
ಕೊಪ್ಪಳ: ಜಿಲ್ಲಾಕೇಂದ್ರದಲ್ಲಿ ಎಲ್ಲೆಂದರಲ್ಲಿ ಪಾದಚಾರಿ ಮಾರ್ಗವನ್ನು ಒತ್ತುವರಿ ಮಾಡಿಕೊಂಡು ಹತ್ತಾರು ವರ್ಷಗಳಿಂದ ‘ಕಾಯಂ’ ಸೌಲಭ್ಯಗಳನ್ನೂ ಕಲ್ಪಿಸಿಕೊಂಡಿರುವ ವ್ಯಾಪಾರಿಗಳಿಗೆ ನಗರಸಭೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಶುಕ್ರವಾರ ಬಿಸಿ ಮುಟ್ಟಿಸಿದರು.
ಇಲ್ಲಿನ ಗದಗ ರಸ್ತೆಯಲ್ಲಿರುವ ಗೌರಿಶಂಕರ ದೇವಸ್ಥಾನ ಹಾಗೂ ಅಮಿನಪುರದ ಬಳಿ ಅಕ್ರಮವಾಗಿ ಒತ್ತುವರಿ ಮಾಡಿಕೊಂಡವರನ್ನು ತೆರವು ಮಾಡಿಸುವ ಕಾರ್ಯಾಚರಣೆ ಆರಂಭಿಸಿದರು. ಪೌರಾಯುಕ್ತ ವೆಂಕಟೇಶ್ ನಾಗನೂರು ಖುದ್ದು ಮುಂದೆ ನಿಂತು ಕಾರ್ಯಾಚರಣೆ ನಡೆಸುವಾಗ ಅಲ್ಲಿನ ವ್ಯಾಪಾರಿಗಳು ನಗರಸಭೆ ಅಧಿಕಾರಿಗಳು ಮತ್ತು ಸಿಬ್ಬಂದಿ ಜೊತೆ ವಾಗ್ವಾದಕ್ಕಿಳಿದು ನೋಟಿಸ್ ಕೂಡ ಕೊಡದೆ ತೆರವು ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ದೂರಿದರು.
ಸರ್ಕಾರದ ಪಾದಚಾರಿ ಜಾಗವನ್ನು ಒತ್ತುವರಿ ಮಾಡಿಕೊಂಡು ಕಾಯಂ ಸೌಲಭ್ಯಗಳನ್ನು ನಿರ್ಮಿಸಿಕೊಂಡವರಿಗೆ ಯಾಕೆ ನೋಟಿಸ್ ಕೊಡಬೇಕು? ಎಂದು ಪೌರಾಯುಕ್ತರು ಪ್ರಶ್ನಿಸಿದಾಗ ಮಾತಿನ ಚಕಮಕಿ ನಡೆಯಿತು. ಮನೆಮನೆಗೆ ತೆರಳಿ ಕಸ ಸಂಗ್ರಹಿಸುವ ವಾಹನಗಳ ಮೂಲಕ ಕೆಲವು ದಿನಗಳಿಂದ ’ಜಿಂಗಲ್ಸ್’ ಮೂಲಕ ಈ ಕುರಿತು ಮಾಹಿತಿ ನೀಡಲಾಗಿತ್ತು. ಅತಿಕ್ರಮಣ ಮಾಡಿಕೊಂಡ ಕೆಲವರು ತಾವು ಜಾಗ ಖಾಲಿ ಮಾಡುವುದಾಗಿ ತಿಳಿಸಿದರೆ, ಇನ್ನೂ ಕೆಲವರು ನಗರಸಭೆ ಕಾರ್ಯಕ್ಕೆ ವಿರೋಧ ವ್ಯಕ್ತಪಡಿಸಿದರು. ಕೆಲ ವ್ಯಾಪಾರಿಗಳು ಸ್ಥಳೀಯ ಸಂಸ್ಥೆಗೆ ನಿತ್ಯ ₹20 ಪಾವತಿ ಮಾಡುತ್ತಿದ್ದೇವೆ ಎಂದು ಚೀಟಿ ತೋರಿಸಿದರು. ಇದೆಲ್ಲದರ ನಡುವೆಯೂ ಅಧಿಕಾರಿಗಳು ಕಾರ್ಯಾಚರಣೆ ನಡೆಸಿದರು.
ಉಳಿದೆಡೆಯೂ ಬೇಕು ಕ್ರಮ: ನಗರಸಭೆ ಮುಂಭಾಗದ ಜಾಗ, ಹೊಸಪೇಟೆ ರಸ್ತೆ, ಗಂಜ್ ಸರ್ಕಲ್ ಹಾಗೂ ಜವಾಹರ ರಸ್ತೆ ಹೀಗೆ ವಿವಿಧೆಡೆಯೂ ಪಾದಚಾರಿ ಮಾರ್ಗವನ್ನು ಒತ್ತುವರಿ ಮಾಡಿಕೊಳ್ಳಲಾಗಿದೆ. ಜನ ಪಾದಚಾರಿ ರಸ್ತೆಯಲ್ಲಿಯೂ ಓಡಾಡಲು ಆಗದೆ ಮುಖ್ಯರಸ್ತೆಯ ಎಡಬದಿಯ ಮಾರ್ಗವೇ ಓಡಲು ‘ಪಾದಚಾರಿ’ ರಸ್ತೆಯಾಗಿದೆ. ಅಲ್ಲಿಯೂ ತೆರವು ಕೆಲಸ ನಡೆಯಬೇಕಾಗಿದೆ.
‘ಬೀದಿ ಬದಿ ವ್ಯಾಪಾರಿಗಳಿಗೆ ತೊಂದರೆಯಿಲ್ಲ’
ಕೊಪ್ಪಳ: ತೆರವು ಕಾರ್ಯಾಚರಣೆ ವಿಚಾರದಲ್ಲಿ ಕೆಲವರು ಅನಗತ್ಯ ತಪ್ಪು ಮಾಹಿತಿ ನೀಡುತ್ತಿದ್ದಾರೆ. ಬೀದಿಬದಿ ವ್ಯಾಪಾರಿಗಳಿಗೆ ಯಾವುದೇ ತೊಂದರೆಯಿಲ್ಲ. ಅವರ ಬದುಕಿನ ದುಡಿಮೆಗೆ ನಾವು ಅಡ್ಡಿಯಾಗುವುದಿಲ್ಲ. ಆದರೆ ಪಾದಚಾರಿ ಮಾರ್ಗದ ಮೇಲೆ ಅನಧಿಕೃತವಾಗಿ ಕಾಯಂ ಸೌಲಭ್ಯಗಳನ್ನು ನಿರ್ಮಿಸಿಕೊಂಡವರನ್ನು ತೆರವು ಮಾಡಿಸಲಾಗುವುದು ಎಂದು ಪೌರಾಯುಕ್ತರು ಹೇಳಿದರು. ‘ತೆರವು ಕಾರ್ಯಾಚರಣೆಗೆ ಯಾವ ಸಾರ್ವಜನಿಕರೂ ವಿರೋಧ ವ್ಯಕ್ತಪಡಿಸಿಲ್ಲ. ಕಾನೂನುಬಾಹಿರವಾಗಿ ಅಂಗಡಿ ಹಾಕಿಕೊಂಡವರು ಮಾತ್ರ ವಿರೋಧ ಮಾಡುತ್ತಿದ್ದಾರೆ. ಅವರಿಗೂ ಕೆಲ ದಿನ ಸಮಯ ನೀಡಿ ಕಾರ್ಯಾಚರಣೆ ಮುಂದುವರಿಸಲಾಗುವುದು’ ಎಂದು ಅವರು ಮಾಹಿತಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.