ADVERTISEMENT

ಕಿತ್ತೂರು ಚನ್ನಮ್ಮ ಹೋರಾಟಗಾಥೆ ಸ್ಮರಣೆ ಅಗತ್ಯ: ದೊಡ್ಡನಗೌಡ ಪಾಟೀಲ

ರಾಣಿ ಚನ್ನಮ್ಮ ಜಯಂತಿಯಲ್ಲಿ ಶಾಸಕ ದೊಡ್ಡನಗೌಡ ಪಾಟೀಲ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2025, 7:12 IST
Last Updated 24 ಅಕ್ಟೋಬರ್ 2025, 7:12 IST
ಕುಷ್ಟಗಿ ತಹಶೀಲ್ದಾರ್ ಕಚೇರಿಯಲ್ಲಿ ಗುರುವಾರ ನಡೆದ ಚನ್ನಮ್ಮ ಜಯಂತಿ ಕಾರ್ಯಕ್ರಮವನ್ನು ಶಾಸಕ ದೊಡ್ಡನಗೌಡ ಪಾಟೀಲ ಉದ್ಘಾಟಿಸಿದರು
ಕುಷ್ಟಗಿ ತಹಶೀಲ್ದಾರ್ ಕಚೇರಿಯಲ್ಲಿ ಗುರುವಾರ ನಡೆದ ಚನ್ನಮ್ಮ ಜಯಂತಿ ಕಾರ್ಯಕ್ರಮವನ್ನು ಶಾಸಕ ದೊಡ್ಡನಗೌಡ ಪಾಟೀಲ ಉದ್ಘಾಟಿಸಿದರು   

ಕುಷ್ಟಗಿ: ಅಪ್ರತಿಮ ಹೋರಾಟಗಾರ್ತಿಯಾಗಿದ್ದ ರಾಣಿ ಚನ್ನಮ್ಮ ಕಿತ್ತೂರು ಸಂಸ್ಥಾನ ಮತ್ತು ಪ್ರಜೆಗಳ ರಕ್ಷಣೆಗೆ ನಡೆಸಿದ ಹೋರಾಟ, ಮಾಡಿದ ತ್ಯಾಗವನ್ನು ಪ್ರಸ್ತುತ ಸಮಾಜ ಸ್ಮರಿಸಬೇಕಿದೆ ಎಂದು ಶಾಸಕ ದೊಡ್ಡನಗೌಡ ಪಾಟೀಲ ಹೇಳಿದರು.

ತಾಲ್ಲೂಕು ಆಡಳಿತದ ವತಿಯಿಂದ ತಹಶೀಲ್ದಾರ್‌ ಕಚೇರಿಯಲ್ಲಿ ಏರ್ಪಡಿಸಿದ್ದ ಕಿತ್ತೂರು ರಾಣಿ ಚನ್ನಮ್ಮ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ಚನ್ನಮ್ಮಳ ಧೈರ್ಯ, ಸಾಹಸ ಸ್ವಾತಂತ್ರ್ಯ ಹೋರಾಟದ ಇತಿಹಾಸದ ಪುಟಗಳಲ್ಲಿ ಅಚ್ಚಳಿಯದೇ ಉಳಿದಿದೆ. ಮಹಿಳೆಯಾದರೂ ಸ್ವತಃ ಕತ್ತಿ ಹಿಡಿದು ಬ್ರಿಟಿಷ್ ಸೈನ್ಯದ ವಿರುದ್ಧ ರಣರಂಗದಲ್ಲಿ ಹೋರಾಡಿದ ಚರಿತ್ರೆ ಭವಿಷ್ಯದ ಪೀಳಿಗೆಗೂ ಗೊತ್ತಾಗಬೇಕು. ಕೇವಲ ಜಯಂತಿ ಆಚರಿಸಿದರಷ್ಟೇ ಸಾಲದು. ಚನ್ನಮ್ಮ ಮತ್ತು ಸ್ವಾತಂತ್ರ್ಯ ಹೋರಾಟಗಾರರನ್ನು ಯಾವುದೇ ಒಂದು ಸಮುದಾಯಕ್ಕೆ ಮಾತ್ರ ಸೀಮಿತಗೊಳಿಸದೆ ಅವರ ಆಶಯದಂತೆ ನಮ್ಮ ಬದುಕನ್ನು ರೂಢಿಸಿಕೊಳ್ಳುವುದು ಹೆಚ್ಚು ಪ್ರಸ್ತುತ ಎನಿಸುತ್ತದೆ’ ಎಂದರು.

ADVERTISEMENT

ವಿಶೇಷ ಉಪನ್ಯಾಸ ನೀಡಿದ ಶಿಕ್ಷಕ ಹಾಗೂ ರಾಜ್ಯ ಜಾನಪದ ಅಕಾಡೆಮಿ ಸದಸ್ಯ ಜೀವನಸಾಬ್ ವಾಲಿಕಾರ ಮಾತನಾಡಿ, ‘ಕನ್ನಡದ ನೆಲದಲ್ಲಿ ಬ್ರಿಟಿಷರಿಗೆ ಸೋಲಿನ ರುಚಿ ಉಣಿಸಿದ ರಾಣಿ ಚನ್ನಮ್ಮ ಅವರ ಧೈರ್ಯ, ಶೌರ್ಯ ಮೆಚ್ಚುವಂಥದ್ದು. ಅಷ್ಟೇ ಅಲ್ಲದೆ ದತ್ತುಪುತ್ರನನ್ನು ಪಡೆಯುವುದು ಸೇರಿದಂತೆ ಸಂಸ್ಥಾನಕ್ಕೆ ಸಂಬಂಧಿಸಿದ ಪ್ರಮುಖ ತೀರ್ಮಾನಗಳನ್ನು ತೆಗೆದುಕೊಳ್ಳುವ ಮೊದಲು ಪ್ರಜೆಗಳ ಅಭಿಪ್ರಾಯವನ್ನೂ ಪಡೆದು ಗೌರವಿಸುವ ಮೂಲಕ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಆಗಿನ ಕಾಲದಲ್ಲೇ ತಮ್ಮ ಆಡಳಿತದಲ್ಲಿ ಅಳವಡಿಸಿಕೊಂಡಿದ್ದನ್ನು ಪ್ರಸ್ತುತ ಪ್ರಜಾಪ್ರಭುತ್ವ ವ್ಯವಸ್ಥೆ ಮೆಲುಕುಹಾಕಬೇಕಿದೆ’ ಎಂದರು.

ದೇವೇಂದ್ರಪ್ಪ ಬಳೂಟಗಿ, ಕೆ.ಮಹೇಶ್‌, ತಹಶೀಲ್ದಾರ್ ಅಶೋಕ ಶಿಗ್ಗಾಂವಿ ಮಾತನಾಡಿದರು.

ಗ್ರೇಡ್‌ 2 ತಹಶೀಲ್ದಾರ್ ರಜನಿಕಾಂತ ಕೆಂಗಾರಿ, ಸಿಪಿಐ ಯಶವಂತ ಬಿಸನಳ್ಳಿ, ಪ್ರಮುಖರಾದ ಶಿವಸಂಗಪ್ಪ ಬಿಜಕಲ್, ನಾಗಪ್ಪ ಬಿಳಿಯಪ್ಪನವರ, ವಕೀಲರಾದ ದೊಡ್ಡನಗೌಡ, ಎಸ್‌.ಜಿ.ಪಾಟೀಲ ಇದ್ದರು. ತಾಲ್ಲೂಕು ಪಂಚಮಸಾಲಿ ಸಮುದಾಯದ ಪ್ರಮುಖರು, ಯುವಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಬಿಆರ್‌ಪಿ ಶ್ರೀಕಾಂತ ಬೆಟಿಗೇರಿ ನಿರೂಪಿಸಿದರು.

ಅದೇ ರೀತಿ ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ, ಶಾಲೆ–ಕಾಲೇಜುಗಳಲ್ಲಿ ಹಾಗೂ ಸರ್ಕಾರದ ಎಲ್ಲ ಕಚೇರಿಗಳಲ್ಲಿಯೂ ಕಿತ್ತೂರು ಚನ್ನಮ್ಮ ಜಯಂತಿ ಆಚರಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.