ADVERTISEMENT

ಕೊಪ್ಪಳ | ಪ್ರಚೋಚನಕಾರಿ ಭಾಷಣ: ಶ್ರೀಕಾಂತ್‌ ವಿರುದ್ಧ ಪ್ರಕರಣ

​ಪ್ರಜಾವಾಣಿ ವಾರ್ತೆ
Published 13 ಆಗಸ್ಟ್ 2025, 6:11 IST
Last Updated 13 ಆಗಸ್ಟ್ 2025, 6:11 IST

ಕೊಪ್ಪಳ: ವಾಲ್ಮೀಕಿ ಸಮುದಾಯದ ಯುವಕ ಗವಿಸಿದ್ದಪ್ಪ ನಾಯಕನ ಕೊಲೆ ಘಟನೆ ಖಂಡಿಸಿ ಸೋಮವಾರ ನಗರದಲ್ಲಿ ನಡೆದ ಪ್ರತಿಭಟನಾ ಮೆರವಣಿಗೆ ವೇಳೆ ಪ್ರಚೋದನಕಾರಿಯಾಗಿ ಭಾಷಣ ಮಾಡಿದ ಆರೋಪದ ಮೇಲೆ ಹಿಂದೂ ಜಾಗರಣ ವೇದಿಕೆ ವಿಭಾಗೀಯ ಸಂಚಾಲಕ ಶ್ರೀಕಾಂತ ಹೊಸಕೇರಾ ವಿರುದ್ಧ ಮಂಗಳವಾರ ಇಲ್ಲಿನ ನಗರ ಪೊಲೀಸ್‌ ಠಾಣೆಯಲ್ಲಿ ಪೊಲೀಸರು ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿದ್ದಾರೆ.

ಗಡಿಯಾರ ಕಂಬದಿಂದ ಆರಂಭವಾಗಿದ್ದ ಮೆರವಣಿಗೆ ಅಶೋಕ ಸರ್ಕಲ್‌ ತನಕ ನಡೆದಿತ್ತು. ಈ ವೃತ್ತದಲ್ಲಿ ಮಾತನಾಡಿದ್ದ ಶ್ರೀಕಾಂತ್‌ ’ಯಾವ ಹಿಂದೂಗಳೂ ಹೇಡಿಗಳಲ್ಲ, ಯಾವುದಾದರೂ ಹಿಂದೂ ಹುಡುಗ ಮುಸ್ಲಿಂ ಹುಡುಗಿಯನ್ನು ಕರೆದುಕೊಂಡು ಹೋದರೆ ಇದೆ ರಸ್ತೆಯಲ್ಲಿ ಹೊಡೆದರೊ ಈಗ ಹಿಂದೂಗಳು ಕೂಡ ಯೋಚನೆ ಮಾಡಬೇಕು. ಯಾವನಾದರೂ ಮುಸ್ಲಿಂ ಹುಡುಗ ಹಿಂದೂ ಹುಡುಗಿಯನ್ನು ಕರೆದುಕೊಂಡು ಹೋದರೆ ಈಗ ಯಾವ ರೀತಿ ಗವಿಸಿದ್ದಪ್ಪನಿಗೆ ಆಗಿದೆಯೊ ಅದೇ ರೀತಿ ಕೊಪ್ಪಳದಲ್ಲಿ ಹತ್ತು ಪ್ರಕರಣಗಳ ದಾಖಲಾಗಬೇಕು’ ಎಂದು ಮಾತನಾಡಿದ್ದರು.

ನಗರ ಪೊಲೀಸ್‌ ಠಾಣೆಯ ಸಿಪಿಸಿ ಹನುಮೇಶ್‌ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು ‘ಶ್ರೀಕಾಂತ್ ಭಾಷಣದಿಂದ ವಿವಿಧ ಜನಾಂಗದ ಜನರಲ್ಲಿ ದ್ವೇಷ ಮೂಡುವಂತೆ ಮಾಡುತ್ತದೆ. ಸಾಮರಸ್ಯ ಹಾಗೂ ಸೌಹಾರ್ದತೆಗೆ ಧಕ್ಕೆ ಉಂಟಾಗುತ್ತದೆ’ ಎಂದು ದೂರಿನಲ್ಲಿ ತಿಳಿಸಲಾಗಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.