ADVERTISEMENT

ಕೊಪ್ಪಳ: ಗಣಪತಿ ಬಂದ ಸಂಭ್ರಮ ತಂದ

ಸ್ವಾಗತಕ್ಕೆ ಸಂಭ್ರಮದ ಸಿದ್ಧತೆ, ಜಿಲ್ಲೆಯಾದ್ಯಂತ 800 ಕಡೆ ಸಿಸಿಟಿವಿ ಕ್ಯಾಮೆರಾ ಕಣ್ಗಾವಲು

​ಪ್ರಜಾವಾಣಿ ವಾರ್ತೆ
Published 25 ಆಗಸ್ಟ್ 2025, 7:51 IST
Last Updated 25 ಆಗಸ್ಟ್ 2025, 7:51 IST
ಕೊಪ್ಪಳದಲ್ಲಿ ಗಣೇಶ ಮೂರ್ತಿಗಳಿಗೆ ಅಂತಿಮ ಸ್ಪರ್ಶ ನೀಡುವಲ್ಲಿ ತಲ್ಲೀನನಾಗಿದ್ದ ಕಲಾವಿದ –ಪ್ರಜಾವಾಣಿ ಚಿತ್ರ/ಭರತ್ ಕಂದಕೂರ
ಕೊಪ್ಪಳದಲ್ಲಿ ಗಣೇಶ ಮೂರ್ತಿಗಳಿಗೆ ಅಂತಿಮ ಸ್ಪರ್ಶ ನೀಡುವಲ್ಲಿ ತಲ್ಲೀನನಾಗಿದ್ದ ಕಲಾವಿದ –ಪ್ರಜಾವಾಣಿ ಚಿತ್ರ/ಭರತ್ ಕಂದಕೂರ   

ಪ್ರಮೋದ ಕುಲಕರ್ಣಿ

ಕೊಪ್ಪಳ: ಜಿಲ್ಲೆಯಲ್ಲಿ ಎಲ್ಲೆಡೆ ನೋಡಿದರೂ ಗಣೇಶ ಮೂರ್ತಿಗಳ ಮಾರಾಟದ ಭರಾಟೆ, ಸುರಕ್ಷತೆಯ ಅಭಯಕ್ಕಾಗಿ ಪೊಲೀಸರ ಪಥ ಸಂಚಲನ, ಮುಂಗಡವಾಗಿ ಖರೀದಿಸಿದ ಬೃಹತ್‌ ಗಣೇಶ ಮೂರ್ತಿಗಳ ಭವ್ಯ ಮೆರವಣಿಗೆ.

ಇದು ಗಣೇಶ ಹಬ್ಬವನ್ನು ಸಂಭ್ರಮದಿಂದ ಸ್ವಾಗತಿಸಲು ಜಿಲ್ಲೆಯಲ್ಲಿ ನಡೆದಿರುವ ಸಿದ್ಧತೆ. ಹಿಂದೂಗಳ ಅನೇಕ ಹಬ್ಬಗಳಲ್ಲಿ ಗಣೇಶ ಚತುರ್ಥಿ ಪ್ರಮುಖವಾದದ್ದು, ಈದ್‌ ಮಿಲಾದ್‌ ಕೂಡ ಇದೇ ಸಂದರ್ಭದಲ್ಲಿ ಬರುವ ಕಾರಣ ಅನೇಕ ಕಡೆ ಭಾವೈಕ್ಯದ ಹಬ್ಬವಾಗಿ ಆಚರಿಸಲಾಗುತ್ತಾರೆ. ಬಾಲ ಗಂಗಾಧರ ತಿಲಕ್ ಅವರು ಬ್ರಿಟಿಷ್ ಆಡಳಿತದ ವಿರುದ್ಧ ಜನರನ್ನು ಒಗ್ಗೂಡಿಸಲು ಮತ್ತು ಭಾರತೀಯತೆಯನ್ನು ಎತ್ತಿ ತೋರಿಸಲು ಗಣೇಶ ಚತುರ್ಥಿಯನ್ನು ಸಾರ್ವಜನಿಕ ಉತ್ಸವವನ್ನಾಗಿ ಆರಂಭಿಸಿದರು. ಇದರಿಂದ ಹಿಂದೂಗಳನ್ನು ಒಗ್ಗೂಡಿಸಿ, ತಮ್ಮ ಸಂಸ್ಕೃತಿ ಮತ್ತು ಹಕ್ಕುಗಳನ್ನು ಎತ್ತಿ ತೋರಿಸಲು ಗಣೇಶನ ಸಾರ್ವಜನಿಕ ಪ್ರತಿಷ್ಠಾಪನೆ ವೇದಿಕೆಯಾಗಿತ್ತು.

ADVERTISEMENT

ಆದರೆ ಕಾಲದ ಚಕ್ರ ಉರುಳಿದಂತೆ ಸಂಘಟನೆಗಳಿಗೆ ದೇವರ ಭಕ್ತಿ ಹಾಗೂ ಜೀವನದ ಶಕ್ತಿ ಹೆಚ್ಚಿಸಿಕೊಳ್ಳುವುದಕ್ಕಿಂತ ಗಣೇಶ ಹಬ್ಬ ಅದ್ದೂರಿ ಮೆರವಣಿಗೆ, ಡಿಜೆ ಅಬ್ಬರ, ಕುಡಿತದ ಅಮಲಿನಲ್ಲಿ ತೇಲಾಡುವ ಆಡಂಬರವಾಗಿ ಬದಲಾಗಿರುವುದು ಗುಟ್ಟಾಗಿ ಉಳಿದಿಲ್ಲ. ವಾಹನಗಳ ಸವಾರರಿಗೆ ಅಡ್ಡಹಾಕಿ ’ಗಣಪತಿ ಪಟ್ಟಿ’ ಕೇಳುತ್ತಿರುವುವುದು ತಪ್ಪಿಲ್ಲ. ಹಬ್ಬದ ನೆಪದಲ್ಲಿ ಹಿಂದೆ ಜಿಲ್ಲೆಯಲ್ಲಿ ಅನೇಕ ಬಾರಿ ಅಹಿತಕರ ಘಟನೆಗಳು ನಡೆದಿವೆ. ಅವುಗಳಿಗೆ ಮತ್ತೆ ಅವಕಾಶ ನೀಡಬಾರದು ಎಂದು ಪೊಲೀಸರು ಹಾಗೂ ಅಧಿಕಾರಿಗಳು ಸಂಘಟಕರಿಗೆ ಈಗಾಗಲೇ ಹಲವು ಬಾರಿ ಸಭೆಗಳನ್ನು ನಡೆಸಿ ಎಚ್ಚರಿಕೆಯನ್ನೂ ನೀಡಿದ್ದಾರೆ. ಸಾರ್ವಜನಿಕ ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಅನುಮತಿ ಪಡೆಯಲು ಏಕಗವಾಕ್ಷಿ ವ್ಯವಸ್ಥೆ ಜಾರಿ ಮಾಡಲಾಗಿದೆ.

ಮೂರ್ತಿ ಪ್ರತಿಷ್ಠಾಪನೆ ಮಾಡುವವರು ಆಯಾ ಸ್ಥಳೀಯ ಸಂಸ್ಥೆಗಳ ಮೂಲಕ ಅನುಮತಿ ಪಡೆದುಕೊಳ್ಳಬೇಕು, ಅಗ್ನಿಶಾಮಕ ದಳದ ಪರವಾನಿಗೆ, ಪ್ರತಿಷ್ಠಾಪನೆ ಮಾಡುವ ಜಾಗ ಖಾಸಗಿ ಸ್ಥಳವಾಗಿದ್ದರೆ ಅದರ ಮಾಲೀಕರ ಒಪ್ಪಿಗೆ ಬೇಕು ಎಂದು ಜಿಲ್ಲಾಡಳಿತ ಹೇಳಿದೆ. ಗಣೇಶ ಮೂರ್ತಿ ಸ್ವಾಗತ ಹಾಗೂ ವಿಸರ್ಜನೆಯ ಮೆರವಣಿಗೆ ವೇಳೆ ಬಳಕೆ ಮಾಡುವ ವಾಹನ ಮತ್ತು ಚಾಲಕರ ವಿವರವನ್ನು ಮುಂಚಿತವಾಗಿಯೇ ಪೊಲೀಸರಿಗೆ ನೀಡಬೇಕಾಗಿದೆ.

ಕಲಾವಿದರಲ್ಲಿ ಖುಷಿ: ಸುರಕ್ಷತಾ ಕ್ರಮವಾಗಿ ಇವಿಷ್ಟು ಕ್ರಮಗಳನ್ನು ಜಿಲ್ಲಾಡಳಿತ ಕೈಗೊಂಡರೆ ಮನೆಗಳಲ್ಲಿ ಪ್ರತಿಷ್ಠಾಪಿಸುವ ಗಣೇಶ ಮೂರ್ತಿಗಳ ಮಾರಾಟ ಭರಾಟೆ ಜೋರಾಗಿದೆ. ಕೊಪ್ಪಳದ ನಗರಸಭೆ ಸಮೀಪ, ಜವಾಹರ ರಸ್ತೆ, ಕುಂಬಾರ ಓಣಿ, ಗಂಗಾವತಿ, ಕನಕಗಿರಿ, ಕಾರಟಗಿ, ಕುಕನೂರು, ಯಲಬುರ್ಗಾ, ಕುಷ್ಟಗಿ, ಅಳವಂಡಿ, ಹನುಮಸಾಗರ, ಕುಂಬಾರರ ಮನೆಗಳು ಹೀಗೆ ಅನೇಕ ಕಡೆ ಗಣೇಶ ಮೂರ್ತಿಗಳು ವಿವಿಧ ಬಣ್ಣಗಳು, ವಿನ್ಯಾಸಗಳು ಮತ್ತು ತರಹೇವಾರಿ ಅಳತೆಯ ಮೂರ್ತಿಗಳು ಇವೆ.

ಮೊದಲೆಲ್ಲ ಕುಂಬಾರರೇ ಹೆಚ್ಚಿನ ಸಂಖ್ಯೆಯಲ್ಲಿ ಮನೆಯಲ್ಲಿ ಮೂರ್ತಿಗಳನ್ನು ತಯಾರಿಸುತ್ತಿದ್ದರು. ಈಗ ಅರ್ಧದಷ್ಟು ತಯಾರಿಸಿ, ಇನ್ನಷ್ಟು ಮೂರ್ತಿಗಳನ್ನು ಬೆಳಗಾವಿ, ಪುಣೆ ಹಾಗೂ ಮುಂಬೈನಿಂದ ತರಿಸಿ ಮಾರಾಟ ಮಾಡುತ್ತಿದ್ದಾರೆ.

’ಮೊದಲು ಕೊಪ್ಪಳ ಸಮೀಪದ ಬಸಾಪುರ ಕೆರೆಯಿಂದ ಮಣ್ಣು ತರುತ್ತಿದ್ದೆವು. ಈಗ ಮಣ್ಣಿನ ಕೊರತೆಯಿರುವ ಕಾರಣ ಹೊರಗಡೆಯಿಂದ ತಂದು ಮಾರಾಟ ಮಾಡುವುದು ಹೆಚ್ಚು. ಹಬ್ಬ ಸಮೀಪಿಸುತ್ತಿದ್ದಂತೆಯೇ ಮೂರ್ತಿಗಳ ಮಾರಾಟ ಜೋರಾಗಿದೆ’ ಎಂದು ಇಲ್ಲಿನ ಕುಂಬಾರ ಓಣಿಯಲ್ಲಿರುವ ಗ್ರಾಮ ಸ್ವರಾಜ್ಯ ಪರಿಸರ ಸ್ನೇಹಿ ಸ್ವದೇಶಿ ಕೇಂದ್ರದ ಒಡತಿ ಪೂಜಾ ಕುಂಬಾರ ಹೇಳಿದರು.

ಜಿಲ್ಲಾಕೇಂದ್ರ ಸೇರಿದಂತೆ ಜಿಲ್ಲೆಯಾದ್ಯಂತ ಸಂಘಟಕರು ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ದೊಡ್ಡ ಟೆಂಟ್‌ಗಳನ್ನು ಹಾಕಿ ಬಣ್ಣಬಣ್ಣಗಳ ವಿದ್ಯುತ್‌ ವ್ಯವಸ್ಥೆ ಕಲ್ಪಿಸಿದ್ದಾರೆ. ದೊಡ್ಡ ಬ್ಯಾನರ್‌ಗಳನ್ನು ಅಳವಡಿಸಿದ್ದಾರೆ.  ಅಧಿಕಾರಿಗಳು ವಿಘ್ನ ನಿವಾರಕನ ಹಬ್ಬದಲ್ಲಿ ಬೇರೆ ಸಮುದಾಯದ ಜನರ ಭಾವನೆಗಳಿಗೆ ಧಕ್ಕೆ ತರಬಾರದು ಎಂದು ಎಚ್ಚರಿಕೆ ನೀಡಿದ್ದು ನಿಗಾ ವಹಿಸಲು ಸೂಕ್ಷ್ಮ ಪ್ರದೇಶಗಳಲ್ಲಿ ಜಿಲ್ಲೆಯಾದ್ಯಂತ 800 ಕಡೆ ಸಿಸಿಟಿವಿ ಕ್ಯಾಮೆರಾಗಳ ಕಣ್ಗಾವಲು ವಹಿಸಲಾಗಿದೆ. 

ಗಂಗಾವತಿಯ ಬನ್ನಿಗಿಡದ ಕ್ಯಾಂಪ್‌ನಲ್ಲಿ ಕಲಾವಿದ ಶಂಕರ್‌ ಚಿತ್ರಗಾರ ಅವರು ಗಣೇಶ ಮೂರ್ತಿಗೆ ಅಂತಿಮ ಸ್ಪರ್ಶ ನೀಡುತ್ತಿದ್ದ ಚಿತ್ರಣ
ಸುರೇಶ ಇಟ್ನಾಳ 
ಡಾ. ರಾಮ್‌ ಎಲ್‌. ಅರಸಿದ್ಧಿ
ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಗಣೇಶ ಮೂರ್ತಿ ವ್ಯಾಪಾರ ಕಡಿಮೆಯಿದೆ. ಹಬ್ಬ ಸಮೀಪಿಸುತ್ತಿದ್ದಂತೆ ಮಾರಾಟ ಹೆಚ್ಚಾಗುತ್ತದೆ. ಪೂರ್ಣ ಮಣ್ಣಿನ ಗಣೇಶ ಮೂರ್ತಿಯನ್ನಷ್ಟೇ ಮಾರಾಟ ಮಾಡುತ್ತೇವೆ.
ಯಲ್ಲಪ್ಪ ಚಿತ್ರಗಾರ ಗಣಪತಿ ಮೂರ್ತಿ ಮಾರಾಟಗಾರ ಕೊಪ್ಪಳ
ಯಾವುದೇ ಅಹಿತಕರ ಘಟನೆಗೆ ಅವಕಾಶವಿಲ್ಲದಂತೆ ಹಬ್ಬ ಆಚರಿಸಬೇಕು. ಕಾನೂನು ಕೈಗೆತ್ತಿಕೊಂಡರೆ ಪ್ರಕರಣ ದಾಖಲಿಸಬೇಕಾಗುತ್ತದೆ. ಹಬ್ಬ ಆಚರಣೆಗೆ ಪೊಲೀಸ್‌ ಇಲಾಖೆ ಸಂಪೂರ್ಣ ಸಹಕಾರ ನೀಡಲಿದೆ.
ಡಾ. ರಾಮ್‌ ಎಲ್‌. ಅರಸಿದ್ಧಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ
ಕೊಪ್ಪಳ ಜಿಲ್ಲೆ ಶಾಂತಿಪ್ರಿಯರ ನಾಡು ಎಂದು ಹೆಸರಾಗಿದೆ. ಯಾವುದೇ ದುರ್ಘಟನೆಗೆ ಅವಕಾಶ ಕೊಡದಂತೆ ಹಬ್ಬ ಆಚರಿಸಬೇಕು. ಸಂಘಟಕರು ಕಡ್ಡಾಯವಾಗಿ ನಿಯಮ ಪಾಲಿಸಬೇಕು.
ಸುರೇಶ ಇಟ್ನಾಳ ಜಿಲ್ಲಾಧಿಕಾರಿ

ದೊಡ್ಡ ಮೂರ್ತಿಗಳಿಗೆ ಬೇಡಿಕೆ

ಗಂಗಾವತಿ: ‘ಎರಡು ದಶಕಗಳ ಹಿಂದೆ ಸಾರ್ವಜನಿಕ ಸ್ಥಳಗಳಲ್ಲಿ ಗಣೇಶ ಪ್ರತಿಷ್ಠಾಪಿಸುವವರು ಸಣ್ಣ ಅಳತೆಯ ಮೂರ್ತಿ ಖರೀದಿ ಮಾಡುತ್ತಿದ್ದರು. ಈಗ ಮಂಡಳಿಗಳು ಕನಿಷ್ಠ 6ರಿಂದ 10 ಅಡಿ ಎತ್ತರದ ಮೂರ್ತಿಗಳು ಬೇಕು’ ಎನ್ನುತ್ತಾರೆ ಗಂಗಾವತಿಯ ಬನ್ನಿಗಿಡದ ಕ್ಯಾಂಪ್‌ನ ಗಣೇಶ ಮೂರ್ತಿ ತಯಾರಕ ಶಂಕರ್‌ ಚಿತ್ರಗಾರ. ‘ಸಾಕಷ್ಟು ಎತ್ತರದ ಮೂರ್ತಿಗಳನ್ನು ಮಣ್ಣಿನಿಂದ ತಯಾರಿಸಿದರೆ ಮೂರ್ತಿ ಬಿರುಕು ಬಿಡುವುದು ವಾಹನಗಳಲ್ಲಿ ಮೂರ್ತಿ ಸಾಗಾಟಕ್ಕೆ ತೊಂದರೆ ಜೊತೆಗೆ ಭಿನ್ನವಾಗುವ ಸಾಧ್ಯತೆಗಳು ಹೆಚ್ಚು. ಆದ್ದರಿಂದ ಮಣ್ಣು ಮತ್ತು ಪಿಒಪಿ ಎರಡು ಬಳಸಿ ಮೂರ್ತಿಗಳನ್ನು ತಯಾರಿಸಲಾಗುತ್ತಿದೆ.  ಆದರೆ ರಾಸಾಯನಿಕ ಬಳಕೆ ಮಾಡುವುದಿಲ್ಲ. ವಾಟರ್‌ ಬಣ್ಣಗಳನ್ನು ಬಳಕೆ ಮಾಡಲಾಗುತ್ತಿದೆ. ಈಗ ಮೂರ್ತಿ ತಯಾರಕರ ಸಂಖ್ಯೆ ಹೆಚ್ಚಾಗಿದ್ದು ಎಲ್ಲ ವ್ಯಾಪಾರಿಗಳಿಗೂ ಲಾಭ ಕಡಿಮೆಯಾಗಿದೆ’ ಎಂದು ಅವರು ಹೇಳುತ್ತಾರೆ.

Cut-off box - ಡಿಜೆ ಬಳಕೆಗೆ ಬೀಳುವುದೇ ಕಡಿವಾಣ? ಕೊಪ್ಪಳ: ಪ್ರತಿವರ್ಷ ಗಣೇಶ ಹಬ್ಬದ ಸಂದರ್ಭದಲ್ಲಿ ಡಿಜೆ ಬಳಕೆಗೆ ಅವಕಾಶವಿಲ್ಲ ಎಂದು ಪೊಲೀಸರು ಹೇಳುತ್ತಲೇ ಇದ್ದರೂ ಅಂತಿಮವಾಗಿ ವಿಸರ್ಜನಾ ಮೆರವಣಿಗೆ ದಿನ ಡಿಜೆ ಅಬ್ಬರ ನಗರಕ್ಕೆ ಕೇಳಿಸುವಷ್ಟು ಜೋರಾಗಿ ಇರುತ್ತಾರೆ. ಹೋಬಳಿ ಹಾಗೂ ಆಯಾ ಪೊಲೀಸ್‌ ಠಾಣೆಗಳ ವಾರು ಶಾಂತಿ ಸಭೆಗಳನ್ನು ನಡೆಸಿರುವ ಪೊಲೀಸರು ’ಡಿ.ಜೆ. ಬಳಕೆಗೆ ಅವಕಾಶವೇ ಇಲ್ಲ’ ಎಂದು ಕರಾರುವಾಕ್ಕಾಗಿ ಹೇಳಿದ್ದಾರೆ. ಇದು ವಾಸ್ತವಿಕವಾಗಿ ಅನುಷ್ಠಾನಕ್ಕೆ ಬರುತ್ತದೆಯೇ ಎನ್ನುವುದನ್ನು ಕಾದು ನೋಡಬೇಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.