
ಕೊಪ್ಪಳ: ‘ನಾವು ಆಸ್ಪತ್ರೆಯಲ್ಲಿ ಸ್ವಚ್ಚತಾ ಕಾರ್ಯ ಮಾಡುತ್ತೇವೆ. ಹತ್ತು ವರ್ಷಗಳಿಂದ ಇದೇ ಕೆಲಸ ಮಾಡುವ ನಮಗೂ ಉಸಿರಾಟದ ತೊಂದರೆಯಾಗಿದೆ. ವೈದ್ಯರು ಅಲರ್ಜಿ ಎನ್ನುತ್ತಾರೆ, ಕಾರಣ ಕೇಳಿದರೆ ಮಾಲಿನ್ಯದ ಕಡೆಗೆ ಬೊಟ್ಟು ಮಾಡುತ್ತಾರೆ’ ಎಂದು ಕಿಮ್ಸ್ ಸಿಬ್ಬಂದಿ ನೌಕರರ ಸಂಘದ ಕಾರ್ಯಾಧ್ಯಕ್ಷ ಯಲ್ಲಪ್ಪ ಆಡಿನ ಹೇಳಿದರು.
ಜಿಲ್ಲಾ ಬಚಾವೊ ಆಂದೋಲನ ಸಮಿತಿ ಹಾಗೂ ಪರಿಸರ ಹಿತರಕ್ಷಣಾ ಜಂಟಿ ಕ್ರಿಯಾ ವೇದಿಕೆ ನಗರದಲ್ಲಿ ನಡೆಸುತ್ತಿರುವ ಅನಿರ್ದಿಷ್ಟ ಧರಣಿಯ 44ನೇ ದಿನವಾದ ಶನಿವಾರ ಮಾತನಾಡಿದರು. ಬಲ್ಡೋಟಾ, ಕಿರ್ಲೋಸ್ಕರ್, ಕಲ್ಯಾಣಿ ಸ್ಟೀಲ್, ಮುಕುಂದ ಸುಮಿ, ಎಕ್ಸ್ ಇಂಡಿಯಾ ಸೇರಿದಂತೆ ವಿವಿಧ ಕಾರ್ಖಾನೆಗಳ ವಿಸ್ತರಣೆಗೆ ವಿರೋಧಿಸಿ ಹೋರಾಟ ನಡೆಯುತ್ತಿದೆ.
ಕಿಮ್ಸ್ ಸಿಬ್ಬಂದಿ ನೌಕರರ ಸಂಘದ ಸದಸ್ಯರು ಅಶೋಕ ವೃತ್ತದಿಂದ ಕಾರ್ಖಾನೆಗಳ ವಿಸ್ತರಣೆ ನಿಲ್ಲಿಸಬೇಕು ಎಂದು ಘೋಷಣೆಗಳನ್ನು ಕೂಗುತ್ತ ಧರಣಿ ಸ್ಥಳಕ್ಕೆ ಬಂದರು.
ವೇದಿಕೆಯ ಪ್ರಧಾನ ಸಂಚಾಲಕ ಅಲ್ಲಮಪ್ರಭು ಬೆಟ್ಟದೂರು, ಸಂಚಾಲಕರಾದ ಮಲ್ಲಿಕಾರ್ಜುನ ಬಿ. ಗೋನಾಳ, ಮಂಜುನಾಥ ಜಿ. ಗೊಂಡಬಾಳ, ಕಿಮ್ಸ್ ಸಿಬ್ಬಂದಿ ನೌಕರರ ಸಂಘದ ರಮೇಶ ಪಿ.ಬಿ, ಬಸಮ್ಮ ದೊಡ್ಡಮನಿ, ಅಕ್ಕಮ್ಮ ನೂಲ್ವಿ, ಮಂಜುನಾಥ ಮಡಿವಾಳರ, ಹನುಮವ್ವ ಕನಕಾಪುರ, ಮಂಜುನಾಥ ಕೆ.ಎಸ್, ಅಣ್ಣಪ್ಪಯ್ಯ ಪುರಾಣಿಕ್, ಹನುಮವ್ವ ವಿ, ಸಂತೋಷ ಹೊಸಮನಿ, ಬಸವರಾಜ ಉರಿಗೆಜ್ಜಿ, ಹುಲಿಗೆಮ್ಮ ಕೆ. ಸೇರಿ ಅನೇಕರು ಪಾಲ್ಗೊಂಡಿದ್ದರು.
ನಾವು ಆಸ್ಪತ್ರೆ ಸ್ವಚ್ಚಗೊಳಿಸುವಾಗ ಕೈ ಇರಿಸಿದ ಜಾಗದಲ್ಲಿ ಕಪ್ಪುಬೂದಿ ದೂಳು ಬರುತ್ತದೆ. ಆಸ್ಪತ್ರೆಗೆ ಬರುವ ಬಹುತೇಕ ರೋಗಿಗಳಿಗೆ ಅಸ್ತಮಾ ಕಾಡುತ್ತಿದೆ.ರತ್ನಮ್ಮ ಪುರಾಣಿಕಮಠ ಕಿಮ್ಸ್ ಸಿಬ್ಬಂದಿ ನೌಕರರ ಸಂಘದ ಅಧ್ಯಕ್ಷೆ