ADVERTISEMENT

ಕೊಪ್ಪಳ: ವಿಮಾನ ನಿಲ್ದಾಣದ ಜಾಗ ಬದಲಿಸಲು ರೈತರ ಒತ್ತಾಯ

ವಿಮಾನ ನಿಲ್ದಾಣ ಪ್ರಾಧಿಕಾರದ ಅಧಿಕಾರಿಗಳ ಭೇಟಿ ಬೆನ್ನಲ್ಲೇ ಮನವಿ ಸಲ್ಲಿಕೆ

​ಪ್ರಜಾವಾಣಿ ವಾರ್ತೆ
Published 3 ಜೂನ್ 2022, 13:25 IST
Last Updated 3 ಜೂನ್ 2022, 13:25 IST
ವಿಮಾನ ನಿಲ್ದಾಣದ ಜಾಗವನ್ನು ಬದಲು ಮಾಡಬೇಕು ಎಂದು ಕೊಪ್ಪಳ ತಾಲ್ಲೂಕಿನ ವದಗನಾಳ ಗ್ರಾಮದ ರೈತರು ಆಗ್ರಹಿಸಿದ್ದು, ಈ ಕುರಿತು ಶುಕ್ರವಾರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ
ವಿಮಾನ ನಿಲ್ದಾಣದ ಜಾಗವನ್ನು ಬದಲು ಮಾಡಬೇಕು ಎಂದು ಕೊಪ್ಪಳ ತಾಲ್ಲೂಕಿನ ವದಗನಾಳ ಗ್ರಾಮದ ರೈತರು ಆಗ್ರಹಿಸಿದ್ದು, ಈ ಕುರಿತು ಶುಕ್ರವಾರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ   

ಕೊಪ್ಪಳ: ಜಿಲ್ಲೆಯಲ್ಲಿ ನಿರ್ಮಿಸಲು ಉದ್ದೇಶಿಸಲಾಗಿರುವ ವಿಮಾನ ನಿಲ್ದಾಣದ ಜಾಗವನ್ನು ಬದಲು ಮಾಡಬೇಕು ಎಂದು ಕೊಪ್ಪಳ ತಾಲ್ಲೂಕಿನ ವದಗನಾಳ ಗ್ರಾಮದ ರೈತರು ಆಗ್ರಹಿಸಿದ್ದು, ಈ ಕುರಿತು ಶುಕ್ರವಾರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ.

ಭಾರತ ವಿಮಾನ ನಿಲ್ದಾಣ ಪ್ರಾಧಿಕಾರಿದ ಅಧಿಕಾರಿಗಳ ತಂಡ ಗುರುವಾರ ಕೊಪ್ಪಳ ತಾಲ್ಲೂಕಿನ ತಾಳಕನಕಪುರ, ಬುಡಶೆಟ್ನಾಳ್, ಹಟ್ಟಿ, ಕಲಕೇರಿ, ವಗದನಾಳ ಹಾಗೂ ಕುಕನೂರು ತಾಲ್ಲೂಕಿನ ಲಕಮಾಪುರ ಗ್ರಾಮಗಳಲ್ಲಿ ಜಾಗ ಪರಿಶೀಲನೆ ಮಾಡಿತ್ತು. ಈ ಹಿನ್ನೆಲೆಯಲ್ಲಿ ರೈತರು ಮನವಿ ಸಲ್ಲಿಸಿದರು.

ಉಡಾನ್‌ ಯೋಜನೆಯಡಿ ವಿಮಾನ ನಿಲ್ದಾಣಕ್ಕಾಗಿ ಹಲವು ಕಡೆ ಜಾಗ ಗುರುತಿಸಲಾಗಿದ್ದು ಇದರಲ್ಲಿ ವದಗನಾಳ ಗ್ರಾಮವೂ ಒಂದು. ಈ ಗ್ರಾಮದಲ್ಲಿಯೇ ಸ್ಥಾಪನೆ ಮಾಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಆದರೆ, ಈ ಭಾಗದಲ್ಲಿ ನೀರಾವರಿ ಸೌಲಭ್ಯವಿದ್ದು ರೈತರು ಕೃಷಿ ಮಾಡುತ್ತಿದ್ದಾರೆ. ಗ್ರಾಮದ ಸುತ್ತಮುತ್ತಲಿನ ಪ್ರದೇಶದಲ್ಲಿ ನವಿಲು ಹಾಗೂ ಚಿಗರಿಗಳು ಓಡಾಡುತ್ತವೆ. ಆದ್ದರಿಂದ ಈ ಪ್ರದೇಶದಲ್ಲಿ ವಿಮಾನ ನಿಲ್ದಾಣ ಮಾಡಬಾರದು ಎಂದು ಆಗ್ರಹಿಸಿದರು.

ADVERTISEMENT

ವದಗನಾಳ ಗ್ರಾಮ ವ್ಯಾಪ್ತಿಯ ಭೂಮಿಯು ಕಿನ್ನಾಳ ಏತ ನೀರಾವರಿ ಯೋಜನೆ ವ್ಯಾಪ್ತಿಗೆ ಒಳಪಟ್ಟಿದ್ದು, ಕೆಲ ರೈತರ ಭೂಮಿ ಉದ್ದೇಶಿತ ಯೋಜನೆಗೆ ಹೋಗಬಹುದು ಎನ್ನುವ ಅಂದಾಜು ಇದೆ. ಈ ಕಾರಣಕ್ಕಾಗಿ ಕೃಷಿ ಭೂಮಿ ಬಿಟ್ಟು ಬಳಕೆಯಲ್ಲಿ ಇಲ್ಲದೆ ಭೂಮಿಯನ್ನು ವಿಮಾನ ನಿಲ್ದಾಣ ನಿರ್ಮಿಸಬೇಕು ಎಂದು ವದಗನಾಳ, ಹಲಗೇರಿ ಹಾಗೂ ಲಕಮಾಪುರ ಗ್ರಾಮಗಳ ರೈತರು ಮನವಿ ಕೊಟ್ಟರು.

ರೈತರಾದ ಆರ್‌.ಜಿ. ತಿಮ್ಮನಗೌಡ, ದೇವಣ್ಣ ಡಿ. ಉಪ್ಪಾರ, ಮುತ್ತಣ್ಣ ಶಿವನಗೌಡರ, ಅಮರೇಶ ಕೋಳಿಹಾಳ, ಮಂಜುನಾಥ ಅಳವಂಡಿ, ಸಕ್ಕರಗೌಡ ಮಾಲಿಪಾಟೀಲ ಇದ್ದರು.

ಮುಂದುವರಿದ ಧರಣಿ: ಕೊಪ್ಪಳ ತಾಲ್ಲೂಕಿನ ಕುಣಕೇರಿ, ಕುಣೀಕೇರಿ ತಾಂಡಾ, ಲಾಚನಕೇರಿ ಮತ್ತು ಚಿಕ್ಕಬಗನಾಳ ಗ್ರಾಮಗಳ ವ್ಯಾಪ್ತಿಯಲ್ಲಿ ಎಕ್ಸ್‌ ಇಂಡಿಯಾ ಕಂಪನಿ ಖರೀದಿಸಿರುವ 1,300 ಎಕರೆ ಜಾಗವನ್ನು ರೈತರಿಗೆ ವಾಪಸ್‌ ಕೊಡಬೇಕು ಎಂದು ಆಗ್ರಹಿಸಿ ಕರ್ನಾಟಕ ರೈತ ಸಂಘ ಜಿಲ್ಲಾ ಸಮಿತಿ ಸದಸ್ಯರು ಗುರುವಾರ ಜಿಲ್ಲಾಧಿಕಾರಿ ಕಚೇರಿ ಎದುರು ಆರಂಭಿಸಿದ್ದ ಧರಣಿ ಶುಕ್ರವಾರವೂ ಮುಂದುವರಿಯಿತು.

‘ಮರಳಿಯಲ್ಲಿ ಸ್ಥಾಪಿಸಿ’

ವಿಮಾನ ನಿಲ್ದಾಣವನ್ನು ಗಂಗಾವತಿ ತಾಲ್ಲೂಕಿನ ಮರಳಿ (ಪ್ರಗತಿ ನಗರ)ದಲ್ಲಿ ಸ್ಥಾಪಿಸಬೇಕು ಎಂದು ಕೊಪ್ಪಳ ಜಿಲ್ಲಾ ವಾಣಿಜ್ಯೋದ್ಯಮ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷ ಅಶೋಕಸ್ವಾಮಿ ಹೇರೂರ ಆಗ್ರಹಿಸಿದ್ದಾರೆ.

ಮರಳಿಯಲ್ಲಿ 290 ಎಕರೆ ಸರ್ಕಾರಿ ಭೂಮಿ ಇದ್ದು, ಅಲ್ಲಿಯೇ ವಿಮಾನ ನಿಲ್ದಾಣ ಸ್ಥಾಪಿಸಿದರೆ ಸಿಂಧನೂರು, ಕಾರಟಗಿ, ಕನಕಗಿರಿ, ಸಿರುಗುಪ್ಪ, ಕಂಪ್ಲಿ ಸೇರಿದಂತೆ ಹಲವು ಊರುಗಳ ಜನರಿಗೆ ಅನುಕೂಲವಾಗುತ್ತದೆ. ಐತಿಹಾಸಿಕ ಆಂಜನಾದ್ರಿ ಬೆಟ್ಟ, ಪಂಪಾ ಸರೋವರ, ದುರ್ಗಾದೇವಿ ಬೆಟ್ಟ, ಹಂಪಿ, ಮೌರ್ಯರ ಬೆಟ್ಟದ ಸ್ಥಳಗಳನ್ನು ನೋಡಲು ಸುಲಭವಾಗುತ್ತದೆ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.