ADVERTISEMENT

ಕೊಪ್ಪಳ ನಗರಸಭೆ: ಆಡಳಿತದ ಹದ್ದುಬಸ್ತಿನ ಸವಾಲು

ಜಿಲ್ಲಾಕೇಂದ್ರದ ಬಡಾವಣೆಗಳಲ್ಲಿ ಎಲ್ಲೆಂದರಲ್ಲಿ ಕಸ ಬೀಸಾಡುವ ಜನ, ಸಮಸ್ಯೆಯಾದ ಸ್ವಚ್ಛತೆ

ಪ್ರಮೋದ ಕುಲಕರ್ಣಿ
Published 18 ಡಿಸೆಂಬರ್ 2025, 4:38 IST
Last Updated 18 ಡಿಸೆಂಬರ್ 2025, 4:38 IST
ಕೊಪ್ಪಳ ನಗರಸಭೆಯ ಆಡಳಿತಾಧಿಕಾರಿ ಜಿಲ್ಲಾಧಿಕಾರಿ ಡಾ. ಸುರೇಶ ಇಟ್ನಾಳ ಬುಧವಾರ ಅಧಿಕಾರ ವಹಿಸಿಕೊಂಡಾಗ ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಮಂಜುನಾಥ ಗುಂಡೂರು ಸ್ವಾಗತ ಕೋರಿದರು
ಕೊಪ್ಪಳ ನಗರಸಭೆಯ ಆಡಳಿತಾಧಿಕಾರಿ ಜಿಲ್ಲಾಧಿಕಾರಿ ಡಾ. ಸುರೇಶ ಇಟ್ನಾಳ ಬುಧವಾರ ಅಧಿಕಾರ ವಹಿಸಿಕೊಂಡಾಗ ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಮಂಜುನಾಥ ಗುಂಡೂರು ಸ್ವಾಗತ ಕೋರಿದರು    

ಕೊಪ್ಪಳ: ಸಾಕಷ್ಟು ವಿವಾದ, ಭ್ರಷ್ಟಾಚಾರದ ಆರೋಪ, ಪ್ರತ್ಯಾರೋಪ, ಲೋಕಾಯುಕ್ತರಿಂದ ದಾಳಿ, ಟೀಕೆ ಹಾಗೂ ಪ್ರತಿಟೀಕೆಗಳ ಅಬ್ಬರದಲ್ಲಿಯೇ ಇಲ್ಲಿನ ನಗರಸಭೆ ಸದಸ್ಯರ ಆಡಳಿತಾವಧಿ ಪೂರ್ಣಗೊಂಡಿದ್ದು, ಆಡಳಿತಾಧಿಕಾರಿಯಾಗಿ ಜಿಲ್ಲಾಧಿಕಾರಿ ಡಾ.ಸುರೇಶ ಇಟ್ನಾಳ ಅವರು ಅಧಿಕಾರ ವಹಿಸಿಕೊಂಡಿದ್ದಾರೆ. ಈಗಲಾದರೂ ಇಲ್ಲಿನ ಆಡಳಿತ ವ್ಯವಸ್ಥೆಗೆ ’ಹದ್ದುಬಸ್ತು’ ಸಿಗುವುದೇ ಎನ್ನುವ ಚರ್ಚೆ ಆರಂಭವಾಗಿದೆ.

31 ವಾರ್ಡ್‌ಗಳನ್ನು ಹೊಂದಿರುವ ನಗರಸಭೆಯ ಬಡಾವಣೆಗಳು ವರ್ಷದಿಂದ ವರ್ಷಕ್ಕೆ ಬೆಳೆಯುತ್ತಲೇ ಇದ್ದು, ಮೂಲ ಸೌಕರ್ಯಗಳು ಅದಕ್ಕೆ ತಕ್ಕಂತೆ ಲಭಿಸುತ್ತಿಲ್ಲ. ಮುಖ್ಯವಾಗಿ ನಗರದ ಚರಂಡಿಗಳ ಸ್ವಚ್ಛತೆ, ವಾರಕ್ಕೆ ಕನಿಷ್ಠ ಮೂರ್ನಾಲ್ಕು ದಿನವಾದರೂ ಕುಡಿಯುವ ನೀರಿನ ಸೌಲಭ್ಯ, ಅಕ್ರಮವಾಗಿ ಪಡೆದುಕೊಂಡಿರುವ ನಳಗಳಿಗೆ ಸಕ್ರಮದ ಭಾಗ್ಯ, ನಿವೇಶನ ಹಾಗೂ ಕಟ್ಟಡ ದಾಖಲೆಗಳನ್ನು ಪಡೆದುಕೊಳ್ಳಲು ಆಗುತ್ತಿರುವ ಅನಗತ್ಯ ವಿಳಂಬಗಳನ್ನು ತಪ್ಪಿಸಬೇಕಾಗಿದೆ.

ಮಂಗಳವಾರ ಅಂತ್ಯಕಂಡ ನಗರಸಭೆ ಆಡಳಿತ 2021ರ ಏಪ್ರಿಲ್‌ 27ರಂದು ಆರಂಭವಾಗಿತ್ತು. ಮೊದಲು ಲತಾ ಗವಿಸಿದ್ದಪ್ಪ ಚಿನ್ನೂರು ಬಳಿಕ ಶಿವಗಂಗಾ ಭೂಮಕ್ಕನವರ ಅಧ್ಯಕ್ಷರಾಗಿದ್ದರು. ಒಂದೇ ಅವಧಿಯಲ್ಲಿ ಅಮ್ಜದ್‌ ಪಟೇಲ್‌ ಅವರು ಮೂರನೇ ಅಧ್ಯಕ್ಷರಾಗಿ 16 ತಿಂಗಳು ಆಡಳಿತ ನಡೆಸಿದರು. ಇದೇ ಅವಧಿಯಲ್ಲಿ ಮಂಜುನಾಥ,  ಎಚ್‌.ಎನ್‌. ಭಜಕ್ಕನವರ, ಗಣಪತಿ ಪಾಟೀಲ ಹಾಗೂ ಪ್ರಸ್ತುತ ಭಾಗ್ಯನಗರ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಯಾಗಿರುವ ಸುರೇಶ ಬಬಲಾದಿ ಕೆಲವು ದಿನಗಳ ಮಟ್ಟಿಗೆ ಹಂಗಾಮಿಯಾಗಿ ಆಯಕ್ತರಾಗಿ ಕೆಲಸ ಮಾಡಿದರು. ಬಳಿಕ ಈಗಿರುವ ವೆಂಕಟೇಶ್ ನಾಗನೂರು ಪೌರಾಯುಕ್ತರಾಗಿ ಇಲ್ಲಿಗೆ ವರ್ಗಾವಣೆಯಾಗಿ ಬಂದರು.

ADVERTISEMENT

ಒಂದೆಡೆ ಅಧ್ಯಕ್ಷರ ಬದಲಾವಣೆ, ಮೇಲಿಂದ ಮೇಲೆ ಆಯುಕ್ತರ ವರ್ಗಾವಣೆಯಿಂದಾಗಿ ನಗರಸಭೆಯ ಆಡಳಿತದ ದಿಕ್ಕೇ ತಪ್ಪಿ ಹೋದಂತಾಗಿದೆ ಎಂದು ಸಾರ್ವನಿಕರು ಬಹಿರಂಗವಾಗಿಯೇ ಅನೇಕ ಬಾರಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪ್ರಸ್ತುತ ವರ್ಷದ ಫಾರ್ಮ್‌ ನಂಬರ್‌–3, ಹೊಸ ದಾಖಲೆ, ಮ್ಯೂಟೇಷನ್‌, ಬಿ ಖಾತಾ ಹೀಗೆ ಅಗತ್ಯ ದಾಖಲೆಗಳನ್ನು ಪಡೆದುಕೊಳ್ಳಲು ಜನ ಸ್ಥಳೀಯ ಆಡಳಿತ ಸಂಸ್ಥೆಗೆ ಓಡಾಡುವುದು ಸಹಜವೇ ಆಗಿದ್ದರೂ, ಕಾನೂನುಬದ್ದವಾಗಿಯೇ ಇದ್ದ ದಾಖಲೆಗಳನ್ನು ಪಡೆದುಕೊಳ್ಳಲು ಎಜೆಂಟರ ಮೊರೆ ಹೋಗಬೇಕಾಗಿದ್ದು ಗುಟ್ಟಾಗಿ ಉಳಿದಿಲ್ಲ. ಇದರಿಂದ ನಗರಸಭೆಗೆ ಹೋಗುವುದೇ ಸಾರ್ವಜನಿಕರಿಗೆ ಬೇಸರ ಮೂಡಿಸಿತ್ತು. ವೆಂಕಟೇಶ್ ನಾಗನೂರು ಪೌರಾಯುಕ್ತರಾಗಿ ಬಂದ ಬಳಿಕ ಆಡಳಿತ ವ್ಯವಸ್ಥೆ ಉತ್ತಮಗೊಳಿಸುವ ಪ್ರಯತ್ನ ಪರಿಣಾಮಕಾರಿಯಾಗಿ ನಡೆಯುತ್ತಿದೆ ಎಂದು ಸಾರ್ವಜನಿಕರು ಖುಷಿ ವ್ಯಕ್ತಪ‍ಡಿಸುತ್ತಿದ್ದಾರೆ.

ನಗರಸಭೆಯ ಆಡಳಿತಾಧಿಕಾರಿಯಾಗಿ ಜಿಲ್ಲಾಧಿಕಾರಿ ಅಧಿಕಾರ ವಹಿಸಿಕೊಂಡ ಬಳಿಕ ಇದೇ ಮಾತು ಹೇಳಿದ್ದು ‘ಹೊಸ ಆಯುಕ್ತರು ಚೆನ್ನಾಗಿ ಕೆಲಸ ಮಾಡುತ್ತಿದ್ದು, ಜನರಲ್ಲಿ ಭರವಸೆ ಮೂಡಿಸುವ ಇನ್ನಷ್ಟು ಕೆಲಸಗಳನ್ನು ಮಾಡಬೇಕಾಗಿದೆ’ ಎಂದರು.

ಕೊಪ್ಪಳದ ವಾಲ್ಮೀಕಿ ಭವನದ ಬಳಿ ಕಸ ಚೆಲ್ಲಿದ್ದ ಕಸದ ರಾಶಿ –ಪ್ರಜಾವಾಣಿ ಚಿತ್ರ/ಭರತ್‌ ಕಂದಕೂರ

ಜನರಿಗೂ ಬೇಕು ಹೊಣೆಗಾರಿಕೆ

ಕೊಪ್ಪಳ: ನಗರಸಭೆ ವ್ಯಾಪ್ತಿಯ ವಾರ್ಡ್‌ಗಳಲ್ಲಿ ಎಲ್ಲೆಂದರಲ್ಲಿ ಕಸ ಬೀಸಾಡುತ್ತಿರುವುದರಿಂದ ಜಿಲ್ಲಾಕೇಂದ್ರದ ಸ್ವಚ್ಛತೆ ಮಾಯವಾಗಿದೆ. ಆದರೆ ಸ್ವಚ್ಛತೆ ಕಾಪಾಡುವ ನಿಟ್ಟಿನಲ್ಲಿ ಸ್ಥಳೀಯ ಸಂಸ್ಥೆಯ ಸಿಬ್ಬಂದಿ ಜೊತೆಗೆ ಸಾರ್ವಜನಿಕರು ಕೂಡ ತಮ್ಮ ಸಾಮಾಜಿಕ ಹೊಣೆಗಾರಿಕೆ ಮೆರೆಯಬೇಕಾಗಿದೆ. ಬಸ್‌ ನಿಲ್ದಾಣ ಮಾರುಕಟ್ಟೆ ಪ್ರದೇಶ ಚರಂಡಿ ಆಸ್ಪತ್ರೆ ಆವರಣ ಹೀಗೆ ಸಾರ್ವಜನಿಕ ಸ್ಥಳಗಳಲ್ಲಿ ಪ್ಲಾಸ್ಟಿಕ್‌ ತ್ಯಾಜ್ಯ ಎಸೆಯುವುದಕ್ಕೆ ಕಡಿವಾಣ ಬೀಳಬೇಕಾಗಿದೆ. ಇದರ ಬಗ್ಗೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ’ಸಾರ್ವಜನಿಕರು ಕಸ ಎಸೆಯುವ ಸ್ಥಳದಲ್ಲಿ ಅವರಿಗೆ ಜಾಗೃತಿ ಮೂಡಿಸಲು ಜಾಗ ಸ್ವಚ್ಛಗೊಳಿಸಿ ರಂಗೋಲಿ ಹಾಕಲಾಗಿದೆ. ಅಧಿಕಾರಿಗಳ ಜವಾಬ್ದಾರಿ ಜೊತೆಗೆ ಸಾರ್ವಜನಿಕರ ಸಹಭಾಗಿತ್ವವೂ ನಗರದ ಸೌಂದರ್ಯಿಕರಣಕ್ಕೆ ಅಗತ್ಯ. ಮುಂದಿನ ದಿನಗಳಲ್ಲಿ ಜನಜಾಗೃತಿ ಕೆಲಸ ಹಮ್ಮಿಕೊಳ್ಳಲಾಗುವುದು’ ಎಂದು ತಿಳಿಸಿದರು.

ನಗರಸಭೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಕಾನೂನುಬದ್ಧವಾಗಿಯೇ ಜನಪರ ಕೆಲಸ ಮಾಡುವಂತೆ ಸೂಚಿಸಲಾಗಿದೆ. ಗುರುವಾರ (ಇಂದು) ಮೊದಲ ಸಭೆ ನಡೆಸುವೆ.
–ಡಾ. ಸುರೇಶ ಇಟ್ನಾಳ, ನಗರಸಭೆ ಆಡಳಿತಾಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.