ಪತ್ತೆಯಾದ ಶಾಸನ
ಕುಕನೂರು (ಕೊಪ್ಪಳ ಜಿಲ್ಲೆ): ತಾಲ್ಲೂಕಿನ ಎರೆಹಂಚಿನಾಳ ಗ್ರಾಮದಲ್ಲಿ ಇತ್ತೀಚೆಗೆ ಶಾಸನಗಳು ಪತ್ತೆಯಾಗಿದ್ದು, 12ನೇ ಶತಮಾನಕ್ಕಿಂತ ಪೂರ್ವದಲ್ಲಿಯೇ ಈ ಗ್ರಾಮ ಅಸ್ತಿತ್ವದಲ್ಲಿತ್ತು, ಜೈನ ಹಾಗೂ ಶೈವ ಧರ್ಮಗಳ ಪ್ರಭಾವ ಹೊಂದಿತ್ತು ಎನ್ನುವ ಮಾಹಿತಿ ಲಭ್ಯವಾಗಿದೆ.
‘ಊರ ಕೆರೆಯ ಮೆಟ್ಟಿಲಿನ ಪಕ್ಕದ ಗೋಡೆಯಲ್ಲಿಯ ತ್ರುಟಿತ ಶಾಸನವನ್ನು ಕರಿಕಲ್ಲಿನಲ್ಲಿ ಕೆತ್ತಲಾಗಿದ್ದು, ಹುಲೆಯರ ಶಿವಮಯ್ಯನಾಯಕನು ಕೆರೆಯ ಏರಿಯ ಕೆಳಗಿರುವ ಎರಡು ಮತ್ತರು ಸುರಹೊನ್ನೆ ಹೂಗಳ ತೋಟ ಮತ್ತು ಕೆರೆಯ ಪಶ್ಚಿಮ ದಿಕ್ಕಿನಲ್ಲಿಯ ಮೂರು ಮತ್ತರು ಎರೆಯ ಭೂಮಿ ದಾನವಾಗಿ ಯಾವುದೋ ದೇವರ ರಂಗಭೋಗಕ್ಕಾಗಿ ಕೊಟ್ಟು, ಚಂದ್ರ, ಸೂರ್ಯ ಇರುವವರೆಗೆ ದಾನವು ಅನೂಚಾನವಾಗಿ ನಡೆಯುವಂತೆ ಬಿಟ್ಟನೆಂದು ತಿಳಿಸುತ್ತದೆ. ಇಲ್ಲಿ ಹುಲೆಯರ ಎನ್ನುವ ವಿಶೇಷಣ ಶಬ್ದದ ಅರ್ಥ ತಿಳಿಯುವುದಿಲ್ಲ. ಇದು ಅವನ ಮನೆತನದ ಅಡ್ಡ ಹೆಸರಾಗಿರಬಹುದು’ ಎಂದು ಸಂಶೋಧಕರಾದ ಹನುಮಾಕ್ಷಿ ಗೋಗಿ ಅಭಿಪ್ರಾಯಪಟ್ಟಿದ್ದಾರೆ.
ಕೆರೆಯ ಹತ್ತಿರದ ನಾಗರೆಡ್ಡಿ ಅವರ ಹಿತ್ತಲಿನ ಕಲ್ಲುಗೋಡೆಯಲ್ಲಿ ಸೇರಿಸಿದ ತ್ರುಟಿತ ಶಾಸನದಲ್ಲಿ ಪೆರ್ಮಾಡಿಯ ಬಿರುದಾವಳಿಗಳು ಮತ್ತು ಸಾಧನೆಗಳ ವಿವರಗಳಿವೆ. ಈ ಪೆರ್ಮಾಡಿಯು ಕಲ್ಯಾಣ ಚಾಲುಕ್ಯ ಚಕ್ರವರ್ತಿ ಅಭಿನವ ಭೋಜನೆನಿಸಿದ ಆರನೆಯ ವಿಕ್ರಮಾದಿತ್ಯನೇ ಆಗಿದ್ದಾನೆ. ಶಾಸನದಲ್ಲಿ ಬರುವ ವೈರಿಗಳನ್ನು ಬಗ್ಗುಬಡಿದ ಯುದ್ಧ ಸಾಧನೆಗಳೆಲ್ಲ ಸ್ಪಷ್ಟವಾಗಿ ವಿಕ್ರಮಾದಿತ್ಯನವೇ ಆಗಿವೆ ಎನ್ನುವುದನ್ನು ಇತರೆಡೆ ದೊರೆತ ಪ್ರಕಟಿತ ಶಾಸನಗಳಿಂದ ದೃಢೀಕರಿಸಬಹುದು ಎಂದು ಅವರು ಹೇಳಿದ್ದಾರೆ.
ಹಾಳೂರಿನ ಹತ್ತಿರದ ಹೊಲದ ಹಳ್ಳದ ಬದುವಿನಲ್ಲಿಯ ಲಭಿಸಿದ 12ನೇ ಶತಮಾನದ್ದು ಎನ್ನಲದಾದ ಶಾಸಕದ ಮೇಲ್ಭಾಗದ ಒಂದು ಅಡಿಯ ಭಾಗದಲ್ಲಿ ಸೂರ್ಯ ಚಂದ್ರ, ಶಿವಲಿಂಗ, ಪೂಜಿಸುತ್ತಿರುವ ಯತಿ ಮತ್ತು ಕುಳಿತ ನಂದಿಗಳಿವೆ. ಲೊಕ್ಕಿಗುಂಡಿಯ (ಇಂದಿನ ಲಕ್ಕುಂಡಿ) ಸ್ವಯಂಭೂ ಶ್ರೀ ಕಟ್ಟೆಯ ಸೋಮ (ಸೋಮೇಶ್ವರ) ದೇವರಿಗೆ, ನರೇಗಲ್ಲಿನ ದಕ್ಷಿಣ ಭಾಗದಲ್ಲಿರುವ ಹೊಲದಲ್ಲಿ ದುಸಿಗ ಕೇಶವ ದಂಡನಾಯಕರು, ಗಾವುಂಡರು ಮತ್ತು ಹೊಂಬಟ್ಟೆಗಾರರು (ನೇಕಾರರು?) ಸೇರಿ 50 ಮತ್ತರು ಭೂಮಿ ದತ್ತಿಯಾಗಿ ನೀಡಿದರು ಎನ್ನುವ ಉಲ್ಲೇಖವಿದೆ.
ಒಂದೂವರೆ ಅಡಿ ಅಗಲ ಮತ್ತು ಉದ್ದ ಎತ್ತರದ ಬಳಪದ ಕಲ್ಲಿನ ಇನ್ನೊಂದು ಶಾಸನದಲ್ಲಿ ಉಡುಚಾದೇವಿಯ ಮೂರ್ತಿ ಕೆತ್ತಲಾಗಿದೆ. ಶಾಸನದ ನಾಲ್ಕೂ ಭಾಗದ ಶಾಸನ ಒಡೆದಿದ್ದು, ಸುಮಾರು 13ನೇ ಶತಮಾನದ ಅಕ್ಷರಗಳಿವೆ.
ಶಾಂತಿನಾಥ ತೀರ್ಥಂಕರರನ್ನು ಸ್ತುತಿಸುವ ಈ ಶಾಸನವು ಜೈನರ ಕಾಲದ್ದಾಗಿದ್ದು, ಯಾದವ ಚಕ್ರವರ್ತಿ ಕನ್ನರನನ್ನು ವಿಶೇಷಣಗಳೊಂದಿಗೆ ಬಣ್ಣಿಸುತ್ತ ಅಪೂರ್ಣಗೊಳ್ಳುತ್ತದೆ. ಶಾಸನ ಪರಿವೀಕ್ಷಣೆಯಲ್ಲಿ ಎನ್.ಕೆ.ತೆಗ್ಗಿನಮನಿ ಮತ್ತು ಕುಟುಂಬದವರು ನೆರವಾಗಿದ್ದಾರೆ ಎಂದು ಹನುಮಾಕ್ಷಿ ಗೋಗಿ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.