ADVERTISEMENT

ಕೊಪ್ಪಳ: ಬಸ್‌ ನಿಲುಗಡೆಗೆ ವಾರದಲ್ಲಿ ಮತ್ತೊಂದು ಪ್ರತಿಭಟನೆ

ಬಸಾಪುರದಿಂದ ಶಾಲಾ, ಕಾಲೇಜಿಗೆ ಜಿಲ್ಲಾಕೇಂದ್ರಕ್ಕೆ ಬರುವ ವಿದ್ಯಾರ್ಥಿಗಳು

​ಪ್ರಜಾವಾಣಿ ವಾರ್ತೆ
Published 21 ನವೆಂಬರ್ 2025, 7:11 IST
Last Updated 21 ನವೆಂಬರ್ 2025, 7:11 IST
ಬಸ್‌ ನಿಲುಗಡೆ ಮಾಡಬೇಕು ಎಂದು ಆಗ್ರಹಿಸಿ ಕೊಪ್ಪಳ ಸಮೀಪದ ಬಸಾಪುರದಲ್ಲಿ ವಿದ್ಯಾರ್ಥಿಗಳು ಗುರುವಾರ ದಿಢೀರ್‌ ಪ್ರತಿಭಟನೆ ನಡೆಸಿದರು  
ಬಸ್‌ ನಿಲುಗಡೆ ಮಾಡಬೇಕು ಎಂದು ಆಗ್ರಹಿಸಿ ಕೊಪ್ಪಳ ಸಮೀಪದ ಬಸಾಪುರದಲ್ಲಿ ವಿದ್ಯಾರ್ಥಿಗಳು ಗುರುವಾರ ದಿಢೀರ್‌ ಪ್ರತಿಭಟನೆ ನಡೆಸಿದರು     

ಕೊಪ್ಪಳ: ಜಿಲ್ಲಾಕೇಂದ್ರದ ಸಮೀಪದಲ್ಲಿರುವ ಬಸಾಪುರ ಗ್ರಾಮದಲ್ಲಿ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ವೇಗದೂತ ಬಸ್‌ಗಳನ್ನು ನಿಲುಗಡೆ ಮಾಡಬೇಕು ಎಂದು ಆಗ್ರಹಿಸಿ ಗ್ರಾಮಸ್ಥರು ಹಾಗೂ ವಿದ್ಯಾರ್ಥಿಗಳು ಗುರುವಾರ ಬೆಳಿಗ್ಗೆ ದಿಢೀರ್‌ ಬಸ್‌ ತಡೆದು ಪ್ರತಿಭಟನೆ ನಡೆಸಿದರು.

ಇದೇ ಬೇಡಿಕೆ ಈಡೇರಿಕೆಗಾಗಿ ಒಂದು ವಾರದ ಹಿಂದೆಯಷ್ಟೇ ಬಸಾಪುರದಲ್ಲಿ ಪ್ರತಿಭಟನೆ ನಡೆದಿತ್ತು. ಆಗ ಸಾರಿಗೆ ಇಲಾಖೆ ಅಧಿಕಾರಿಗಳು ‘ಬಸಾಪುರದಲ್ಲಿ ವೇಗದೂತ ಬಸ್‌ಗಳ ನಿಲುಗಡೆ ಮೊದಲಿನಿಂದಲೂ ಇದೆ. ಕೆಲ ಸಿಬ್ಬಂದಿ ಪಾಲಿಸುತ್ತಿರಲಿಲ್ಲ. ಈಗ ಕಟ್ಟುನಿಟ್ಟಿನೆ ಸೂಚನೆ ನೀಡಲಾಗಿದೆ’ ಎಂದಿದ್ದರು. ಆದರೂ ಬಸ್‌ ನಿಲ್ಲುತ್ತಿಲ್ಲ ಎಂದು ವಿದ್ಯಾರ್ಥಿಗಳು ಆರೋಪಿಸಿದರು. 

ಸುಮಾರು ಎರಡು ತಾಸಿಗೂ ಹೆಚ್ಚು ಹೊತ್ತು ನಡೆದ ಪ್ರತಿಭಟನೆಯಲ್ಲಿ ವಿದ್ಯಾರ್ಥಿಗಳು ಬಸ್‌ ಮುಂಭಾಗದಲ್ಲಿ ಅಡ್ಡಲಾಗಿ ಕುಳಿತಿದ್ದರಿಂದ ಸಾಕಷ್ಟು ಬಸ್‌ಗಳು ಸರತಿಯಲ್ಲಿ ನಿಂತುಕೊಂಡಿದ್ದರಿಂದ ಗದಗ–ರಾಯಚೂರು, ಕೊಪ್ಪಳ–ವನಬಳ್ಳಾರಿ ಸೇರಿದಂತೆ ಎರಡೂ ಕಡೆಯಿಂದ ಓಡಾಡುವ ಬಸ್‌ಗಳನ್ನು ನಿಲ್ಲಿಸಿ ಪ್ರತಿಭಟನೆ ಮಾಡಿದರು.  

ADVERTISEMENT

ನಮ್ಮ ಬೇಡಿಕೆ ಈಡೇರುವ ತನಕ ನಿರಂತರ ಹೋರಾಟ ಮಾಡುತ್ತಲೇ ಇರುತ್ತೇವೆ ಎನ್ನುವ ಎಚ್ಚರಿಕೆಯನ್ನೂ ನೀಡಿದರು. ನಿತ್ಯ 250ರಿಂದ 300 ಜನ ವಿದ್ಯಾಭ್ಯಾಸಕ್ಕಾಗಿ ಜಿಲ್ಲಾಕೇಂದ್ರಕ್ಕೆ ಓಡಾಡುತ್ತೇವೆ. ಸಮರ್ಪಕ ಬಸ್‌ ಸೌಲಭ್ಯ ಕಲ್ಪಿಸಬೇಕು ಎಂದು ಆಗ್ರಹಿಸಿದರು.

ಕೆಲ ಹೊತ್ತಿನ ಬಳಿಕ ಸ್ಥಳಕ್ಕೆ ಬಂದ ಸಾರಿಗೆ ಇಲಾಖೆಯ ಅಧಿಕಾರಿಯೊಬ್ಬರು ಕೆಲ ದಿನಗಳಲ್ಲಿ ನಿಮ್ಮ ಸಮಸ್ಯೆ ಪರಿಹರಿಸಲಾಗುವುದು, ಈಗ ವಾಹನಗಳ ಓಡಾಟಕ್ಕೆ ಅವಕಾಶ ಮಾಡಿಕೊಡಿ ಎಂದು ಮಾಡಿದ ಮನವಿಗೆ ಒಪ್ಪಿದ ಬಳಿಕ ಪ್ರತಿಭಟನೆ ವಾಪಸ್‌ ತೆಗೆದುಕೊಂಡರು.

‘ಸಿಬ್ಬಂದಿಯನ್ನು ನಿಯೋಜಿಸಿದರೂ ಪ್ರತಿಭಟನೆ ಯಾಕೆ’

ಕೊಪ್ಪಳ: ವಾರದ ಹಿಂದೆ ಪ್ರತಿಭಟನೆ ನಡೆಸಿದಾಗ ತಕ್ಷಣವೇ ಅಲ್ಲಿ ಸಿಬ್ಬಂದಿಯನ್ನು ನಿಯೋಜಿಸಿ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡಲಾಗಿದೆ. ಆದರೂ ಮತ್ತೊಮ್ಮೆ ಪ್ರತಿಭಟನೆ ಮಾಡಿದ್ದು ಯಾಕೆ ಎಂದು ಕೊಪ್ಪಳ ವಿಭಾಗೀಯ ನಿಯಂತ್ರಣಾಧಿಕಾರಿ ಜಿ.ಸೀನಯ್ಯ ಪ್ರಶ್ನಿಸಿದರು.

‘ಪ್ರಜಾವಾಣಿ’ ಜೊತೆ ಮಾತನಾಡಿದ ಅವರು ’ಬಸ್‌ನಲ್ಲಿ 110ಕ್ಕೂ ಹೆಚ್ಚು ಜನರಿದ್ದ ಕಾರಣ ನಿಲ್ಲಲು ಕೂಡ ಜಾಗ ಇರಲಿಲ್ಲ. ಆದ್ದರಿಂದ ಒಂದು ಬಸ್‌ನ ಚಾಲಕ ನಿಲ್ಲಿಸದೇ ಬಂದಿದ್ದಾನೆ. ಅದರ ಹಿಂದೆ ಬಸ್‌ಗಳಲ್ಲಿ ಜಾಗವಿತ್ತು. ಆ ಬಸ್‌ಗಳಲ್ಲಿ ವಿದ್ಯಾರ್ಥಿಗಳು ಬಂದಿದ್ದರೆ ಸುಲಭವಾಗಿ ಶಾಲಾ ಕಾಲೇಜು ತಲುಪಬಹುದಿತ್ತು. ಪೂರ್ಣ ತುಂಬಿದ ಬಸ್‌ ನಿಲ್ಲಿಸಿಲ್ಲ ಎನ್ನುವ ಕಾರಣ ನೆಪವಾಗಿಟ್ಟುಕೊಂಡು ಪ್ರತಿಭಟನೆ ಮಾಡಿದ್ದು ಸರಿಯಲ್ಲ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.