ADVERTISEMENT

‌ಅಳವಂಡಿ: ರಾಷ್ಟ್ರಪ್ರೇಮ ಸಾರುವ ಕವಲೂರು ಜಾತ್ರೆ

ಜುನಸಾಬ ವಡ್ಡಟ್ಟಿ
Published 12 ಮೇ 2025, 6:14 IST
Last Updated 12 ಮೇ 2025, 6:14 IST
<div class="paragraphs"><p>ಅಳವಂಡಿ ಸಮೀಪದ ಕವಲೂರು ಗ್ರಾಮದ ದುರ್ಗಾದೇವಿ ದೇವಸ್ಥಾನದ ಹೋರನೋಟ </p></div>

ಅಳವಂಡಿ ಸಮೀಪದ ಕವಲೂರು ಗ್ರಾಮದ ದುರ್ಗಾದೇವಿ ದೇವಸ್ಥಾನದ ಹೋರನೋಟ

   

ಅಳವಂಡಿ: ಕೊಪ್ಪಳ ತಾಲ್ಲೂಕಿನ ಕವಲೂರು ಗ್ರಾಮದ ದುರ್ಗಾದೇವಿ ಹಾಗೂ ಪಾರ್ವತಿ ಪರಮೇಶ್ವರ ಜಾತ್ರಾ ಮಹೋತ್ಸವ ಅಂಗವಾಗಿ ಭಾವೈಕ್ಯತೆ ಹಾಗೂ ರಾಷ್ಟ್ರಪ್ರೇಮ ಸಾರುವ ಮಹಾರಥೋತ್ಸವ ಮೇ 12ರಂದು ನಡೆಯಲಿದೆ.

ದೇವತೆಗಳ ಜಾತ್ರೆ ಎಂದರೆ ಸಾಮಾನ್ಯವಾಗಿ ಕುರಿ, ಕೋಣ ಬಲಿ ಕೊಡುವುದು ಸಾಮಾನ್ಯ. ಆದರೆ ಈ ಗ್ರಾಮದ ಜಾತ್ರೆಯಲ್ಲಿ ಯಾವ ಪ್ರಾಣಿಗಳ ಬಲಿ ಇಲ್ಲದೇ ಜಾತ್ರೆ ನಡೆಯುತ್ತದೆ. ಹಾಗಾಗಿ ಈ ಜಾತ್ರೆಯು ಅತ್ಯಂತ ವೈಶಿಷ್ಟ್ಯತೆಯಿಂದ ಕೂಡಿದೆ. ಕೊಪ್ಪಳ ತಾಲ್ಲೂಕಿನಲ್ಲಿ ದುರ್ಗಾದೇವಿಯನ್ನು ಆರಾಧಿಸುವ ಗ್ರಾಮಗಳಲ್ಲಿ ಕವಲೂರು ಗ್ರಾಮ ಮುಂಚೂಣಿಯಲ್ಲಿದೆ.

ADVERTISEMENT

ಗ್ರಾಮದಲ್ಲಿ ವಿವಿಧ ಸಮುದಾಯದ ಜನರು ವಾಸಿಸುತ್ತಿದ್ದಾರೆ. ಎಲ್ಲಾ ಸಮುದಾಯದ ಜನರು ಒಗ್ಗಟ್ಟಾಗಿ ಈ ಜಾತ್ರೆಯನ್ನು ಆಚರಿಸುತ್ತಾರೆ. ಯಾವುದೇ ಜಾತ್ರೆಯಲ್ಲಿ ರಥದ ತೇರಿನ ತುದಿಯಲ್ಲಿ ಧಾರ್ಮಿಕ ಧ್ವಜ ಹಾರಿಸುವುದು ಸಾಮಾನ್ಯ. ಆದರೆ ಇಲ್ಲಿ ರಾಷ್ಟ್ರಧ್ವಜವನ್ನು ತೇರಿನ ಮೇಲೆ ಹಾರಿಸುವ ಮೂಲಕ ರಾಷ್ಟ್ರಪ್ರೇಮ ಹಾಗೂ ಭಾವೈಕ್ಯತೆ ಸಾರುತ್ತಾರೆ.

ಪಂಚ ಕಳಸ: ದುರ್ಗಾದೇವಿ ರಥೋತ್ಸವವು ಪಂಚಕಳಸ ಹೊಂದಿದ್ದು, ಇದು ರಥವು ಸಮೃದ್ಧಿಯ ಸಂಕೇತ ಎಂದು ಭಕ್ತರು ನಂಬಿದ್ದಾರೆ. ನೂತನ ದಂಪತಿಗಳು ಪಂಚಕಳಸ ರಥವನ್ನು ನೋಡುವ ಪದ್ಧತಿ ಜಾರಿಯಲ್ಲಿದೆ. ಪಂಚಕಳಸ ರಥವನ್ನು ನವ ದಂಪತಿಗಳು ನೋಡಿದರೇ ಜೀವನಲ್ಲಿ ಸುಖ, ಶಾಂತಿ, ನೆಮ್ಮದಿ ಸಿಗಲಿದೆ ಎಂಬ ನಂಬಿಕೆ ಇದೆ.  ಇಲ್ಲಿನ ಈ ಜಾತ್ರೆಗೆ ನವ ದಂಪತಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುತ್ತಾರೆ.

ಜಾತ್ರೆಗೆ ಮೇ 2 ರಿಂದಲೇ ಚಾಲನೆ ದೊರೆತಿದ್ದು, ಅಂದಿನಿಂದ ಮೇ 16ರವರೆಗೂ ವಿವಿಧ ಧಾರ್ಮಿಕ ಕಾರ್ಯಗಳು ನಡೆಯಲಿವೆ. ಮೇ 12 ರಂದು ದುರ್ಗಾದೇವಿ ಹಾಗೂ ಪಾರ್ವತಿ ಪರಮೇಶ್ವರ ದೇವರಿಗೆ ಕ್ಷೀರಾಭಿಷೇಕ, ಅಭಿಷೇಕ ಹಾಗೂ ವಿಶೇಷ ಪೂಜೆ, ಸಾಮೂಹಿಕ ವಿವಾಹ ಕಾರ್ಯಕ್ರಮ, ಪಾರ್ವತಿ ಪರಮೇಶ್ವರ ದೇವರ ಲಘು ರಥೋತ್ಸವ ಹಾಗೂ ನಂತರ ಸಂಜೆ ದುರ್ಗಾದೇವಿ ಪಂಚ ಕಳಸ ಮಹಾ ರಥೋತ್ಸವ ಜರುಗಲಿದೆ. ಮೇ 13ರ ಮಧ್ಯಾಹ್ನ ದುರ್ಗಾದೇವಿಯ ಅಗ್ನಿ ಹೊಂಡ ಹಾಯುವ ಕಾರ್ಯಕ್ರಮ, ಮೇ 16ರಂದು ಭಕ್ತರಿಂದ ಮುತೈದೆಯರಿಂದ ದುರ್ಗಾದೇವಿಗೆ ಉಡಿ ತುಂಬುವ ಕಾರ್ಯಕ್ರಮ ನಡೆಯಲಿದೆ.

ಮುಂಡರಗಿಯ ಅನ್ನದಾನೇಶ್ವರ ಸ್ವಾಮೀಜಿ, ಕೊಪ್ಪಳದ ಗವಿಸಿದ್ದೇಶ್ವರ ಸ್ವಾಮೀಜಿ, ಮೈನಹಳ್ಳಿ ಬಿಕನಳ್ಳಿಯ ಸಿದ್ದೇಶ್ವರ ಶಿವಾಚಾರ್ಯರು, ಅಳವಂಡಿಯ ಮರುಳಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ಗುಳೇದಗುಡ್ಡದ ಒಪ್ಪತೇಶ್ವರ ಸ್ವಾಮೀಜಿ, ಕುಕನೂರಿನ ಮಹಾದೇವ ಸ್ವಾಮೀಜಿ, ಯಲಬುರ್ಗಾದ ಬಸವಲಿಂಗೇಶ್ವರ ಶಿವಾಚಾರ್ಯರು ಹಾಗೂ ಗಣ್ಯರು, ಜನಪ್ರತಿನಿಧಿಗಳು ಭಾಗವಹಿಸಲಿದ್ದಾರೆ.

ಕವಲೂರಿನ ದುರ್ಗಾದೇವಿ ಜಾತ್ರೆಯಲ್ಲಿ ರಥೋತ್ಸವದ ಮೇಲೆ ನಮ್ಮ ದೇಶದ ಹೆಮ್ಮೆಯ ರಾಷ್ಟ್ರ ದ್ವಜ ಹಾರಾಡಲಿದೆ. ಇದು ಮೊದಲಿನಿಂದಲೂ ಬಂದ ಸಂಪ್ರದಾಯವಾಗಿದೆ.
ತಿಮ್ಮಣ್ಣ ಸಿದ್ನೆಕೊಪ್ಪ, ಗ್ರಾಮದ ಮುಖಂಡ
ದುರ್ಗಾದೇವಿ ಜಾತ್ರೆ ಈ ಭಾಗದ ಪ್ರಸಿದ್ದ ಜಾತ್ರೆಯಾಗಿದೆ. ಸಹಸ್ರಾರು ಭಕ್ತರು ನೂತನ ದಂಪತಿಗಳು ಸಹ ಪಂಚ ಕಳಸ ಹೊಂದಿದ ದುರ್ಗಾದೇವಿ ರಥೋತ್ಸವದಲ್ಲಿ ಭಾಗಿಯಾಗಲಿದ್ದಾರೆ.
ಮಹಾಂತೇಶ ಸಿಂದೋಗಿಮಠ, ಗ್ರಾಮಸ್ಥ
ಗ್ರಾಮದ ದುರ್ಗಾದೇವಿ ಜಾತ್ರೆಯ ಅಂಗವಾಗಿ ಸಾಮೂಹಿಕ ಮದುವೆ ಅಗ್ನಿ ಕಾರ್ಯಕ್ರಮ ಅಡ್ಡಪಲ್ಲಕ್ಕಿ ಮೆರವಣಿಗೆ ಹಾಗೂ ಇತರ ಧಾರ್ಮಿಕ ಕಾರ್ಯಕ್ರಮ ನಡೆಯಲಿವೆ.
ಹೊನಕೇರಪ್ಪ ಮುಕ್ಕಣ್ಣವರ, ಮುಖಂಡ
ದುರ್ಗಾದೇವಿಯ ಮೂರ್ತಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.