ಗೇಸುದರಾಜ ಪಟೇಲ್, ಮಹಮ್ಮದ್ ನಿಜಾಮುದ್ದೀನ್, ಸಾಧಿಕ್ ಕೋಲ್ಕಾರ, ಮೆಹಬೂಬ್ ಸಿಕ್ಕಲ್‌ಗಾರ
ಕೊಪ್ಪಳ: ತಾನು ಮದುವೆಯಾಗಲು ಬಯಸಿದ್ಧ ಯುವತಿಯನ್ನು ಇಲ್ಲಿನ ಕುರುಬರ ಓಣಿಯ ನಿವಾಸಿ ಗವಿಸಿದ್ಧಪ್ಪ ನಾಯಕ ಕೂಡ ಪ್ರೀತಿಸಿದ ಎಂಬ ಕಾರಣಕ್ಕಾಗಿ ನಡೆದ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು ನಾಲ್ಕು ಜನ ಆರೋಪಿಗಳನ್ನು ಬಂಧಿಸಲಾಗಿದೆ.
ನಗರದ ನಿರ್ಮಿತಿ ಕೇಂದ್ರದ ಸಮೀಪದ ನದಿಮುಲ್ಲಾ ಖಾದ್ರಿ ಮಸೀದಿ ಬಳಿ ಭಾನುವಾರ ರಾತ್ರಿ 7.45ರ ಸುಮಾರಿಗೆ ಗವಿಸಿದ್ಧಪ್ಪನ ಕೊಲೆ ನಡೆದಿತ್ತು. ಇಲ್ಲಿನ ಸೈಲಾನಪುರ ಬಡಾವಣೆಯ ಸಾಧಿಕ್ ಹುಸೇನ್ ಕೋಲ್ಕಾರ್ ಮುಸ್ಲಿಂ ಸಮುದಾಯದ ಯುವತಿಯನ್ನು ಪ್ರೀತಿಸುತ್ತಿದ್ದ. ಗವಿಸಿದ್ಧಪ್ಪ ಕೂಡ ಅದೇ ಯುವತಿಯನ್ನು ಪ್ರೀತಿ ಮಾಡುತ್ತಿದ್ದ. ಕೃತ್ಯ ಎಸಗಿದ ಬಳಿಕ ಸಾಧಿಕ್ ನೇರವಾಗಿ ಇಲ್ಲಿನ ನಗರ ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದ. ಈ ಪ್ರಕರಣದ ಇನ್ನುಳಿದ ಮೂವರು ಆರೋಪಿಗಳಾದ ಇಲ್ಲಿನ ಮಿಟ್ಟಿಕೇರಿ ಓಣಿಯ ಗೇಸುದರಾಜ ಪಟೇಲ್, ನಿರ್ಮಿತಿ ಕೇಂದ್ರದ ಬಳಿ ಮಹಮ್ಮದ್ ನಿಜಾಮುದ್ದೀನ್ ಮತ್ತು ಮೆಹಬೂಬ ನಗರ ನಿವಾಸಿ ಮೆಹಬೂಬ್ ಸಿಕ್ಕಲ್‌ಗಾರ ಎಂಬುವರನ್ನು ಪೊಲೀಸರು ಬಂಧಿಸಿದ್ದಾರೆ.
ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ರಾಮ್ ಎಲ್. ಅರಸಿದ್ಧಿ ಅವರು ’ಘಟನೆ ನಡೆದ 24 ಗಂಟೆಗಳ ಒಳಗೆ ಆರೋಪಿಗಳನ್ನು ಬಂಧಿಸಲಾಗಿದೆ. ಕೃತ್ಯಕ್ಕೆ ಬಳಸಿದ ಎರಡು ಮಚ್ಚುಗಳನ್ನು ವಶಕ್ಕೆ ಪಡೆಯಲಾಗಿದೆ. ವೈಯಕ್ತಿಕ ಕಾರಣಕ್ಕಾಗಿ ಈ ಹತ್ಯೆ ನಡೆದಿದೆ. ಇದರಲ್ಲಿ ಹಿಂದೂ–ಮುಸ್ಲಿಂ ಎನ್ನುವ ವಿಚಾರ ಬಂದಿಲ್ಲ’ ಎಂದು ಸ್ಪಷ್ಟಪಡಿಸಿದರು.
ಮೊದಲ ಆರೋಪಿ ಸಾಧಿಕ್ ಗಾಂಜಾ ಸೇವನೆ ಮಾಡಿದ, ಕೃತ್ಯ ಎಸಗುವ ಮೊದಲು ಮಚ್ಚು ಹಿಡಿದುಕೊಂಡು ರೀಲ್ಸ್ ಮಾಡಿದ ವಿಡಿಯೊಗಳಿಗೆ ಸಂಬಂಧಿಸಿ ಕೇಳಲಾದ ಪ್ರಶ್ನೆಗೆ ‘ವೈದ್ಯಕೀಯ ಪರೀಕ್ಷೆ ಮಾಡಲಾಗಿದ್ದು, ಗಾಂಜಾ ಸೇವಿಸಿದ್ದು ಖಚಿತವಾಗಿಲ್ಲ. ಪ್ರೀತಿಯ ವಿಚಾರವಾಗಿ ಕೊಲೆ ನಡೆದಿದೆ’ ಎಂದು ತಿಳಿಸಿದರು.
ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಹೇಮಂತಕುಮಾರ್ ಆರ್., ಸೆನ್ ಠಾಣೆಯ ಡಿವೈಎಸ್‌ಪಿ ಯಶವಂತಕುಮಾರ್, ನಗರ ಪೊಲೀಸ್ ಠಾಣೆ ಪೊಲೀಸ್ ಇನ್‌ಸ್ಟೆಕ್ಟರ್ ಕೆ. ಜಯಪ್ರಕಾಶ ಇದ್ದರು.
ವೃತ್ತಿಯಲ್ಲಿ ಚಾಲಕನಾಗಿದ್ದ ಗವಿಸಿದ್ಧಪ್ಪ ವಾರಪೂರ್ತಿ ದುಡಿದು ಅದರಿಂದ ಬಂದ ಒಂದಷ್ಟು ಹಣವನ್ನು ತಾಯಿಗೆ ನೀಡಿದ್ದ. ಭಾನುವಾರ ಸಂಜೆ ತನಕ ಮನೆಯಲ್ಲಿಯೇ ಇದ್ದ. ಸಂಜೆ ಬಂದ ಒಂದು ಫೋನ್ ಕರೆಯಿಂದ ಏಕಾಏಕಿ ಮನೆಯಿಂದ ಹೊರಗಡೆ ಹೋದಾಗ ಕೊಲೆಯಾಗಿದೆ.
ಈ ಕುರಿತು ಪ್ರತಿಕ್ರಿಯಿಸಿದ ಎಸ್.ಪಿ. ರಾಮ್ ಎಲ್. ಅರಸಿದ್ಧಿ ಅವರು ’ಕೊಲೆಯಾದ ಸ್ಥಳಕ್ಕೆ ಆತ ಹೋಗುವಂತೆ ಮಾಡಿದ್ದು ಯಾರು ಎನ್ನುವುದು ತನಿಖೆಯಿಂದ ಗೊತ್ತಾಗಬೇಕಿದೆ’ ಎಂದರು.
ಕೊಪ್ಪಳ ಜಿಲ್ಲೆಯಲ್ಲಿ ಹಿಂದಿನ ಮೂರು ವರ್ಷಗಳಿಂದ ಗಾಂಜಾ ಸೇವಿಸಿ ಸಿಕ್ಕಿಬಿದ್ದಿರುವ ಪ್ರಕರಣಗಳು ಹೆಚ್ಚಾಗುತ್ತಲೇ ಇವೆ. 2023ರಲ್ಲಿ 10, 2024ರಲ್ಲಿ 12 ಮತ್ತು ಈ ವರ್ಷದ ಜುಲೈ ಅಂತ್ಯಕ್ಕೆ 12 ಪ್ರಕರಣಗಳು ದಾಖಲಾಗಿವೆ.
’ಗಾಂಜಾ ಸೇವನೆ ಕುರಿತು ಬರುತ್ತಿರುವ ದೂರುಗಳ ಜೊತೆಗೆ ನಮ್ಮ ಸಿಬ್ಬಂದಿ ನಿರಂತರವಾಗಿ ಕಣ್ಗಾವಲು ಇರಿಸಿ ಗಾಂಜಾ ಸೇವನೆ ಪತ್ತೆ ಹಚ್ಚುತ್ತಿದ್ದಾರೆ’ ಎಂದು ಎಸ್.ಪಿ. ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.