ADVERTISEMENT

ಅಳವಂಡಿ: ಜ್ಯೋತಿ ರಥಯಾತ್ರೆ ಮೆರವಣಿಗೆ ಅದ್ದೂರಿ

​ಪ್ರಜಾವಾಣಿ ವಾರ್ತೆ
Published 28 ನವೆಂಬರ್ 2023, 5:52 IST
Last Updated 28 ನವೆಂಬರ್ 2023, 5:52 IST
ಕರ್ನಾಟಕ ಸಂಭ್ರಮ 50ರ ಅಂಗವಾಗಿ ಸಂಚರಿಸಲಿರುವ ಜ್ಯೋತಿ ರಥಯಾತ್ರೆ ಅಳವಂಡಿ ಗ್ರಾಮಕ್ಕೆ ಆಗಮಿಸಿದ್ದಂತೆ ಗಣ್ಯರು ಸ್ವಾಗತಿಸಿದರು
ಕರ್ನಾಟಕ ಸಂಭ್ರಮ 50ರ ಅಂಗವಾಗಿ ಸಂಚರಿಸಲಿರುವ ಜ್ಯೋತಿ ರಥಯಾತ್ರೆ ಅಳವಂಡಿ ಗ್ರಾಮಕ್ಕೆ ಆಗಮಿಸಿದ್ದಂತೆ ಗಣ್ಯರು ಸ್ವಾಗತಿಸಿದರು    

ಅಳವಂಡಿ: ಕರ್ನಾಟಕ ಸಂಭ್ರಮ 50ರ ಅಂಗವಾಗಿ ಜಿಲ್ಲೆಯಾದ್ಯಂತ ಸಂಚರಿಸಲಿರುವ ಜ್ಯೋತಿ ರಥಯಾತ್ರೆ ಸೋಮವಾರ ಅಳವಂಡಿ ಗ್ರಾಮಕ್ಕೆ ಆಗಮಿಸಿದ್ದಂತೆ ಅದ್ಧೂರಿಯಾಗಿ ಸ್ವಾಗತಿಸಲಾಯಿತು.

ಗ್ರಾಮದ ಉಪತಹಸೀಲ್ದಾರ್ ಕಚೇರಿಯಿಂದ ಪ್ರಾರಂಭವಾದ ಜ್ಯೋತಿ ರಥಯಾತ್ರೆಯ ಮೆರವಣಿಗೆ ಬಸ್ ನಿಲ್ದಾಣದವರೆಗೆ ನಡೆಯಿತು. ವಿವಿಧ ಇಲಾಖೆ ಅಧಿಕಾರಿಗಳು, ಮುಖಂಡರು, ಕನ್ನಡ ಅಭಿಮಾನಿಗಳು ಜ್ಯೋತಿ ರಥಯಾತ್ರೆಗೆ ಪುಷ್ಪ ಸಮರ್ಪಣೆ ಮಾಡಿದರು.

ಮೆರವಣಿಗೆಯಲ್ಲಿ ಮಹಿಳೆಯರು ಕುಂಭ ಹಾಗೂ ಕಳಸ ಹೊತ್ತು ಸಾಗಿದರು. ಕಸ್ತೂರ ಬಾ ಗಾಂಧಿ ಬಾಲಕಿಯರ ವಸತಿ ಶಾಲೆಯ ವಿದ್ಯಾರ್ಥಿಗಳ ಡೊಳ್ಳಿನ ಕುಣಿತ ಹಾಗೂ ಕೊಪ್ಪಳದ ಗವಿಸಿದ್ದೇಶ್ವರ ಬುಡ್ಗ-ಜಂಗಮ ಕಲಾವಿದರ ತಂಡದ ನೃತ್ಯ ಹಾಗೂ ವಿವಿಧ ಕಲಾತಂಡಗಳ ವಾದ್ಯ ಮೇಳಗಳು ಮೆರವಣಿಗೆಯಲ್ಲಿ ಗಮನ ಸೆಳೆಯಿತು.

ADVERTISEMENT
ಅಳವಂಡಿ ಗ್ರಾಮದಲ್ಲಿ ನಡೆದ ಜ್ಯೋತಿ ರಥಯಾತ್ರೆ ಮೆರವಣಿಗೆಯಲ್ಲಿ ವಿವಿಧ ಕಲಾ ತಂಡದವರಿಂದ ನಡೆದ ನೃತ್ಯ ಪ್ರದರ್ಶನ ಗಮನ ಸೆಳೆಯಿತು

ನೂರಾರು ಶಾಲಾ ವಿದ್ಯಾರ್ಥಿಗಳು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ಅಂಗನವಾಡಿ ಮಕ್ಕಳು ಸ್ವಾತಂತ್ರ್ಯ ಹೋರಾಟಗಾರರ ವೇಷ ಭೂಷಣಗಳನ್ನು ಧರಿಸಿ ಕಣ್ಮನ ಸೆಳೆದರು. ನಂತರ ವಿವಿಧ ಕಲಾ ತಂಡದವರಿಂದ ಕನ್ನಡ ಗೀತೆಗಳ ನೃತ್ಯ ಪ್ರದರ್ಶನ ನಡೆಯಿತು. ನಾಡದೇವಿಗೆ ಹಾಗೂ ರಥಕ್ಕೆ ಪೂಜೆ ಸಲ್ಲಿಸಲಾಯಿತು.

ಅಳವಂಡಿ ಗ್ರಾಮದಲ್ಲಿ ಜ್ಯೋತಿ ರಥಯಾತ್ರೆ ಮೆರವಣಿಗೆ ನಡೆಯಿತು

ತಹಸೀಲ್ದಾರ್ ವಿಠಲ್ ಚೌಗಲೆ, ತಾ.ಪಂ.ಇಒ ದುಂಡಪ್ಪ ತುರಾದಿ, ಗ್ರಾ.ಪಂ.ಅಧ್ಯಕ್ಷೆ ಶಂಕ್ರಮ್ಮ ಜೋಗಿನ್, ಉಪಾಧ್ಯಕ್ಷೆ ಶಾರಮ್ಮ ಇಳಗೇರಾ, ಉಪತಹಶೀಲ್ದಾರ್‌ ಶ್ರೀನಾಥ ಜೋಶಿ, ಕಂದಾಯ ನಿರೀಕ್ಷಕ ಸುರೇಶ, ಪಿಡಿಒ ಕೊಟ್ರಪ್ಪ ಅಂಗಡಿ, ಕಾರ್ಯದರ್ಶಿ ಬಸವರಾಜ, ಸಿಆರ್‌ಪಿ ವಿಜಯಕುಮಾರ ಟಿಕಾರೆ, ಐಇಸಿ ಸಂಯೋಜಕ ದೇವರಾಜ, ಕಸಾಪ ಹೋಬಳಿ ಘಟಕದ ಅಧ್ಯಕ್ಷ ಸುರೇಶ ಸಂಗರಡ್ಡಿ, ಗ್ರಾ.ಪಂ.ಸದಸ್ಯರು, ಮಹಿಳಾ ಸಂಘದ ಸದಸ್ಯರು, ಶಾಲಾ ಶಿಕ್ಷಕರು, ಮಕ್ಕಳು ಹಾಗೂ ಗ್ರಾಮಸ್ಥರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.