ADVERTISEMENT

ಕೊಪ್ಪಳ | ‘ಜನರ ಹೋರಾಟದಿಂದ ಗೆಲುವು’

​ಪ್ರಜಾವಾಣಿ ವಾರ್ತೆ
Published 19 ನವೆಂಬರ್ 2025, 5:52 IST
Last Updated 19 ನವೆಂಬರ್ 2025, 5:52 IST
ಕೊಪ್ಪಳದಲ್ಲಿ ‌ನಡೆಯುತ್ತಿರುವ ಧರಣಿಯಲ್ಲಿ ನಟ ಚೇತನ್ ಅಹಿಂಸಾ ಮಾತನಾಡಿದರು
ಕೊಪ್ಪಳದಲ್ಲಿ ‌ನಡೆಯುತ್ತಿರುವ ಧರಣಿಯಲ್ಲಿ ನಟ ಚೇತನ್ ಅಹಿಂಸಾ ಮಾತನಾಡಿದರು    

ಕೊಪ್ಪಳ: ‘ಜನಸಾಮಾನ್ಯರು ಕಟ್ಟಿದ ಹೋರಾಟದ ಫಲವಾಗಿ ಇಲ್ಲಿನ ಜಿಲ್ಲಾಕೇಂದ್ರದ ಸಮೀಪದಲ್ಲಿ ವಿಸ್ತರಣೆಗೆ ಮುಂದಾಗಿರುವ ಕಾರ್ಖಾನೆಗಳನ್ನು ಓಡಿಸಲು ಸಾಧ್ಯವಾಗುತ್ತದೆ. ಕಪ್ಪತಗುಡ್ಡದ ಉಳಿವಿಗಾಗಿ ಒಟ್ಟಾಗಿ ಹೋರಾಟ ಮಾಡಿ ಗೆಲುವು ಪಡೆದವು’ ಎಂದು ಗದಗ ಜಿಲ್ಲೆ ಕಪ್ಪತಗುಡ್ಡ ನಂದಿವೇರಿ ಶಿವಕುಮಾರ ಸ್ವಾಮೀಜಿ ಹೇಳಿದರು.

ಅವರು ಇಲ್ಲಿನ ನಗರಸಭೆ ಸಂಕೀರ್ಣದ ಮುಂದೆ ನಡೆದಿರುವ ಅನಿರ್ದಿಷ್ಟ ಧರಣಿಯ 19ನೇ ದಿನದ ಹೋರಾಟದಲ್ಲಿ ಪಾಲ್ಗೊಂಡು ತಮ್ಮ ಅಭಿಪ್ರಾಯ ಹಂಚಿಕೊಂಡರು. ಸಭೆಗೆ ಬರುವ ಮುಂಚೆ ಅವರು ಬಾಧಿತ ಪ್ರದೇಶದ ಕೆಲವು ಗ್ರಾಮಗಳಿಗೆ ಭೇಟಿ ನೀಡಿ ಅಲ್ಲಿನ ಜನರ ಸಮಸ್ಯೆಯನ್ನು ಆಲಿಸಿದರು.

‘ಈ ವೇಳೆ ಅಲ್ಲಿನ ಗಂಭೀರ ಪರಿಸ್ಥಿತಿಯನ್ನು ಪ್ರತಿ ಮನೆಗೆ ಮುಟ್ಟಿಸುವ ಕೆಲಸವಾಗಬೇಕಿದೆ ಈಗಾಗಲೇ ಹೋರಾಟಕ್ಕೆ ಚಾಲನೆ ನೀಡಿರುವಂತಹ ಗವಿಸಿದ್ದೇಶ್ವರ ಸ್ವಾಮೀಜಿ ಇದರ ನೇತೃತ್ವ ವಹಿಸಿಕೊಳ್ಳಬೇಕು ಎಂಬ ಅಭಿಪ್ರಾಯ ಜನರದ್ದಾಗಿದೆ. ನಮ್ಮದು ಕೂಡ ಆಗಿದೆ. ರಾಜ್ಯದ ಎಲ್ಲ ಭಾಗಗಳ ಸ್ವಾಮೀಜಿಗಳನ್ನು ಅವಶ್ಯಕತೆ ಇದೆ ಎಂದರೆ ಕರೆದುಕೊಂಡು ಬರುತ್ತೇವೆ’ ಎಂದರು.

ADVERTISEMENT

ಚಲನಚಿತ್ರ ನಟ ಚೇತನ ಅಹಿಂಸಾ ಮಾತನಾಡಿ, ‘ಜನರಿಗೆ ಬದುಕುವ ಹಕ್ಕನ್ನು ಸಂವಿಧಾನ ಕೊಟ್ಟಿದೆ, ಅದರ ಆಶಯದಂತೆ ನಮಗೆ ನ್ಯಾಯ ಸಿಗಬೇಕು. ಹೋರಾಟ ಎಷ್ಟು ದೊಡ್ಡದಿದೆ ಚಿಕ್ಕದಿದೆ ಎಂಬುದು ಮುಖ್ಯವಲ್ಲ. ಆದರೆ ಆ ಹೋರಾಟದ ವಿಷಯ ವಸ್ತು ಮತ್ತು ಅದನ್ನು ತೆಗೆದುಕೊಂಡು ಹೋರಾಟ ಮಾಡುವ ಗಟ್ಟಿ ಜನ ಬಹಳ ಮುಖ್ಯ. ಹಾಗಾಗಿ ಅತ್ಯಂತ ಸೂಕ್ತವಾದ ವಿಷಯ ಇಟ್ಟುಕೊಂಡು ಸೂಕ್ತ ಹೋರಾಟ ರೂಪಿಸಿದ ಕಾರಣ ನಾನು ಇಲ್ಲಿಯವರೆಗೆ ಬಂದಿದ್ದೇನೆ’ ಎಂದರು.

ಜಿಲ್ಲಾ ಬಚಾವೊ ಆಂದೋಲನ ಮತ್ತು ಪರಿಸರ ಹಿತರಕ್ಷಣಾ ವೇದಿಕೆಯ ಪ್ರಮುಖರುಗಳಾದ ಅಲ್ಲಮಪ್ರಭು ಬೆಟ್ಟದೂರು, ಡಿ.ಎಚ್.ಪೂಜಾರ, ಕೆ.ಬಿ.ಗೋನಾಳ, ಮಂಜುನಾಥ ಜಿ. ಗೊಂಡಬಾಳ, ಎಸ್.ಬಿ.ರಾಜೂರು, ಮೂಕಪ್ಪ ಮೇಸ್ತ್ರಿ, ಯಮನೂರಪ್ಪ ಹಾಲಳ್ಳಿ, ಕರಿಯಪ್ಪ ಗುಡಿಮನಿ, ವಿದ್ಯಾ ನಾಲವಾಡ, ರತ್ನಮ್ಮ ಡಿ. ಬಸವರಾಜ ಶೀಲವಂತರ, ಮಹಾದೇವಪ್ಪ ಮಾವಿನಮಡು, ಎಸ್.ಎ.ಗಫಾರ್, ಶಂಭುಲಿಂಗಪ್ಪ ಹರಗೇರಿ, ಡಿ.ಎಂ.ಬಡಿಗೇರ, ಮುದಕಪ್ಪ ಹೂಸಮನಿ, ಶರಣು ಪಾಟೀಲ್, ಮಖಬೂಲ್ ರಾಯಚೂರು, ಕಾಶಪ್ಪ ಛಲವಾದಿ, ರಾಜು ಸಸಿಮಠ, ಗವಿಸಿದ್ದಪ್ಪ ಅನೇಕರು ಹಾಜರಿದ್ದರು.

ಗದುಗಿನಲ್ಲಿ ಜನಸಾಮಾನ್ಯರ ಹೋರಾಟದಿಂದ ಬಲ್ಡೋಟಾ ಗೋಲ್ಡ್ ಮೈನಿಂಗ್ ಕಂಪನಿಯನ್ನು ವಾಪಸ್ ಕಳಿಸಲು ಸಾಧ್ಯವಾಯಿತು. ಕೊಪ್ಪಳದಲ್ಲಿಯೂ ಅದೇ ರೀತಿಯ ಹೋರಾಟ ಆಗಬೇಕು

-ಶಿವಕುಮಾರ್ ಸ್ವಾಮೀಜಿ ನಂದಿವೇರಿ ಮಠದ ಕಪ್ಪತಗುಡ್ಡ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.