
ಕೊಪ್ಪಳದ ಗವಿಮಠದ ಆವರಣದಲ್ಲಿ ಭಾನುವಾರ ನಡೆದ ಲಘು ರಥೋತ್ಸವ(ಉಚ್ಛಾಯ)ದಲ್ಲಿ ಸಾವಿರಾರು ಭಕ್ತರು ಭಾಗಿಯಾಗಿದ್ದರು
–ಪ್ರಜಾವಾಣಿ ಚಿತ್ರ/ಭರತ್ ಕಂದಕೂರ
ಕೊಪ್ಪಳ: ಗವಿಮಠದ ಮಹಾರಥೋತ್ಸವಕ್ಕೆ ಮುನ್ನಾದಿನವಾದ ಭಾನುವಾರ ಮಠದ ಮುಂಭಾಗದ ಮೈದಾನದಲ್ಲಿ ಅದ್ದೂರಿಯಾಗಿ ಲಘು ರಥೋತ್ಸವ (ಉಚ್ಛಾಯ) ನಡೆಯಿತು.
ಗವಿಸಿದ್ಧೇಶ್ವರ ಸ್ವಾಮಿಯ ಮೂರ್ತಿಯನ್ನು ಕಲಾತಂಡಗಳ ಮೆರವಣಿಗೆ ಮೂಲಕ ಮೈದಾನಕ್ಕೆ ಸಂಭ್ರಮದಿಂದ ತಂದಾಗ ಭಕ್ತರಿಂದ ಗವಿಸಿದ್ಧೇಶ್ವರ ಸ್ಮರಣಿಯ ಘೋಷಣೆಗಳು ಮೊಳಗಿದವು. ಇದಕ್ಕೂ ಮೊದಲು ವಾದ್ಯಮೇಳದೊಂದಿಗೆ ಪಾದಗಟ್ಟೆ ಬಳಿ ಪೂಜೆ ಸಲ್ಲಿಸಿ ವಾಪಸ್ ತೆರಳಿದರು. ಉಚ್ಛಾಯದ ಸುತ್ತಲೂ ಮೂರ್ತಿಯನ್ನು ಹೊತ್ತುಕೊಂಡು ಪ್ರದಕ್ಷಿಣೆ ಹಾಕಿದ ಬಳಿಕ ಜನರ ಸಡಗರ ಹಾಗೂ ಸಂಭ್ರಮದ ನಡುವೆ ಉಚ್ಛಾಯ ಪಾದಗಟ್ಟೆ ಬಳಿ ಸಾಗಿ ಸ್ವಸ್ಥಾನಕ್ಕೆ ಮರಳಿತು.
ರಂಗೋಲಿ: ಸೋಮವಾರ ಜರುಗುವ ಮಹಾರಥೋತ್ಸವ ಸಾಗುವ ಮಾರ್ಗವನ್ನು ತರಹೇವಾರಿ ಬಣ್ಣಗಳಿಂದ ರಂಗೋಲಿ ಬಿಡಿಸಲಾಗಿದ್ದು, ಗಮನ ಸೆಳೆಯಿತು. ಶಾಲಾ, ಕಾಲೇಜುಗಳ ವಿದ್ಯಾರ್ಥಿಗಳು, ಯುವತಿಯರು ನೂರಾರು ಸಂಖ್ಯೆಯಲ್ಲಿ ಸೇರಿ ಅಂದವಾಗಿ ರಂಗೋಲಿ ಬಿಡಿಸಿದರು. ಕುತೂಹಲದಿಂದ ಗಮನಿಸುತ್ತಿದ್ದ ಜನ ರಂಗೋಲಿಯ ಚಿತ್ರಗಳನ್ನು ತಮ್ಮ ಮೊಬೈಲ್‌ಗಳನ್ನು ಕ್ಲಿಕ್ಕಿಸಿಕೊಳ್ಳುವ ಚಿತ್ರಣ ಸಾಮಾನ್ಯವಾಗಿತ್ತು.
ಹೆಚ್ಚಿದ ಭಕ್ತಗಣ:
ವಾರದ ರಜೆ ದಿನವಾಗಿದ್ದರಿಂದ ಭಾನುವಾರ ಸಂಜೆಯಾಗುತ್ತಿದ್ದಂತೆ ಭಕ್ತರ ಸಂಖ್ಯೆ ಹೆಚ್ಚುತ್ತಲೇ ಸಾಗಿತ್ತು. ಬೇರೆ ಜಿಲ್ಲೆಗಳಿಂದಲೂ ಬಂದು ವಾಸ್ತವ್ಯ ಹೂಡಿರುವ ಹಾಗೂ ಸ್ಥಳೀಯ ಭಕ್ತರಿಗೆ ಅನ್ನ, ಸಾರು, ಬದನೇಕಾಯಿ ಪಲ್ಲೆ, ಕಡ್ಲೆಪುಡಿ, ಉಪ್ಪಿನಕಾಯಿ, ಶೇಂಗಾ ಹೋಳಿಗೆ, ರವೆ ಉಂಡೆ, ಬೂಂದಿಕಾಳು ಸೇರಿದಂತೆ ತರಹೇವಾರಿ ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು.
ಪೊಲೀಸ್ ಕಣ್ಗಾವಲು:
ಮಹಾರಥೋತ್ವವದ ಸಮಯಕ್ಕೆ ಲಕ್ಷಾಂತರ ಭಕ್ತರು ಬರಲಿರುವ ಹಿನ್ನೆಲೆಯಲ್ಲಿ ಕೊಪ್ಪಳ, ಗದಗ ಸೇರಿದಂತೆ ವಿವಿಧ ಜಿಲ್ಲೆಗಳಿಂದ ಪೊಲೀಸರನ್ನು ಕರ್ತವ್ಯಕ್ಕೆ ನಿಯೋಜಿಸಲಾಗಿದೆ. ಒಟ್ಟು 1600 ಜನ ಸಿಬ್ಬಂದಿ ಬಂದಿದ್ದಾರೆ.
ಆರು ಕೆಎಸ್‌ಆರ್‌ಪಿ, 15 ಡಿ.ಆರ್., ಮೂವರು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ, 15ಜನ ಡಿವೈಎಸ್‌ಪಿ, ಮೂವರು ಎಸ್.ಪಿ.ಗಳು, 25 ಇನ್‌ಸ್ಟೆಕ್ಟರ್ ಹಾಗೂ 60 ಪಿಎಸ್‌ಐಯನ್ನು ನಿಯೋಜನೆ ಮಾಡಲಾಗಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ರಾಮ್ ಎಲ್. ಅರಸಿದ್ಧಿ ಅವರು ತಮ್ಮ ಸಿಬ್ಬಂದಿಗೆ ಭಾನುವಾರ ಅಗತ್ಯ ಸೂಚನೆಗಳನ್ನು ನೀಡಿ ಸಮನ್ವಯದಿಂದ ಕೆಲಸ ಮಾಡುವಂತೆ ಸೂಚಿಸಿದರು.
ಜಾತ್ರೆಯ ಸುತ್ತಲೂ ಪೊಲೀಸ್ ಕಣ್ಗಾವಲು | ಉಚ್ಛಾಯಕ್ಕೆ ಸಾಕ್ಷಿಯಾದ ಸಾವಿರಾರು ಭಕ್ತರು | ವಿದ್ಯುತ್ ದೀಪಗಳಿಂದ ಅಲಂಕೃತಗೊಂಡ ಗವಿಮಠ
ಗವಿಮಠದ ಜಾತ್ರೆಗೆ ಬರುವ ಭಕ್ತರಿಗೆ ಸುರಕ್ಷತೆಗಾಗಿ ಅಗತ್ಯ ಭದ್ರತಾ ವ್ಯವಸ್ಥೆ ಕಲ್ಪಿಸಲಾಗಿದೆ. ಬೇರೆ ಜಿಲ್ಲೆಗಳಿಂದಲೂ ಪೊಲೀಸರನ್ನು ನಿಯೋಜಿಸಲಾಗಿದೆ.ಡಾ. ರಾಮ್ ಎಲ್. ಅರಸಿದ್ಧಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಕೊಪ್ಪಳ
ಮೋಟೆಬೆನ್ನೂರ ಗ್ರಾಮಸ್ಥರಿಂದ ಅಕ್ಕಿ ಸಮರ್ಪಣೆ
ಜಾತ್ರೆಗೆ ಹಾವೇರಿ ಜಿಲ್ಲಾ ಬ್ಯಾಡಗಿ ತಾಲ್ಲೂಕಿನ ಮೋಟೆಬೆನ್ನೂರ ಗ್ರಾಮಸ್ಥರು ಹಾಗೂ ಹಿಂದೂ ಧಾರ್ಮಿಕ ಸೇವಾ ಸಮಿತಿ ಕೋಟೆಬಯಲು ಸದಸ್ಯರು 9000 ಜೋಳದ ರೊಟ್ಟಿ 30 ಕೆಜಿ. ಶೇಂಗಾ ಚಟ್ನಿ ಎಂಟು ಕೆ.ಜಿ. ಅಕ್ಕಿ ಪಾಕೆಟ್ ಸಮರ್ಪಣೆ ಮಾಡಿದ್ದಾರೆ. ಗ್ರಾಮದ ರುದ್ರಪ್ಪ ಹಾದರಗೇರಿ ಚಿಕ್ಕಪ್ಪ ಮೈಲಾರ ಮಂಜುನಾಥ ಜಿಂಗಾಡಿ ಕುರವತ್ತೆಪ್ಪ ಹರನಗೇರಿ ವೀರಪ್ಪ ಹರನಗೇರಿ ನಾಗರಾಜ ಬೆನ್ನೂರ ಮಹಾಂತೇಶ ಮೈಲಾರ ತುಕಾರಾಂ ಜಿಂಗಾಡೆ ಜಯಣ್ಣ ಚಂದ್ರಪ್ಪನವರ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.