ಕೊಪ್ಪಳದ ಗಂಜ್ ವೃತ್ತದ ಸಮೀಪದ ರಸ್ತೆಯಲ್ಲಿ ಹರಿದ ಚರಂಡಿ ನೀರು
–ಪ್ರಜಾವಾಣಿ ಚಿತ್ರ/ಭರತ್ ಕಂದಕೂರ
ಕೊಪ್ಪಳ: ಮಳೆಗಾಲದ ಮುಂಗಾರಿನ ಅವಧಿ ಆರಂಭವಾಗಿ ಒಂದೂವರೆ ತಿಂಗಳ ಬಳಿಕ ಜಿಲ್ಲೆಯಲ್ಲಿ ಈಗ ಬಿರುಸಿನ ಮಳೆ ಶುರುವಾಗಿದೆ. ಮಳೆಗಾಲಕ್ಕೂ ಮೊದಲು ನಗರಸಭೆ ಸಿದ್ಧತೆ ಮಾಡಿಕೊಳ್ಳದ ಕಾರಣಕ್ಕೆ ನಗರದ ಚರಂಡಿಗಳಲ್ಲಿ ತ್ಯಾಜ್ಯ ತುಂಬಿಕೊಂಡಿದ್ದು, ಮಳೆಯಾದರೆ ಸಾಕು ಚರಂಡಿ ಕೊಳಚೆ ಮುಖ್ಯರಸ್ತೆಯ ಮೇಲೆ ಹರಿದಾಡುತ್ತಿದೆ.
31 ವಾರ್ಡ್‌ಗಳನ್ನು ಹೊಂದಿರುವ ಜಿಲ್ಲಾಕೇಂದ್ರದಲ್ಲಿ ವರ್ಷದಿಂದ ವರ್ಷಕ್ಕೆ ಜನಸಂಖ್ಯೆ ಹೆಚ್ಚಾಗುತ್ತಲೇ ಇದೆ. ಎಲ್ಲ ವಾರ್ಡ್‌ಗಳಲ್ಲಿ ನಿಯಮಿತವಾಗಿ ಚರಂಡಿಗಳಲ್ಲಿ ತುಂಬಿರುವ ಹೂಳು ಸ್ವಚ್ಛಮಾಡುತ್ತಿಲ್ಲ. ಇನ್ನೂ ಕೆಲವು ಬಡಾವಣೆಗಳಲ್ಲಿ ಸರಿಯಾದ ಚರಂಡಿ ವ್ಯವಸ್ಥೆಯೇ ಇಲ್ಲ. ನಗರದ ಬಹುತೇಕ ವಾರ್ಡ್‌ಗಳಲ್ಲಿ ಸಮರ್ಪಕವಾಗಿ ಚರಂಡಿ ನೀರು ಹೋಗಲು ಅವಕಾಶವೇ ಇಲ್ಲದ ಕಾರಣಕ್ಕೆ ಬಹಳಷ್ಟು ಓಣಿಗಳಲ್ಲಿ ಮನೆ ಮುಂದೆಯೇ ನೀರು ನಿಲ್ಲುತ್ತದೆ. ಇದು ಸಾಂಕ್ರಾಮಿಕ ರೋಗಕ್ಕೂ ಕಾರಣವಾಗುತ್ತಿದೆ. ಈಗಿನ ಮಳೆಗೆ ಇಲ್ಲಿನ ಕಾತರಕಿ ರಸ್ತೆ, ಹಮಾಲರ ಕಾಲೊನಿ (ಮಹಾವೀರ ಕಾಲೊನಿ ಹಿಂಭಾಗ), ಪಲ್ಟನ್ ಓಣಿಯಲ್ಲಿ ಮನೆಗಳಿಗೆ ನೀರು ನುಗ್ಗಿವೆ. ಮಳೆಗಾಲ ಆರಂಭವಾದ ಬಳಿಕ ನಗರಸಭೆ ಅಧ್ಯಕ್ಷ ಅಮ್ಜದ್ ಪಟೇಲ್, ಪೌರಾಯುಕ್ತ ಸುರೇಶ ಬಬಲಾದಿ ಮನೆಗಳಿಗೆ ನೀರು ನುಗ್ಗಿದ ಪ್ರದೇಶಗಳಿಗೆ ಭೇಟಿ ನೀಡಿದರು.
ಮುಂಗಾರು ಆರಂಭದ ಮೊದಲ ತಿಂಗಳು ಜೂನ್‌ನಲ್ಲಿ ಜಿಲ್ಲೆಯಲ್ಲಿ ವಾಡಿಕೆಗಿಂತಲೂ 4.2 ಸೆಂ.ಮೀ. ಮಳೆ ಕಡಿಮೆಯಾಗಿ ಬರಗಾಲದ ಆತಂಕದ ಛಾಯೆ ಮನೆಮಾಡಿತ್ತು. ಜುಲೈ ಮೊದಲ ಎರಡು ವಾರಗಳಲ್ಲಿಯೂ ಮಳೆ ಕೊರತೆಕಾಡಿತ್ತು. ಇತ್ತೀಚೆಗಿನ ನಾಲ್ಕೈದು ದಿನಗಳಿಂದ ನಿರಂತರ ಮಳೆಯಾಗುತ್ತಿದೆ. ಸಂಜೆಯಾದರೆ ಸಾಕು ಭರಪೂರ ಮಳೆ ಬರುತ್ತಿದೆ. ಇದರಿಂದ ಚರಂಡಿಯಲ್ಲಿ ತುಂಬಿದ ತ್ಯಾಜ್ಯವೆಲ್ಲ ಹರಿದು ರಸ್ತೆಯ ಮೇಲೆ ಬರುತ್ತಿದೆ. ಭಾನುವಾರ ಸುರಿದ ಮಳೆಗೆ ನಗರದ ಗಂಜ್ ವೃತ್ತದ ಬಳಿಯ ರಸ್ತೆಯಲ್ಲಿ ಚರಂಡಿ ನೀರು ರಸ್ತೆಯ ಮೇಲೆ ಹರಿದಾಡಿತ್ತು. ಜನ ಹಾಗೂ ವಾಹನಗಳ ಸವಾರರು ಕೊಳಚೆ ನೀರಿನಲ್ಲಿಯೇ ಸಂಚರಿಸಿದ್ದರು.
'ನಗರಸಭೆಗೆ ಜನ ತೆರಿಗೆ ಪಾವತಿ ಮಾಡಿದರೂ ಜಿಲ್ಲಾಕೇಂದ್ರದ ಮುಖ್ಯರಸ್ತೆಯಲ್ಲಿ ಚರಂಡಿ ನೀರಿನಲ್ಲಿ ಓಡಾಡಬೇಕಾದ ದುಸ್ಥಿತಿಯಿದೆ. ಮಳೆಗಾಲ ಆರಂಭವಾಗುವ ಮೊದಲೇ ನಗರದ ಎಲ್ಲ ಚರಂಡಿಗಳನ್ನು ಸ್ವಚ್ಛಮಾಡಬೇಕಿತ್ತು. ಮಳೆಗಾಲದ ಸಮಯದಲ್ಲಿ ಚರಂಡಿಗಳ ಸ್ವಚ್ಛತೆ ಮತ್ತು ಎಲ್ಲೆಂದರಲ್ಲಿ ಕಸ ಬೀಸಾಡುವುದಕ್ಕೆ ಕಡಿವಾಣ ಹಾಕಬೇಕು’ ಎಂದು ರಸ್ತೆ ಮೇಲೆ ಹರಿದ ಚರಂಡಿ ನೀರಿನಲ್ಲಿಯೇ ದ್ವಿಚಕ್ರ ವಾಹನ ಓಡಿಸಿಕೊಂಡ ಹೋದ ಸವಾರ ನಗರದ ಹನುಮಂತಪ್ಪ ನಾಯಕ ಬೇಸರ ವ್ಯಕ್ತಪಡಿಸಿದರು.
ಮಳೆಗಾಲಕ್ಕೂ ಮೊದಲೇ ಕೆಲವು ಚರಂಡಿಗಳನ್ನು ಮಾತ್ರ ಸ್ವಚ್ಛಗೊಳಿಸಲಾಗಿದೆ. ಇನ್ನೂ ಬಾಕಿ ಇವೆ. ಮಳೆಗಾಲ ಚುರುಕಾಗಿರುವುದರಿಂದ ವೇಗವಾಗಿ ಕೆಲಸ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸುವೆಅಮ್ಜದ್ ಪಟೇಲ್ ನಗರಸಭೆ ಅಧ್ಯಕ್ಷ
ಕೊಪ್ಪಳದ ಬೇಲ್ದಾರ ಕಾಲೊನಿಯಲ್ಲಿರುವ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಬಿಸಿಯೂಟ ಅಡುಗೆ ಕೊಠಡಿ ಮಳೆಗೆ ಸೋರುತ್ತಿದ್ದು ಅಧಿಕಾರಿಗಳು ಕ್ರಮ ವಹಿಸಬೇಕು. ಮುಂದೆ ಎದುರಾಗುವ ಅಪಾಯವನ್ನು ಈಗಲೇ ತಡೆಯಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ. ಅಡುಗೆ ಕೊಠಡಿ ಬಹುತೇಕ ಕಡೆಗಳಲ್ಲಿ ಬಿರುಕು ಬಿಟ್ಟಿದ್ದು ಚಾವಣಿಯಿಂದ ಮಳೆ ನೀರು ಸೋರುತ್ತಿದೆ. ಅಲ್ಲಲ್ಲಿ ವಿದ್ಯುತ್ ತಂತಿ ಕಿತ್ತು ಹೊರಗಡೆ ಕಾಣುತ್ತಿದೆ.
Cut-off box - 16 ಮನೆಗಳಿಗೆ ಹಾನಿ ಜಿಲ್ಲೆಯಲ್ಲಿ ನಿರಂತರವಾಗಿ ಮಳೆ ಸುರಿದ ಪರಿಣಾಮ ಜೂನ್ ಆರಂಭದಿಂದ ಇಲ್ಲಿನ ತನಕ 16 ಮನೆಗಳಿಗೆ ಹಾನಿಯಾಗಿದೆ. ಕೊಪ್ಪಳ ತಾಲ್ಲೂಕಿನಲ್ಲಿ 9 ಕುಷ್ಟಗಿ 4 ಯಲಬುರ್ಗಾ ಗಂಗಾವತಿ ಮತ್ತು ಕುಕನೂರಿನಲ್ಲಿ ತಲಾ ಒಂದು ಮನೆಗಳು ಕುಸಿದಿವೆ ಎಂದು ಜಿಲ್ಲಾಡಳಿತ ಮಾಹಿತಿ ನೀಡಿದೆ. ಮನೆ ಕುಸಿದು ಗಂಗಾವತಿ ತಾಲ್ಲೂಕಿನಲ್ಲಿ ಒಂದೂವರೆ ವರ್ಷದ ಬಾಲಕಿ ಮೃತಪಟ್ಟಿದ್ದು ಸರ್ಕಾರದ ವತಿಯಿಂದ ₹5 ಲಕ್ಷ ಪರಿಹಾರ ನೀಡಲಾಗಿದೆ. ಕೊಪ್ಪಳ ಮತ್ತು ಕನಕಗಿರಿ ತಾಲ್ಲೂಕಿನಲ್ಲಿ ತಲಾ ಒಂದು ಜಾನುವಾರುಗಳು ಮೃತಪಟ್ಟಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.