ADVERTISEMENT

ಕೊಪ್ಪಳ: ‘ಪಾರ್ಕ್‌’ ಅಭಿವೃದ್ಧಿಗೆ ಪೂರಕ ಸಸ್ಯಸಂತೆ

‘ಮರಳಿ ಖರೀದಿಸು’ ಕೃಷಿಗೆ ಅನುಕೂಲ, ಕಂಗೊಳಿಸಲಿವೆ ವಿದೇಶಿ ತಳಿಗಳು

ಪ್ರಮೋದ ಕುಲಕರ್ಣಿ
Published 15 ಆಗಸ್ಟ್ 2025, 7:47 IST
Last Updated 15 ಆಗಸ್ಟ್ 2025, 7:47 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಕೊಪ್ಪಳ: ಸ್ವಾತಂತ್ರ್ಯ ದಿನದ ಅಂಗವಾಗಿ ತೋಟಗಾರಿಕಾ ಇಲಾಖೆ ತನ್ನ ಕಚೇರಿ ಆವರಣದಲ್ಲಿ ಪ್ರತಿ ವರ್ಷ ಹಮ್ಮಿಕೊಳ್ಳುವ ಸಸ್ಯಸಂತೆ ಮತ್ತು ತೋಟಗಾರಿಕೆ ಅಭಿಯಾನ ಈ ಬಾರಿ ಜಿಲ್ಲೆಯಲ್ಲಿ ಅನುಷ್ಠಾನಕ್ಕೆ ಸಿದ್ಧಗೊಳ್ಳುತ್ತಿರುವ ‘ತೋಟಗಾರಿಕಾ ತಂತ್ರಜ್ಞಾನ ಪಾರ್ಕ್‌’ ಬೆಳವಣಿಗೆಗೆ ಪೂರಕವಾಗಿ ಇರಲಿದೆ.

ತೋಟಗಾರಿಕಾ ಪಾರ್ಕ್‌ ಕನಕಗಿರಿ ತಾಲ್ಲೂಕಿನ ಸಿರವಾರದ ಬಳಿ ಮಂಜೂರಾಗಿ ಐದು ವರ್ಷಗಳೇ ಉರುಳಿದ್ದರೂ ಅನುಷ್ಠಾನಕ್ಕೆ ಕ್ರಮಗಳು ಆಗಿರಲಿಲ್ಲ. ಎರಡು ತಿಂಗಳ ಹಿಂದೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಇದಕ್ಕೆ ಅನುಮೋದನೆ ಲಭಿಸಿದ್ದು, 194.33 ಎಕರೆ ಜಮೀನಿನಲ್ಲಿ ಸಾರ್ವಜನಿಕ ಹಾಗೂ ಖಾಸಗಿ ಸಹಭಾಗಿತ್ವ (ಪಿಪಿಪಿ) ಮಾದರಿಯಡಿ ₹83.79 ಕೋಟಿ ಅಂದಾಜು ವೆಚ್ಚದಲ್ಲಿ ತಂತ್ರಜ್ಞಾನ ಪಾರ್ಕ್‌ ಆರಂಭಿಸುವುದಾಗಿ ಸರ್ಕಾರ ತಿಳಿಸಿದೆ. ಕಟ್ಟಡ ನಿರ್ಮಾಣ, ತೋಟಗಾರಿಕಾ ಕೃಷಿಗೆ ಅನುಕೂಲವಾಗುವ ವಾತಾವರಣವನ್ನು ಅಲ್ಲಿ ಸೃಷ್ಟಿಸಬೇಕಾಗಿದೆ.

ಅದಕ್ಕೆ ಪೂರಕವಾಗಿ ಜಿಲ್ಲೆಯಲ್ಲಿಯೇ ಸಸಿಗಳು ಹಾಗೂ ತೋಟಗಾರಿಕಾ ಕ್ಷೇತ್ರಕ್ಕೆ ಅನುಕೂಲವಾಗುವಂತೆ ಸೌಲಭ್ಯಗಳನ್ನು ಕಲ್ಪಿಸಲು ಸಿದ್ಧತೆ ಮಾಡಿಕೊಳ್ಳಲು ಇಲಾಖೆ ಈಗಿನಿಂದಲೇ ತಯಾರಿ ಮಾಡಿಕೊಳ್ಳುತ್ತಿದೆ. ಆದ್ದರಿಂದ ಆ. 15ರಿಂದ 20ರ ತನಕ ನಡೆಯಲಿರುವ ಸಸ್ಯ ಸಂತೆಯಲ್ಲಿ ಆದಾಯ ತರುವ ಹೊಸ ಬೆಳೆಗಳ ಪರಿಚಯ, ಕಡಿಮೆ ಖರ್ಚು ಮಾಡಿ ಹೆಚ್ಚು ಆದಾಯ ತರುವ, ನಿಶ್ಚಿತ ಆದಾಯ ಒದಗಿಸುವ ಹಾಗೂ ಹೆಚ್ಚು ನಿರ್ವಹಣೆ ಖುರ್ಚು ಮತ್ತು ಹೆಚ್ಚು ಆದಾಯ ತಂದುಕೊಡುವ ಕೊಡುವ ಮಾದರಿಯ ತೋಟಗಾರಿಕಾ ಕೃಷಿಗಳ ಪರಿಚಯ ಇರಲಿದೆ.

ADVERTISEMENT

ಕೃಷಿ ಭೂಮಿ ಇಲ್ಲದವರಿಗೂ ಈ ಮೇಳದಲ್ಲಿ ಉಪಯುಕ್ತ ಸಲಹೆಗಳು ಮತ್ತು ಮಾದರಿಗಳ ಪರಿಚಯ ಇರಲಿದೆ. ಮನೆಯ  ತಾರಸಿಯಲ್ಲಿ ತೋಟ, ಮನೆಯಂಗಳದಲ್ಲಿ ಅಲಂಕಾರಿಕ ಸಸ್ಯಗಳನ್ನು ಬೆಳೆಯುವುದು ಮತ್ತು ಮನೆಯ ಅಂದ ಹೆಚ್ಚಿಸುವಂತೆ ಮಾಡಲು ಸಸಿಗಳ ಮಾರಾಟ ಇರಲಿದೆ. ಕಂಪನಿಯವರೇ ‘ಮರಳಿ ಖರೀದಿಸು‘ ವ್ಯವಸ್ಥೆಯಲ್ಲಿ ಫ್ಲೋರಿಜಾ ಕಂಪನಿ ಹಲಸು ಹಾಗೂ ಮೋಸಂಬಿ ಕೃಷಿಗೆ ಉತ್ತೇಜನ ನೀಡಲಿದ್ದಾರೆ.

ಶಿಮ್ಲಾದಲ್ಲಿ ವ್ಯಾಪಕವಾಗಿ ಬೆಳೆಯಲಾಗುವ ಅನ್ನಾ ಎನ್ನುವ ಸೇಬಿನ ತಳಿಯನ್ನು ಈ ಸಲ ಜಿಲ್ಲೆಯಲ್ಲಿಯೂ ಬೆಳೆಯಲಾಗುತ್ತಿದೆ. ಜೊತೆಗೆ ಕಡಿಮೆ ನಿರ್ವಹಣೆ ವೆಚ್ಚದೊಂದಿಗೆ ಉತ್ತಮ ಆದಾಯ ತಂದುಕೊಡುವ ಮತ್ತು ಮಿಶ್ರ ಬೆಳೆಯಾಗಿಯೂ ಬೆಳೆಯಬಹುದಾದ ಮಸಾಲೆ ಪದಾರ್ಥಗಳಾದ ಯಾಲಕ್ಕಿ, ಲವಂಗ ಹಾಗೂ ಮೆಣಸು ಬೆಳೆಗಳ ಉತ್ತೇಜನ ಲಭಿಸಲಿದೆ. 

ಕೃಷ್ಣ ಸಿ. ಉಕ್ಕುಂದ
ಜಿಲ್ಲೆಯಲ್ಲಿ ಆರಂಭವಾಗುವ ತೋಟಗಾರಿಕಾ ತಂತ್ರಜ್ಞಾನ ಪಾರ್ಕ್‌ ಗುರಿಯಾಗಿಟ್ಟುಕೊಂಡು ಈ ಸಲದ ಸಸ್ಯಸಂತೆ ಆಯೋಜಿಸಲಾಗಿದೆ. ಕಡಿಮೆ ಖರ್ಚು ಮಾಡಿ ಹೆಚ್ಚು ಆದಾಯ ಗಳಿಸಲು ಅನುಕೂಲವಾಗುವ ಪ್ರಾತ್ಯಕ್ಷಿಕೆ ಇರಲಿದೆ.
ಕೃಷ್ಣ ಸಿ. ಉಕ್ಕುಂದ ತೋಟಗಾರಿಕಾ ಇಲಾಖೆ ಉಪನಿರ್ದೇಶಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.