ಕೊಪ್ಪಳ: ತುಂಗಭದ್ರಾ ಜಲಾಶಯದಿಂದ ನಿರಂತರವಾಗಿ ನೀರು ಹರಿಬಿಡುತ್ತಿದ್ದು, ನದಿ ಭರ್ತಿಯಾಗಿವೆ. ಕಣ್ಣು ಹಾಯಿಸಿದಷ್ಟೂ ದೂರ ಕಾಣುತ್ತಿರುವ ಪ್ರಕೃತಿಯ ಸೊಗಗಿನ ನಡುವೆ ತುಂಗಭದ್ರಾ ನದಿಯ ತಟದಲ್ಲಿ ಮೊದಲ ಬಾರಿಗೆ ಆರತಿಯ ಸಂಭ್ರಮಕ್ಕೆ ವೇದಿಕೆ ಸಜ್ಜುಗೊಂಡಿದೆ.
ಉತ್ತರ ಕರ್ನಾಟಕ ಪ್ರಮುಖ ಧಾರ್ಮಿಕ ಕ್ಷೇತ್ರಗಳಲ್ಲಿ ಪ್ರಮುಖವಾದ ತಾಲ್ಲೂಕಿನ ಹುಲಿಗಿಯ ಹುಲಿಗೆಮ್ಮ ದೇವಿ ದೇವಸ್ಥಾನದ ಸಮೀಪದಲ್ಲಿರುವ ನದಿಯ ಬಳಿ ದೇವಿಯ ವಾರದ ದಿನವಾದ ಮಂಗಳವಾರ ಸಂಜೆ 6.30ಕ್ಕೆ ತುಂಗಭದ್ರಾ ಆರತಿ ಮತ್ತು ಬಾಗಿನ ಸಮರ್ಪಣೆ ಕಾರ್ಯಕ್ರಮ ನಡೆಯಲಿದೆ. ಹುಲಿಗೆಮ್ಮ ದೇವಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ಕಾರ್ಯಕ್ರಮ ಹಮ್ಮಿಕೊಂಡಿದ್ದು ಸೋಮವಾರ ಸಿದ್ಧತಾ ಕಾರ್ಯ ಜೋರಾಗಿ ನಡೆದಿದ್ದವು.
ಈ ಕಾರ್ಯಕ್ರಮದ ಕುರಿತು ಸೋಮವಾರ ಹುಲಿಗಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಸಂಸದ ರಾಜಶೇಖರ ಹಿಟ್ನಾಳ ಅವರು ‘ಕಾಶಿಯಲ್ಲಿ ನಡೆಯುವ ಗಂಗಾರತಿ ಮಾದರಿಯಲ್ಲಿಯೇ ತುಂಗಭದ್ರಾ ಆರತಿ ನಡೆಸಲಾಗುತ್ತದೆ. ಪೂರ್ವಭಾವಿಯಾಗಿ ದೇವಸ್ಥಾನದಲ್ಲಿ ಚಂಡಿಕಾ ಹೋಮ, ಭಕ್ತರಿಗೆ ಅನ್ನ ಸಂತರ್ಪಣೆ, ಮಧ್ಯಾಹ್ನ 4 ಗಂಟೆಯಿಂದ ಹುಲಿಗಿಯ ಹಿಟ್ನಾಳ ರಸ್ತೆಯ ಚನ್ನಮ್ಮ ವೃತ್ತದಿಂದ ದೇವಸ್ಥಾನದ ತನಕ ಮಹಿಳೆಯರಿಂದ ಕುಂಭ ಹಾಗೂ ಹುಲಿಗೆಮ್ಮ ದೇವಿಯ ಭಾವಚಿತ್ರದ ಮೆರವಣಿಗೆ ನಡೆಯಲಿದೆ’ ಎಂದು ತಿಳಿಸಿದರು.
ದೇವಸ್ಥಾನದ ಉತ್ಸವ ಮೂರ್ತಿಯನ್ನು ತೆಗೆದುಕೊಂಡು ಹೋಗಿ ನದಿತೀರದಲ್ಲಿ ಪ್ರತಿಷ್ಠಾಪನೆ ಮಾಡಿ, ವಿಶೇಷ ಸಲ್ಲಿಸಿ ಅಲ್ಲಿ ಉಡಿ ತುಂಬಲಾಗುತ್ತದೆ. ಭರತನಾಟ್ಯದ ಮೂಲಕ ದೇವಿಯನ್ನು ಸ್ವಾಗತಿಸಲಾಗುತ್ತದೆ.
ತುಂಗಭದ್ರಾ ಆರತಿಯನ್ನು ಸಂಪ್ರದಾಯಕ್ಕೆ ಅನುಗುಣವಾಗಿಯೇ ನಡೆಸಲು ಗಂಗಾ ಆರತಿಯಲ್ಲಿ ಪಾಲ್ಗೊಂಡ 15 ಅರ್ಚಕರನ್ನು ಕಾಶಿಯಿಂದ ಕರೆಸಲಾಗಿದೆ. ಸಾರ್ವಜನಿಕರಿಗೂ ಆರತಿ ಮಾಡಲು ಅವಕಾಶ ಕಲ್ಪಿಸಲು ದೇವಸ್ಥಾನದಿಂದ ಎರಡು ಸಾವಿರ ಆರತಿಗಳನ್ನು ಭಕ್ತಾದಿಗಳಿಗೆ ಉಚಿತವಾಗಿ ನೀಡಲಾಗುತ್ತದೆ. ಆರತಿ ಮಾಡಿ ಬಳಿಕ ನದಿಯಲ್ಲಿ ಬಿಡಬೇಕು ಎಂದು ಅವರು ಹೇಳಿದರು.
ಹುಲಿಗೆಮ್ಮ ದೇವಿ ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಎಂ.ಎಚ್.ಪ್ರಕಾಶರಾವ್ ಹಾಗೂ ಸಿಬ್ಬಂದಿ ಪಾಲ್ಗೊಂಡಿದ್ದರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.