ADVERTISEMENT

ಕೊಪ್ಪಳ: ಹುಲಿಗೆಮ್ಮ ದೇವಿ ದರ್ಶನಕ್ಕೆ ಭಕ್ತಸಾಗರ

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2023, 20:28 IST
Last Updated 5 ಫೆಬ್ರುವರಿ 2023, 20:28 IST
   

ಮುನಿರಾಬಾದ್‌ (ಕೊಪ್ಪಳ): ಜಿಲ್ಲೆಯ ಪ್ರಸಿದ್ಧ ಧಾರ್ಮಿಕ ತಾಣ ಹುಲಿಗಿಯಲ್ಲಿ ಭರತ ಹುಣ್ಣಿಮೆ ಅಂಗವಾಗಿ ಭಾನುವಾರ ಲಕ್ಷಾಂತರ ಭಕ್ತರು ಹುಲಿಗೆಮ್ಮ ದೇವಿಯ ದರ್ಶನ ಪಡೆದರು. ಇದರ ನಡುವೆಯೇ ಹಲವರು ತುಂಗಭದ್ರಾ ನದಿಯಲ್ಲಿಯೇ ಪ್ರಾಣಿ ಬಲಿ ಮಾಡಿದ್ದು ಸಾರ್ವಜನಿಕವಾಗಿ ಟೀಕೆಗೆ ಕಾರಣವಾಗಿದೆ.

ದೇವಿ ದರ್ಶನ ಪಡೆಯಲು ರಾಜ್ಯ ಹಾಗೂ ಹೊರರಾಜ್ಯಗಳಿಂದಭಕ್ತರು ಬಂದಿದ್ದರು. ಅನೇಕರು ತುಂಗಭದ್ರಾ ನದಿಯಲ್ಲಿ ಸ್ನಾನ ಮಾಡಿ ನೈವೇದ್ಯ ಸಲ್ಲಿಸಿದರು. ಮಾಂಸಹಾರಿಗಳು ಕುರಿ, ಕೋಳಿ ತಂದು ಅಡುಗೆ ಸಿದ್ಧಪಡಿಸಿದರು.

ಕೆಲ ಭಕ್ತರು ಬಯಲು ಜಾಗದಲ್ಲಿ, ದೂರದ ಹೊಲದಲ್ಲಿ ಟೆಂಟ್ ಹಾಕಿ ಕುರಿ, ಕೋಳಿ ಬಲಿ ನೀಡಿದರೆ, ಇನ್ನು ಕೆಲವರು ತುಂಗಭದ್ರಾ ನದಿ ಮಧ್ಯದಲ್ಲಿ ಸ್ನಾನಕ್ಕೆ ಬಂದ ಭಕ್ತರ ಸಮ್ಮುಖದಲ್ಲಿ ಕುರಿ ಕಡಿದು ರಕ್ತ ಹರಿಸಿದರು. ಇದಕ್ಕೆ ಕೆಲ ಭಕ್ತರು ಆಕ್ಷೇಪ ವ್ಯಕ್ತಪಡಿಸಿದರೂ ಕೇಳಲಿಲ್ಲ. ನಿಷೇಧವಿದ್ದರೂ ಪ್ರಾಣಿಬಲಿ ಬಿಡಲಿಲ್ಲ.

ADVERTISEMENT

ಒಂದು ಕಡೆ ನದಿಯಲ್ಲಿ ಪ್ರಾಣಿಯ ರಕ್ತ ಹರಿದು ಹೋಗುತ್ತಿದ್ದರೆ, ಇನ್ನೊಂದು ಕಡೆ ಭಕ್ತರು ಅದೇ ನೀರಿನಲ್ಲಿ ಪುಣ್ಯ ಸ್ನಾನ ಮಾಡುತ್ತಿದ್ದ ಚಿತ್ರಣ ಕಂಡು ಬಂತು.

ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಹುಲಿಗೆಮ್ಮ ದೇವಸ್ಥಾನದ ಕಾರ್ಯನಿರ್ವಾಹಣಾಧಿಕಾರಿ ಅರವಿಂದ ಅಯ್ಯಪ್ಪ ಸುತಗುಂಡಿ, ‘ದೇವಸ್ಥಾನದ ಆವರಣ ಹಾಗೂ ಸುತ್ತಲಿನ ಪ್ರದೇಶದಲ್ಲಿ ಪ್ರಾಣಿ ಬಲಿ ನಿಷೇಧಿಸಲಾಗಿದೆ. ಈ ಕುರಿತು ನಿಗಾ ವಹಿಸಲು ಗೃಹರಕ್ಷಕ ದಳ ಸಿಬ್ಬಂದಿ ಮತ್ತು ಪೊಲಿಸರನ್ನು ನಿಯೋಜಿಸಲಾಗಿತ್ತು. ಭದ್ರತಾ ಸಿಬ್ಬಂದಿ ಕಣ್ತಪ್ಪಿಸಿ ನದಿಯಲ್ಲಿ ಪ್ರಾಣಿ ಬಲಿ ನೀಡಿರುವ ಘಟನೆ ಬಗ್ಗೆ ಕ್ರಮ ಕೈಗೊಳ್ಳಲಾಗುವುದು’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.