲ್ಲಿ ಮದ್ಯ, ಜೂಜಾಟ, ಮಟ್ಕಾ ಶಾಶ್ವತವಾಗಿ ನಿಷೇಧಿಸಬೇಕು’ ಎಂದು ಆಗ್ರಹಿಸಿ ಕಂದಾಯ, ಪೊಲೀಸ್‌, ಅಬಕಾರಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಗ್ರಾಮಸಭೆಯಲ್ಲಿ ಮಹಿಳೆಯರು, ಹಿರಿಯರು, ಯುವಕರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.