ADVERTISEMENT

ಪ್ರವಾಸಿಗರ ಮೇಲೆ ಹಲ್ಲೆ ಪ್ರಕರಣ: ಉಟ್ಟ ಬಟ್ಟೆಯಲ್ಲಿಯೇ ಊರು ಬಿಟ್ಟಿದ್ದ ಆರೋಪಿ

​ಪ್ರಜಾವಾಣಿ ವಾರ್ತೆ
Published 10 ಮಾರ್ಚ್ 2025, 23:25 IST
Last Updated 10 ಮಾರ್ಚ್ 2025, 23:25 IST
<div class="paragraphs"><p>ಬಂಧನ</p></div>

ಬಂಧನ

   

ಪ್ರಾತಿನಿಧಿಕ ಚಿತ್ರ

ಕೊಪ್ಪಳ: ಜಿಲ್ಲೆಯ ಗಂಗಾವತಿ ತಾಲ್ಲೂಕಿನ ಸಾಣಾಪುರದ ಬಳಿ ಇತ್ತೀಚೆಗೆ ನಡೆದಿದ್ದ ಇಬ್ಬರು ಯುವತಿಯರ ಮೇಲಿನ ಅತ್ಯಾಚಾರ ಮತ್ತು ಹಲ್ಲೆ ಪ್ರಕರಣದ ಮೂರನೇ ಆರೋಪಿ ಗಂಗಾವತಿಯ ಶರಣಬಸವರಾಜ ಎಂಬಾತ ಘಟನೆ ನಡೆದ ಬಳಿಕ ಉಟ್ಟ ಬಟ್ಟೆಯಲ್ಲಿಯೇ ರಾತ್ರೋ ರಾತ್ರಿ ಊರು ಬಿಟ್ಟಿದ್ದ ಎನ್ನುವ ಮಾಹಿತಿ ಗೊತ್ತಾಗಿದೆ.

ADVERTISEMENT

ಘಟನೆ ನಡೆದ ಮರುದಿನವೇ ಮಲ್ಲೇಶ ಹಂದಿ ಮತ್ತು ಚೇತನಸಾಯಿ ಎಂಬ ಆರೋಪಿಗಳನ್ನು ಬಂಧಿಸಲಾಗಿತ್ತು. ಇದರಿಂದ ಗಾಬರಿಗೆ ಒಳಗಾಗಿದ್ದ ಶರಣಬಸವರಾಜ ತನ್ನ ಬಳಿಯಿದ್ದ ಅಲ್ಪ ಹಣದಲ್ಲಿಯೇ ರಾಯಚೂರಿಗೆ ಹೋಗಿ ಸಂಬಂಧಿಕರಿಂದ ಬೇರೊಬ್ಬರ ಮೊಬೈಲ್‌ಗೆ ಹಣ ಹಾಕಿಸಿಕೊಂಡು ಅಲ್ಲಿಂದ ತಮಿಳುನಾಡಿನ ವೇಲೂರಿಗೆ ತೆರಳಿದ್ದ. ಆತನ ಬಳಿ ಫೋನ್‌ ಇಲ್ಲದಿದ್ದರೂ ಅವರ ಆಪ್ತರು, ಕುಟುಂಬದವರಿಗೆ ಬರುತ್ತಿದ್ದ ಫೋನ್‌ ಕರೆಗಳ ಮೇಲೆ ಕಣ್ಗಾವಲು ಇಟ್ಟು ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ಇಲ್ಲಿ ನ್ಯಾಯಾಲಯದ ಮುಂದೆ ಹಾಜರು ಪಡಿಸಿದರು.

‘ಮೂರನೇ ಆರೋಪಿ ಕೃತ್ಯ ನಡೆಸಿದ್ದನ್ನು ಒಪ್ಪಿಕೊಂಡಿದ್ದಾನೆ. ಕೃತ್ಯಕ್ಕೆ ಬಳಸಿದ ಬೈಕ್ ಜಪ್ತಿ ಮಾಡಲಾಗಿದೆ. ಘಟನೆ ನಡೆದಾಗ ಆರೋಪಿಗಳು ಮದ್ಯ ಸೇವನೆ ಮಾಡಿದ್ದು ಸಾಬೀತಾಗಿದೆ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ. ರಾಮ್‌ ಎಲ್‌. ಅರಸಿದ್ಧಿ ಅವರು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು‌.

‘ಮದ್ಯ ಸೇವಿಸಿದ ನಶೆಯಲ್ಲಿದ್ದ ಆರೋಪಿಗಳು, ₹100 ನೀಡುವಂತೆ ಪ್ರವಾಸಿಗರನ್ನು ಕೇಳಿದ್ದರು. ಕೇವಲ ₹20 ಕೊಟ್ಟಿದ್ದಕ್ಕೆ ಸಿಟ್ಟಾಗಿದ್ದರು. ಈ ಕಾರಣಕ್ಕೆ ಅವರ ಮೇಲೆ ಹಲ್ಲೆ ಮಾಡಿದ್ದಾರೆ, ಒಡಿಶಾದ ಯುವಕನ ಬಳಿ ಇದ್ದ ಎರಡು ಮೊಬೈಲ್‌ ಮತ್ತು ಹಣ ಕಿತ್ತುಕೊಂಡು ಕಾಲುವೆಗೆ ತಳ್ಳಿದ್ದರು’ ಎಂದು ಹೇಳಿದರು. ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಹೇಮಂತಕುಮಾರ್‌ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.