ADVERTISEMENT

ಕೊಪ್ಪಳ | ಜಿಲ್ಲೆಯಲ್ಲಿ ಮತ್ತೊಬ್ಬ ವ್ಯಕ್ತಿಗೆ ಕೋವಿಡ್‌

ರಾಯಚೂರು ಜಿಲ್ಲೆಯ ಮಸ್ಕಿಯ ಕೆನರಾ ಬ್ಯಾಂಕ್ ಶಾಖೆಯಲ್ಲಿ ಕೆಲಸ ಮಾಡುತ್ತಿದ್ದ ಸೋಂಕಿತ ವ್ಯಕ್ತಿ

​ಪ್ರಜಾವಾಣಿ ವಾರ್ತೆ
Published 26 ಮೇ 2020, 17:26 IST
Last Updated 26 ಮೇ 2020, 17:26 IST
ಪಿ.ಸುನೀಲ್ ಕುಮಾರ
ಪಿ.ಸುನೀಲ್ ಕುಮಾರ   

ಕೊಪ್ಪಳ: ರಾಯಚೂರು ಜಿಲ್ಲೆಯ ಮಸ್ಕಿಯ ಕೆನರಾ ಬ್ಯಾಂಕ್‌ ಶಾಖೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಜಿಲ್ಲೆಯ ಮತ್ತೊಬ್ಬ ವ್ಯಕ್ತಿಗೆ ಕೋವಿಡ್‌-19ತಗುಲಿರುವುದು ಧೃಢಪಟ್ಟಿದೆ ಎಂದು ಜಿಲ್ಲಾಧಿಕಾರಿ ಪಿ.ಸುನೀಲ್ ಕುಮಾರ ಹೇಳಿದರು.

ಈ ಕುರಿತು ಮಂಗಳವಾರ ಅವರು ಪತ್ರಿಕಾಗೋಷ್ಠಿಯಲ್ಲಿ ಅವರು ಮಾಹಿತಿ ನೀಡಿದರು.

27 ವರ್ಷದ ಈ ವ್ಯಕ್ತಿ (ಪಿ–2254) ಜಿಲ್ಲೆಯ ಕುಷ್ಟಗಿ ತಾಲ್ಲೂಕಿನ ಕೇಸೂರು ಗ್ರಾಮದ ನಿವಾಸಿ. ಅವರು ಮೇ 17 ಮತ್ತು 18 ರಂದು ಮಸ್ಕಿಯಲ್ಲಿಯೇ ಇದ್ದು, ಮೇ 20 ರಂದು ಕೇಸೂರಿಗೆ ಬಂದಿದ್ದಾರೆ.

ADVERTISEMENT

ತೀವ್ರ ಶೀತ ಜ್ವರದಿಂದ ಬಳಲುತ್ತಿದ್ದುದರಿಂದ ಸಮೀಪದ ದೊಟಿಹಾಳ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ತಪಾಸಣೆ ಮಾಡಿಸಿಕೊಂಡಿದ್ದರು. ಆಗ ಅವರ ಗಂಟಲು ದ್ರವ ಸಂಗ್ರಹಿಸಲಾಗಿತ್ತು. ಅವರಿಗೆ ಕೋವಿಡ್–19 ದೃಢಪಟ್ಟಿರುವ ಹಿನ್ನೆಲೆಯಲ್ಲಿ ಜಿಲ್ಲಾ ಕೋವಿಡ್-19 ಆಸ್ಪತ್ರೆಗೆ ದಾಖಲಿಸಿ ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ.

ವ್ಯಕ್ತಿಯೊಂದಿಗೆ ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕ ಹೊಂದಿದ್ದ ವ್ಯಕ್ತಿಗಳ ಮಾಹಿತಿಯನ್ನು 24 ಗಂಟೆಗಳ ಒಳಗಡೆ ಪಡೆದು, ಅವರನ್ನೂ ಸಹ ಕ್ವಾರಂಟೈನ್ ಮಾಡಲಾಗುತ್ತದೆ. ಸೋಂಕಿತ ವ್ಯಕ್ತಿಯಿಂದ ನೋಡಲ್ ಅಧಿಕಾರಿಗಳು ಮಾಹಿತಿ ಕಲೆ ಹಾಕಿದ್ದಾರೆ. ಕೇಸೂರು ಮತ್ತು ದೊಟಿಹಾಳ ಈ ಎರಡೂ ಗ್ರಾಮಗಳು ಅಕ್ಕ-ಪಕ್ಕದಲ್ಲಿರುವುದರಿಂದ ಸೋಂಕಿತ ವ್ಯಕ್ತಿಯ ಮನೆಯ ಅಕ್ಕ-ಪಕ್ಕ ಮತ್ತು ಅವರು ಭೇಟಿ ನೀಡಿದ ಪ್ರದೇಶವನ್ನು ಕೋವಿಡ್-19ರ ಹೊಸ ನಿಯಮಗಳನ್ವಯ ಬಫರ್ ಜೋನ್ ಮಾಡಲಾಗುವುದು ಎಂದು ಅವರು ಹೇಳಿದರು.

ಸೋಂಕಿತ ವ್ಯಕ್ತಿಯ ಜತೆಗೆ ಅವರ ಸಹೋದರ ಪ್ರಾಥಮಿಕ ಸಂಪರ್ಕ ಹೊಂದಿರುವ ಹಿನ್ನೆಯಲ್ಲಿ ಇವರು ತೆರಳಿದ ಸ್ಥಳಗಳ ಬಗ್ಗೆ ಮಾಹಿತಿ ಪಡೆಯಲಾಗುತ್ತದೆ.ಆಶಾ ಕಾರ್ಯಕರ್ತೆಯರು ಹಾಗೂ ಬಿಎಲ್ಒ ಗಳು ಜಿಲ್ಲೆಯಲ್ಲಿ ಈಗಾಗಲೇ ಎರಡು ಸಲ ಸರ್ವೆ ಕಾರ್ಯ ಮಾಡಿದ್ದು, ಕೊರೊನಾ ಸೋಂಕಿನ ಲಕ್ಷಣಗಳಿಂದ ಬಳಲುತ್ತಿರುವ ವ್ಯಕ್ತಿಗಳ ಆರೋಗ್ಯ ತಪಾಸಣೆ ತಕ್ಷಣ ಮಾಡಿಸಲಾಗುತ್ತಿದೆ ಎಂದು ಹೇಳಿದರು.

ಜನರು ಕೆಲವು ಕಡೆಅಂತರ ಕಾಪಾಡಿಕೊಳ್ಳದಿರುವುದು, ಮಾಸ್ಕ್ ಧರಿಸದೆ ಬೇಜವಾಬ್ದಾರಿಯಿಂದ ತಿರುಗಾಡುತ್ತಿರುವುದು ಕಂಡು ಬರುತ್ತಿದೆ. ಆರೋಗ್ಯ ರಕ್ಷಣೆಗೆ ನಿಯಮಗಳನ್ನು ಪಾಲಿಸುವುದು ಅತ್ಯವಶ್ಯಕವಾಗಿದೆ ಎಂದು ಜಿಲ್ಲೆಯ ಸಾರ್ವಜನಿಕರಿಗೆ ಮನವಿ
ಮಾಡಿದರು.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.