ADVERTISEMENT

ಯಲಬುರ್ಗಾ: ಮಹಿಳೆಗೆ ಅನುಕಂಪಕ್ಕಿಂತ ಅವಕಾಶ ಮುಖ್ಯ, ಡಾ.ಪಾರ್ವತಿ ಪಲೋಟಿ

ಕುಷ್ಟಗಿ ಇನ್ನರ್‌ ವ್ಹೀಲ್ ಕ್ಲಬ್‍ನ ಮಾಜಿ ಅಧ್ಯಕ್ಷೆ ಡಾ.ಪಾರ್ವತಿ ಪಲೋಟಿ ಅಭಿಮತ

​ಪ್ರಜಾವಾಣಿ ವಾರ್ತೆ
Published 28 ಜುಲೈ 2021, 6:45 IST
Last Updated 28 ಜುಲೈ 2021, 6:45 IST
ಯಲಬುರ್ಗಾದಲ್ಲಿ ನಡೆದ ಕಾರ್ಯಕ್ರಮದಲ್ಲಿ ಡಾ.ಪಾರ್ವತಿ ಮಾತನಾಡಿದರು
ಯಲಬುರ್ಗಾದಲ್ಲಿ ನಡೆದ ಕಾರ್ಯಕ್ರಮದಲ್ಲಿ ಡಾ.ಪಾರ್ವತಿ ಮಾತನಾಡಿದರು   

ಯಲಬುರ್ಗಾ: ‘ಮಹಿಳೆಯರು ಆರ್ಥಿಕ, ಸಾಮಾಜಿಕ ಹಾಗೂ ರಾಜಕೀಯವಾಗಿ ಸಬಲರಾಗಲು ಪ್ರತಿ ಕ್ಷೇತ್ರದಲ್ಲೂ ಮುಂಚೂಣಿಗೆ ಬರಬೇಕು’ ಎಂದು ಕುಷ್ಟಗಿ ಇನ್ನರ್‌ ವ್ಹೀಲ್ ಕ್ಲಬ್‍ನ ಮಾಜಿ ಅಧ್ಯಕ್ಷೆ ಡಾ.ಪಾರ್ವತಿ ಪಲೋಟಿ ಹೇಳಿದರು.

ಕಾರ್ಗಿಲ್ ವಿಜಯೋತ್ಸವದ ಅಂಗವಾಗಿ ಇಲ್ಲಿನ ಜ್ಞಾನಸಾಗರ ಪ್ರೌಢ ಶಾಲೆಯಲ್ಲಿ ಇನ್ನರ್‌ ವ್ಹೀಲ್ ಕ್ಲಬ್ ಆಯೋಜಿಸಿದ್ದ ಮಾಜಿ ಸೈನಿಕರು ಹಾಗೂ ಪತ್ರಕರ್ತರ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ಪ್ರತಿ ಕ್ಷೇತ್ರದಲ್ಲೂ ವಿಶೇಷ ಸಾಧನೆ ಮಾಡುವ ಮೂಲಕ ಸಾಮರ್ಥ್ಯ ಸಾಬೀತು ಪಡಿಸಿಕೊಳ್ಳುತ್ತಿರುವ ಮಹಿಳೆಯರಿಗೆ ಅನುಕಂಪಕ್ಕಿಂತಲೂ ಅವಕಾಶ ಮುಖ್ಯ. ಅವರನ್ನು ಅವಕಾಶ ವಂಚಿತರನ್ನಾಗಿ ಮಾಡಬಾರದು. ಸ್ವಾವಲಂಬಿ ಬದುಕು ರೂಪಿಸಿಕೊಳ್ಳುವ ನಿಟ್ಟಿನಲ್ಲಿ ಅವರಿಗೆ ಸ್ವಾತಂತ್ರ್ಯ ಸಿಗಬೇಕಾಗಿದೆ’ ಎಂದರು.

ADVERTISEMENT

ಡಾ. ರಾಜಲಕ್ಷ್ಮಿ ಮಾತನಾಡಿ,‘ಮಹಿಳೆಯರು ಕ್ರಿಯಾತ್ಮಕ ಚಟುವಟಿಕೆಗಳ ಮೂಲಕ ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸುವ ಕೆಲಸ ಮಾಡಬೇಕಾಗಿದೆ. ಕೇವಲ ನಾಲ್ಕು ಗೋಡೆಗಳ ನಡುವೆ ಉಳಿದರೆ ಮಹಿಳೆಯರ ಸರ್ವಾಂಗೀಣ ಅಭಿವೃದ್ಧಿ ಕಷ್ಟ ಸಾಧ್ಯ’ ಎಂದರು.

ಪ.ಪಂ. ಸದಸ್ಯೆ ಡಾ. ನಂದಿತಾ ದಾನರೆಡ್ಡಿ ಮಾತನಾಡಿ,‘ಸ್ಥಳೀಯ ಕ್ಲಬ್ ಸದಸ್ಯರು ಸಾಕಷ್ಟು ರಚನಾತ್ಮಕ ಕಾರ್ಯಕ್ರಮಗಳನ್ನು ಆಯೋಜಿಸಿ ಅತ್ಯಲ್ಪ ಅವಧಿಯಲ್ಲಿಯೇ ಮೆಚ್ಚುಗೆಗೆ ಪಾತ್ರವಾಗಿದ್ದಾರೆ. ಇನ್ನಷ್ಟು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ಆ ಮೂಲಕ ಸಮಾಜ ಸೇವೆಯಲ್ಲಿ ತೊಡಗಬೇಕು’ ಎಂದು ಅವರು ಹೇಳಿದರು.

ಕ್ಲಬ್‌ ಅಧ್ಯಕ್ಷೆ ಜ್ಯೋತಿ ಪಲ್ಲೇದ ಮಾತನಾಡಿ,‘ದೇಶ ಕಾಯುವ ಯೋಧರು ನಿತ್ಯ ಸ್ಮರಣೀಯರು. ಅವರ ಕೊಡುಗೆಯನ್ನು ಮರೆಯುವಂತಿಲ್ಲ. ಅವರಿಗೆ ನಾವು ವಿಧೇಯರಾಗಿರಬೇಕು’ ಎಂದು ಸ್ಮರಿಸಿದರು.

ಮಾಜಿ ಯೋಧ ಸುಖಮುನಿ ತೋಟದ, ಮಲ್ಲು ಮಾಟರಂಗಿ, ಶರಣಪ್ಪ ಪಾಟೀಲ ಮಾತನಾಡಿದರು. ಮಾಜಿ ಯೋಧರಿಗೆ, ಪತ್ರಕರ್ತರಿಗೆ ಸನ್ಮಾನಿಸಿ ಗೌರವಿಸಲಾಯಿತು. ಕಾರ್ಯದರ್ಶಿ ಸವಿತಾ ಬನಪ್ಪಗೌಡ್ರ, ಲತಾ ಕಲ್ಯಾಣಿ, ಕೀರ್ತಿ ಜಕ್ಕಲಿ, ಸವಿತಾ ಓಜನಹಳ್ಳಿ, ಚೆನ್ನಮ್ಮ ಪಾಟೀಲ, ಶೋಭಾ ಬೇಲೇರಿ ಹಾಗೂ ಶಾರದಾ ಕೊನ್ನೂರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.