
ಕೊಪ್ಪಳ: ‘ಕೊಪ್ಪಳ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ರಾಷ್ಟ್ರೀಯ ಹೆದ್ದಾರಿ, ಶಿಕ್ಷಣ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಮಹತ್ವದ ಕಾಮಗಾರಿಗಳು ಆಗುತ್ತಿದ್ದು, ಅಭಿವೃದ್ಧಿ ವಿಷಯದಲ್ಲಿ ರಾಜಕಾರಣ ಬೇಡ’ ಎಂದು ಸಂಸದ ರಾಜಶೇಖರ ಹಿಟ್ನಾಳ ಹೇಳಿದರು.
ತಮ್ಮ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ‘ರಾಷ್ಟ್ರೀಯ ಹೆದ್ದಾರಿ–63ರಲ್ಲಿ ಕೊಪ್ಪಳ ಪಟ್ಟಣ ವ್ಯಾಪ್ತಿಯಲ್ಲಿ ಒಂದೇ ಸಮಯದಲ್ಲಿ ಅಭಿವೃದ್ಧಿ ಯೋಜನೆಯಡಿ ₹43.03 ಕೋಟಿ ವೆಚ್ಚದಲ್ಲಿ ರಸ್ತೆ ನಿರ್ಮಾಣ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದ್ದು, ಇದರಲ್ಲಿ ಒಟ್ಟು 2 ದೊಡ್ಡ ಮೇಲ್ಸೇತುವೆಗಳು, 2 ಸಣ್ಣ ಮೇಲ್ಸೇತುವೆ, 7 ಕಲ್ವರ್ಟಗಳು, 2 ಪೈಪ್ ಕಲ್ವರ್ಟಗಳು, ರಸ್ತೆ ಬದಿ ಚರಂಡಿ, ವಿದ್ಯುತ್ ದೀಪಗಳು, ಹೈಮಾಸ್ಕ್ ವಿದ್ಯುತ್ ದೀಪಗಳು, ತಡೆ ಗೋಡೆ ನಿರ್ಮಾಣ ಮಾಡಲಾಗುತ್ತದೆ’ ಎಂದು ತಿಳಿಸಿದರು.
‘ಪಿ.ಎಂ ಉಷಾ ಯೋಜನೆಯಡಿ ಕೊಪ್ಪಳದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಪದವಿ ಕಾಲೇಜಿಗೆ ಮೂಲಸೌಕರ್ಯ ಕಲ್ಪಿಸುವ ಕಾಮಗಾರಿ ಅಂದಾಜು ಮೊತ್ತ ₹5 ಕೋಟಿಯಲ್ಲಿ ರೈಲ್ ಇಂಡಿಯಾ ಟೆಕ್ನಿಕಲ್ ಮತ್ತು ಎಕನಾಮಿಕ್ ಸರ್ವಿಸಸ್ ಲಿಮಿಟೆಡ್ ವತಿಯಿಂದ ಅನುಷ್ಠಾನ ಮಾಡಲಾಗುತ್ತಿದೆ. ಇದೇ ಯೋಜನೆಯಡಿ ಕೊಪ್ಪಳ ಲೋಕಸಭಾ ಕ್ಷೇತ್ರದ ತುರುವಿಹಾಳ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಗ್ರಂಥಾಲಯ, ಹೆಚ್ಚುವರಿ ಕೊಠಡಿಗಳು ಮತ್ತು ಕಾಲೇಜು ನವೀಕರಣ ಕಾಮಗಾರಿ ಮಾಡಲಾಗುತ್ತಿದೆ’ ಎಂದು ತಿಳಿಸಿದರು.
‘ಸಂಸದರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ 2025-26ನೇ ಸಾಲಿನಲ್ಲಿ ₹4.90 ಕೋಟಿ ಮಂಜೂರಾಗಿದ್ದು, ಇದರಲ್ಲಿ ₹4.85 ಕೋಟಿ ಬಳಕೆ ಮಾಡಲಾಗಿದೆ. ಎ.ಐ ಎಕ್ಸಲೆನ್ಸ್ ಕೇಂದ್ರ ಕಾಮಗಾರಿಗೆ ಅಂದಾಜು ಮೊತ್ತ ₹1.80 ಕೋಟಿ ಕೆ.ಕೆ.ಆರ್.ಡಿ.ಬಿ ಅನುದಾನದಡಿ ಕೊಪ್ಪಳದ ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿ ಎ.ಐ ಎಕ್ಸಲೆನ್ಸ್ ಕೇಂದ್ರ ನಿರ್ಮಾಣ ಮಾಡಲಾಗುತ್ತಿದೆ’ ಎಂದು ಮಾಹಿತಿ ನೀಡಿದರು.
ಅಂಜನಾದ್ರಿಯ ಬಗ್ಗೆ ಬಿಜೆಪಿಯವರಿಗೆ ನಿಜವಾಗಿಯೂ ಭಕ್ತಿಯಿದ್ದರೆ ಅಲ್ಲಿನ ಅಭಿವೃದ್ಧಿಯ ಬಗ್ಗೆ ನಾನು ಹೊಂದಿರುವ ಕಳಕಳಿಗೆ ಬೆಂಬಲಿಸಬೇಕೇ ಹೊರತು ನನ್ನ ಹೇಳಿಕೆಯ ಒಂದು ಸಣ್ಣ ಅಂಶವನ್ನು ತೆಗೆದುಕೊಂಡು ರಾಜಕೀಯ ಮಾಡಬಾರದು.ರಾಜಶೇಖರ ಹಿಟ್ನಾಳ ಸಂಸದ
‘ದುರ್ಘಟನೆ ವೈಭವೀಕರಿಸಲಾಗಿದೆ‘
ಕೊಪ್ಪಳ: ‘ಅಂಜನಾದ್ರಿ ದೇವಸ್ಥಾನವನ್ನು ವಿಶ್ವಕ್ಕೆ ಪರಿಚಯಿಸಬೇಕು. ದುರ್ಘಟನೆಯನ್ನು ದೊಡ್ಡದಾಗಿ ವೈಭವೀಕರಿಸಿದ್ದಕ್ಕೆ ಭಕ್ತರ ಸಂಖ್ಯೆ ಕಡಿಮೆ ಆಗಿದೆ ಎಂದಿದ್ದೇನೆ. ಇದನ್ನು ಬಿಜೆಪಿಯವರಿಗೆ ಅಂಜನಾದ್ರಿ ಅಭಿವೃದ್ಧಿಯ ಕಳಕಳಿ ಇದ್ದರೆ ಭಕ್ತಿ ಮತ್ತು ಗೌರವವಿದ್ದರೆ ನನ್ನ ಹೇಳಿಕೆ ಬೆಂಬಲಿಸಬೇಕು’ ಎಂದು ರಾಜಶೇಖರ ಹಿಟ್ನಾಳ ಆಗ್ರಹಿಸಿದರು. ‘ಬಿಜೆಪಿಗರು ಅಂಜನಾದ್ರಿಯನ್ನು ಕೇವಲ ಪ್ರಚಾರಕ್ಕೆ ಬಳಸಿಕೊಳ್ಳುತ್ತಿದ್ದಾರೆ. ದುರ್ಘಟನೆ ವೈಭವೀಕರಿಸಿದರೆ ಹನುಮನ ಭಕ್ತರಿಗೆ ನೋವಾಗುತ್ತದೆ. ಬಿಜೆಪಿಯವರು ನನ್ನ ಕಳಕಳಿಯನ್ನು ಖಂಡನೆ ಮಾಡಿದರೆ ಸ್ಪಷ್ಟಪಡಿಸಲಿ’ ಎಂದರು. ‘ನಾನು ತಪ್ಪು ಮಾಡಿದ್ದರೆ ಕ್ಷಮೆ ಕೇಳುತ್ತೇನೆ. ಕೇವಲ ಸಣ್ಣ ಘಟನೆ ಎಂದಿದ್ದನ್ನು ಮಾತ್ರ ದೊಡ್ಡದಾಗಿ ಬಿಂಬಿಸಲಾಗಿದೆ. ನಾವು ಒತ್ತಡದಲ್ಲಿರುತ್ತವೆ. ಎಲ್ಲವನ್ನೂ ಬರೆದುಕೊಂಡು ಓದಲು ಆಗುವುದಿಲ್ಲ’ ಎಂದು ಸ್ಪಷ್ಟಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.