ADVERTISEMENT

ಸಮಸಮಾಜ ಬಯಸದವರು ಸಮೀಕ್ಷೆ ವಿರೋಧಿಸುತ್ತಿದ್ದಾರೆ: ಸಿದ್ದರಾಮಯ್ಯ

​ಪ್ರಜಾವಾಣಿ ವಾರ್ತೆ
Published 6 ಅಕ್ಟೋಬರ್ 2025, 8:36 IST
Last Updated 6 ಅಕ್ಟೋಬರ್ 2025, 8:36 IST
<div class="paragraphs"><p>ಸಿದ್ದರಾಮಯ್ಯ</p></div>

ಸಿದ್ದರಾಮಯ್ಯ

   

ಕೊಪ್ಪಳ: ಜನರ ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯಲ್ಲಿ ಯಾವ ಜಾತಿಯವರನ್ನು ತುಳಿಯುವ ಪ್ರಶ್ನೆಯಿಲ್ಲ. ಸಮಸಮಾಜ ಬಯಸದವರು ಮಾತ್ರ ಸಮೀಕ್ಷೆ ವಿರೋಧಿಸುತ್ತಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಅವರು ಸೋಮವಾರ ಕೊಪ್ಪಳದಲ್ಲಿ ಮಾಧ್ಯಮದವರ ಜೊತೆ ಮಾತನಾಡಿ ಮೇಲ್ಜಾತಿಗಳನ್ನು ತುಳಿಯಲು ಸಮೀಕ್ಷೆ ನಡೆಸಲಾಗುತ್ತಿದೆ ಎಂಬ ಕೇಂದ್ರ ಸಚಿವ ಸೋಮಣ್ಣ ಆರೋಪಿಸಿರುವ ಬಗ್ಗೆ ಪ್ರತಿಕ್ರಿಯೆ ನೀಡಿ, ಜನರ ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯನ್ನು ನಡೆಸದಿದ್ದರೆ, ಸಮಾಜದಲ್ಲಿ ಜನರ ಸ್ಥಿತಿಗತಿ ಬಗ್ಗೆ ಅರಿಯಲು ಸಾಧ್ಯವಿಲ್ಲ. ಈ ಸಮೀಕ್ಷೆಯಲ್ಲಿ ಯಾವ ಜಾತಿಯವರನ್ನು ತುಳಿಯುವ ಪ್ರಶ್ನೆಯಿಲ್ಲ. ಸಮಸಮಾಜ ನಿರ್ಮಾಣವನ್ನು ವಿರೋಧಿಸುವವರು ಮಾತ್ರ ಇಂತಹ ಹೇಳಿಕೆಗಳನ್ನು ನೀಡುವ ಮೂಲಕ ಜನರ ದಾರಿ ತಪ್ಪಿಸುತ್ತಿದ್ದಾರೆ. ಈಗಾಗಲೇ 1.10 ಕೋಟಿ ಕುಟುಂಬಗಳ ಸಮೀಕ್ಷಾ ಕಾರ್ಯ ಮುಗಿದಿದೆ. ಭಾನುವಾರ ಶೇ.63ರಷ್ಟು ಸರ್ವೇ ಕಾರ್ಯ ಪ್ರಗತಿಯಾಗಿದೆ ಎಂದರು.

ADVERTISEMENT

ಕೊಪ್ಪಳದಲ್ಲಿ ಲೋಕಸಭೆ ಚುನಾವಣೆಗೆ ಸ್ಪರ್ಧಿಸಿದ್ದಾಗ ಕಡಿಮೆ ಅಂತರದಲ್ಲಿ ಸೋತಿದ್ದರೂ, ಕೊಪ್ಪಳದ ಜನ ತನ್ನನ್ನು ಆಶೀರ್ವದಿಸಿದ್ದರು ಎಂದು ಸ್ಮರಿಸಿದ ಮುಖ್ಯಮಂತ್ರಿಗಳು ಜನತೆಗೆ ಧನ್ಯವಾದಗಳನ್ನು ತಿಳಿಸಿದರು.

ಬಲ್ಡೋಟಾ ಕಾರ್ಖಾನೆ ಯೋಜನೆ ಕುರಿತಂತೆ ಕೊಪ್ಪಳದಲ್ಲಿ ಹೋರಾಟಗಳು .ನಡೆದಿರುವ ಬಗ್ಗೆ ಪ್ರತಿಕ್ರಿಯೆ ನೀಡಿ, ಬಲ್ಡೋಟಾ ಕಾರ್ಖಾನೆಯ ವಿಚಾರ ನ್ಯಾಯಾಲಯದಲ್ಲಿ ವಿಲೇವಾರಿ ಆಗಬೇಕಾಗಿದ್ದು ತೀರ್ಪಿನ ನಂತರ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.

ಎಂಎಸ್ ಪಿ ಎಲ್ ಸೇರಿದಂತೆ ವಿವಿಧ ಕೈಗಾರಿಕೆಗಳಿಂದ ಬರುವ ದೂಳಿನಿಂದ ಪರಿಸರ ಮಾಲಿನ್ಯವಾಗುತ್ತಿದ್ದು, ಇದನ್ನು ತಡೆಗಟ್ಟಲು ಸರ್ಕಾರದ ಕ್ರಮ ತೆಗೆದುಕೊಳ್ಳುತ್ತಿದೆಯೇ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿ, ಕಾರ್ಖಾನೆಗಳಿಂದ ಬರುವ ದೂಳನ್ನು ಪರೀಕ್ಷೆ ನಡೆಸಿ, ದೂಳು ಬರದಂತೆ ಕ್ರಮ ತೆಗೆದುಕೊಳ್ಳುವ ಬಗ್ಗೆ ಪರಿಶೀಲನೆ ನಡೆಸಲಾಗುವುದು ಎಂದರು.

ಲಿಂಗಾಯತ ಧರ್ಮವನ್ನು ಪ್ರತ್ಯೇಕ ಧರ್ಮ ಎನ್ನುವ ಬಗ್ಗೆ ನಿಲುವೇನು ಎಂಬ ಪ್ರಶ್ನೆಗೆ ಉತ್ತರಿಸಿ, ಜನರು ಸ್ವಯಂಪ್ರೇರಣೆಯಿಂದ ತಮ್ಮ ಧರ್ಮವನ್ನು ತಿಳಿಸಿದಂತೆ, ಸಮೀಕ್ಷಾಗಾರರು ಧರ್ಮವನ್ನು ನಮೂದಿಸಿಕೊಳ್ಳುತ್ತಾರೆ. ಈ ಬಗ್ಗೆ ಜನರ ನಿಲುವೇ ನನ್ನ ನಿಲುವು ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.