ಅಳವಂಡಿ: ಇಲ್ಲಿಗೆ ಸಮೀಪದ ಕವಲೂರು ಗ್ರಾಮದಲ್ಲಿ ಉಜ್ಜಯಿನಿ ಮಹಾಪೀಠದ ಸಿದ್ದಲಿಂಗ ರಾಜದೇಶೀಕೇಂದ್ರ ಶಿವಾಚಾರ್ಯ ಸ್ವಾಮೀಜಿಯವರ ಅಡ್ಡಪಲ್ಲಕ್ಕಿ ಮಹೋತ್ಸವ ಬುಧವಾರ ಅದ್ಧೂರಿಯಾಗಿ ನೆರವೇರಿತು.
ವಿವಿಧ ಹೂಗಳು ಹಾಗೂ ವಸ್ತುಗಳಿಂದ ಅಲಂಕೃತಗೊಂಡ ಅಡ್ಡಪಲ್ಲಕ್ಕಿಯಲ್ಲಿ ಸಿದ್ದಲಿಂಗ ರಾಜದೇಶೀಕೇಂದ್ರ ಶಿವಾಚಾರ್ಯರ ಉತ್ಸವ ಜರುಗಿತು.
ಅಡ್ಡಪಲ್ಲಕ್ಕಿ ಮಹೋತ್ಸವದಲ್ಲಿ ಮಹಿಳೆಯರು ಕುಂಭ ಹಾಗೂ ಕಳಸ ಹೊತ್ತು ಸಾಗಿದರು. ನಂದಿಕೋಲು, ಡೊಳ್ಳಿನ ಮೇಳ ಹಾಗೂ ಭಜನಾ ಮಂಡಳಿ ಭಕ್ತಿ ಗೀತೆಗಳು ಉತ್ಸವಕ್ಕೆ ಮೆರುಗು ನೀಡಿದವು.
ಗ್ರಾಮದ ಮಾರುತೇಶ್ವರ ದೇವಸ್ಥಾನದಿಂದ ಪ್ರಾರಂಭವಾದ ಅಡ್ಡಪಲ್ಲಕ್ಕಿ ಮಹೋತ್ಸವ ಗ್ರಾಮದ ರಾಜ ಬೀದಿಗಳಲ್ಲಿ ಸಂಚರಿಸಿ ನಂತರ ದುರ್ಗಾದೇವಿ ದೇವಸ್ಥಾನ ತಲುಪಿತು. ಗ್ರಾಮವನ್ನು ತಳಿರು–ತೋರಣ ಕಟ್ಟಿ ಸಿಂಗರಿಸಲಾಗಿತ್ತು.
ಅಳವಂಡಿಯ ಮರುಳಾರಾಧ್ಯ ಶಿವಾಚಾರ್ಯರು, ಮೈನಹಳ್ಳಿ ಬಿಕನಳ್ಳಿಯ ಸಿದ್ದೇಶ್ವರ ಶಿವಾಚಾರ್ಯರು, ಕುಕನೂರಿನ ಮಹಾದೇವ ಸ್ವಾಮೀಜಿ, ಪ್ರಮುಖರಾದ ಪ್ರದೀಪ್ ಗೌಡ ಮಾಲಿಪಾಟೀಲ, ಬಸವನಗೌಡ, ಗುರುಮೂರ್ತಿಸ್ವಾಮಿ ಇನಾಮದಾರ, ಮನೋಹರ ದೇಸಾಯಿ, ಸಿದ್ದಲಿಂಗಸ್ವಾಮಿ, ತಿಪ್ಪಣ್ಣ, ಹೊನ್ನಕೇರಪ್ಪ, ಮುತ್ತಣ್ಣ, ಮಹಾಂತೇಶ, ಶರಣಪ್ಪ, ಸುರೇಶ ಬಾಬು ಹಾಗೂ ದುರ್ಗಾದೇವಿ ಸಮಿತಿಯವರು, ಗ್ರಾಮದ ಮುಖಂಡರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.