ADVERTISEMENT

ಕೊಪ್ಪಳ | ‘ಗುಂಡಿಗಳ ಊರು’: ಸರ್ಕಾರದ ವಿರುದ್ಧ ಬಿಜೆಪಿ ಲೇವಡಿ

ಹದಗೆಟ್ಟ ಜಿಲ್ಲಾಕೇಂದ್ರದ ರಸ್ತೆಯಲ್ಲಿ ಸಸಿನೆಟ್ಟು ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 25 ಸೆಪ್ಟೆಂಬರ್ 2025, 4:23 IST
Last Updated 25 ಸೆಪ್ಟೆಂಬರ್ 2025, 4:23 IST
ಕೊಪ್ಪಳದ ಕಿನ್ನಾಳ ರಸ್ತೆಯಲ್ಲಿ ಬಿದ್ದಿರುವ ಗುಂಡಿಯಲ್ಲಿ ಸಸಿನೆಟ್ಟು ಬಿಜೆಪಿ ವತಿಯಿಂದ ಬುಧವಾರ ಪ್ರತಿಭಟನೆ ನಡೆಯಿತು 
ಕೊಪ್ಪಳದ ಕಿನ್ನಾಳ ರಸ್ತೆಯಲ್ಲಿ ಬಿದ್ದಿರುವ ಗುಂಡಿಯಲ್ಲಿ ಸಸಿನೆಟ್ಟು ಬಿಜೆಪಿ ವತಿಯಿಂದ ಬುಧವಾರ ಪ್ರತಿಭಟನೆ ನಡೆಯಿತು    

ಕೊಪ್ಪಳ: ಜಿಲ್ಲಾಕೇಂದ್ರದ ಹಲವು ಕಡೆ ರಸ್ತೆಗಳಲ್ಲಿ ಬಿದ್ದಿರುವ ಗುಂಡಿಗಳನ್ನು ದುರಸ್ತಿ ಮಾಡಬೇಕು ಎಂದು ಆಗ್ರಹಿಸಿ ಬಿಜೆಪಿ ಜಿಲ್ಲಾ ಘಟಕದ ಪ್ರಮುಖರು ಬುಧವಾರ ಇಲ್ಲಿನ ಕಿನ್ನಾಳ ರಸ್ತೆಯಲ್ಲಿ ಗುಂಡಿಯ ಮುಂದೆ ಸಸಿ ನೆಟ್ಟು ಪ್ರತಿಭಟನೆ ನಡೆಸಿದರು.

ಪ್ರತಿಭಟನೆ ವೇಳೆ ಪ್ರದರ್ಶಿಸಿದ ಪೋಸ್ಟರ್‌ನಲ್ಲಿ ‘ಗುಂಡಿಗಳ ಊರು’ ಎನ್ನುವ ಸಾಲುಗಳನ್ನು ಬರೆಯಿಸಲಾಗಿತ್ತು. ಕಿನ್ನಾಳ ರಸ್ತೆಯಲ್ಲಿ ಆಳವಾಗಿ ಬಿದ್ದಿರುವ ಗುಂಡಿಗಳಲ್ಲಿ ಸಸಿ ನೆಟ್ಟು, ಅದರಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಭಾವಚಿತ್ರ ಹಾಕಿ ಆಕ್ರೋಶ ವ್ಯಕ್ತಪಡಿಸಿದರು. ರಾಜ್ಯ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.

ಪಕ್ಷದ ರಾಜ್ಯ ಕಾರ್ಯಕಾರಿಣಿ ಸದಸ್ಯ ಡಾ. ಬಸವರಾಜ ಕ್ಯಾವಟರ್‌, ಮುಖಂಡ ಮಹಾಂತೇಶ ಮೈನಳ್ಳಿ ಹಾಗೂ ಎಸ್‌ಸಿ ಮೋರ್ಚಾ ಜಿಲ್ಲಾಧ್ಯಕ್ಷ ಗಣೇಶ ಹೊರತಟ್ನಾಳ ಮಾತನಾಡಿದರು. ರಾಜ್ಯ ಸರ್ಕಾರ ಹಾಗೂ ಕ್ಷೇತ್ರದ ಶಾಸಕ ರಾಘವೇಂದ್ರ ಹಿಟ್ನಾಳ ಜನರ ಬದುಕನ್ನು ಹಗುರವಾಗಿ ತೆಗೆದುಕೊಂಡಿದ್ದಾರೆ. ಹಿಟ್ನಾಳ ಅವರಿಗೆ ಕ್ಷೇತ್ರಕ್ಕಿಂತ ಬೆಂಗಳೂರಿನಲ್ಲಿ ಹೆಚ್ಚು ಇರುವುದರ ಬಗ್ಗೆ ಕಾಳಜಿಯಿದೆ ಎಂದರು.

ADVERTISEMENT

ಗಣೇಶ ಹೊರತಟ್ನಾಳ ಮಾತನಾಡಿ ‘ಸಾರ್ವಜನಿಕರು ಪರದಾಡುವ ಪರಿಸ್ಥಿತಿ ಎದುರಾಗಿದೆ. ಆದರೂ ಶಾಸಕರು ಕಣ್ಣು ತೆರೆದು ನೋಡುತ್ತಿಲ್ಲ. ಗ್ರಾಮೀಣ ಭಾಗದಲ್ಲಿಯೂ ರಸ್ತೆ ಹದಗೆಟ್ಟಿದ್ದು ವಿದ್ಯಾರ್ಥಿಗಳು ರಸ್ತೆಗೆ ಇಳಿದಿದ್ದಾರೆ. ಹಿಟ್ನಾಳ ವೈಯಕ್ತಿಕ ಅಭಿವೃದ್ಧಿ ಮತ್ತು ಕಾರ್ಖಾನೆಗಳನ್ನು ಆರಂಭಿಸಲು ಮಾತ್ರ ಆಸಕ್ತಿ ಹೊಂದಿದ್ದಾರೆ’ ಎಂದು ಟೀಕಿಸಿದರು.

ಪಕ್ಷದ ಜಿಲ್ಲಾಧ್ಯಕ್ಷ ಬಸವರಾಜ ದಢೇಸೂಗೂರು, ಪ್ರಮುಖರಾದ ರಮೇಶ ಕವಲೂರು, ಸುನಿಲ್‌ ಹೆಸರೂರು, ಫಕೀರಪ್ಪ, ಕಂಠಯ್ಯ ಹಿರೇಮಠ, ದೇವರಾಜ ಹಾಲಸಮುದ್ರ, ಕೀರ್ತಿ ಪಾಟೀಲ, ಪ್ರಾಣೇಶ ಮಾದಿನೂರು, ಬಸವರಾಜ ಬನ್ನಿಕೊಪ್ಪ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.

ರಸ್ತೆಗಳಲ್ಲಿ ದೊಡ್ಡ ಗುಂಡಿಗಳು ಇರುವುದು ರಾಜ್ಯ ಸರ್ಕಾರದ ಆಡಳಿತ ವೈಫಲ್ಯಕ್ಕೆ ಸಾಕ್ಷಿಯಂತಿದೆ. ಶಾಸಕರು ಹಾಗೂ ಸಂಸದರು ಜನರಿಗೆ ಬೇಡವಾದ ಭಾಗ್ಯ ಕೊಡುವುದರಲ್ಲಿ ಕಾರ್ಯನಿರತರಾಗಿದ್ದಾರೆ.
–ಡಾ. ಬಸವರಾಜ ಕ್ಯಾವಟರ್‌, ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.