
ಕೊಪ್ಪಳ: ಕಪ್ಪು ಕಣಗಳ ದೂಳಿನಿಂದ ಪರಿಸರ ಮಾಲಿನ್ಯ ಉಂಟು ಮಾಡುತ್ತಿರುವ ಕಾರ್ಖಾನೆಗಳ ವಿಸ್ತರಣೆ ವಿರೋಧಿಸಿ ನಾಲ್ಕು ದಿನಗಳ ಹಿಂದೆ ನಡೆದ ಕೊಪ್ಪಳ ಬಂದ್ ಬಳಿಕ ಎಚ್ಚೆತ್ತ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ಬಾಧಿತ ಗ್ರಾಮಗಳಲ್ಲಿ ಮಾಲಿನ್ಯದ ಗುಣಮಟ್ಟದ ತಪಾಸಣೆಗೆ ಮುಂದಾಗಿದ್ದಾರೆ.
ಆದರೆ, ಉತ್ತರ ಕರ್ನಾಟಕ ವ್ಯಾಪ್ತಿಯ ಜಿಲ್ಲೆಗಳಿಗೆ ಒಂದೇ ಮೊಬೈಲ್ ವ್ಯಾನ್ ಇರುವ ಕಾರಣ ಈ ತಪಾಸಣೆ ವರ್ಷಕ್ಕೊಮ್ಮೆ ನಡೆದರೆ ಅದೇ ಹೆಚ್ಚು ಎನ್ನುವಂತಾಗಿದೆ. ಮಾಲಿನ್ಯ ಉಂಟು ಮಾಡುತ್ತಿರುವ ಹೇರಳ ಕಾರ್ಖಾನೆಗಳು ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿವೆ. ಈ ಎಲ್ಲ ಕಾರ್ಖಾನೆಗಳಿಗೂ ಒಂದೇ ಮೊಬೈಲ್ ವ್ಯಾನ್ ಸಂಚರಿಸಬೇಕಾಗಿದೆ. ವಿವಿಧ ಜಿಲ್ಲಾ ಕೇಂದ್ರಗಳಲ್ಲಿ ಮಾಲಿನ್ಯದ ಪ್ರಮಾಣವನ್ನು ಅಳೆಯಲು ಅಲ್ಲಲ್ಲಿ ಸಲಕರಣೆಗಳನ್ನು ಅಳವಡಿಸಲಾಗಿದೆ. ಆದರೆ, ಮಾಲಿನ್ಯ ಮಾಡುವ ಕಾರ್ಖಾನೆಗಳ ಸಮೀಪದಲ್ಲಿಯೇ ತಪಾಸಣಾ ಉಪಕರಣಗಳನ್ನು ಅಳವಡಿಸಿದರೆ, ಹೆಚ್ಚು ನಿಖರವಾಗಿ ಮಾಲಿನ್ಯದ ಅಂಕಿ–ಅಂಶಗಳು ಗೊತ್ತಾಗುತ್ತವೆ.
ಜಿಲ್ಲಾ ಕೇಂದ್ರದ ಸಮೀಪದಲ್ಲಿ ಈಗಿರುವ ಕಾರ್ಖಾನೆಗಳ ಮಾಲಿನ್ಯ ಒಂದೆಡೆಯಾದರೆ ಬಲ್ಡೋಟಾ, ಕಿರ್ಲೋಸ್ಕರ್, ಕಲ್ಯಾಣಿ ಸ್ಟೀಲ್, ಮುಕುಂದ ಸುಮಿ, ಅಲ್ಟ್ರಾಟೆಕ್ ಸಿಮೆಂಟ್, ಎಕ್ಸ್ ಇಂಡಿಯಾ, ಭದ್ರಶ್ರೀ ಸ್ಟೀಲ್ ಹೀಗೆ ಅನೇಕ ಕಾರ್ಖಾನೆಗಳು ವಿಸ್ತರಣೆಗೆ ಸಿದ್ಧತೆ ಮಾಡಿಕೊಂಡಿವೆ. ಇವು ಪೂರ್ಣ ಪ್ರಮಾಣದಲ್ಲಿ ಕಾರ್ಯಾರಂಭ ಮಾಡಿದರೆ ಕೊಪ್ಪಳವನ್ನೇ ಸ್ಥಳಾಂತರ ಮಾಡಬೇಕಾಗುತ್ತದೆ ಎನ್ನುವ ಆತಂಕ ಜನರಲ್ಲಿದೆ. ಆದ್ದರಿಂದ ಜಿಲ್ಲಾ ಬಚಾವೊ ಆಂದೋಲನ ಸಮಿತಿ ಹಾಗೂ ಪರಿಸರ ಹಿತರಕ್ಷಣಾ ಜಂಟಿ ಕ್ರಿಯಾ ವೇದಿಕೆ 120 ದಿನಗಳಿಂದ ಅನಿರ್ದಿಷ್ಟಾವಧಿ ಧರಣಿ ನಡೆಸುತ್ತಿವೆ.
ಇತ್ತೀಚೆಗೆ ನಡೆದ ಕೊಪ್ಪಳ ಬಂದ್ ವೇಳೆ ಹೋರಾಟಗಾರರು ಹಾಗೂ ಬಾಧಿತ ಗ್ರಾಮಗಳ ಜನ ಶಾಸಕ, ಸಂಸದ ಹಾಗೂ ಮಾಜಿ ಸಂಸದರನ್ನು ತರಾಟೆಗೆ ತೆಗೆದುಕೊಂಡಿದ್ದರು. ಈ ಎಲ್ಲ ಘಟನೆಗಳ ಬಳಿಕ ಗುರುವಾರ ರಾತ್ರಿ ತಾಲ್ಲೂಕಿನ ಹಾಲವರ್ತಿ ಗ್ರಾಮದ ಕಾರ್ಖಾನೆಗಳ ಬಳಿ ಮಾಲಿನ್ಯ ನಿಯಂತ್ರಣ ಮಂಡಳಿಯ ಮೊಬೈಲ್ ವ್ಯಾನ್ ನಿಲ್ಲಿಸಲಾಗಿದೆ. ಒಂದು ವ್ಯಾನ್ ನಿರಂತರ 24 ತಾಸು ಒಂದೇ ಸ್ಥಳದಲ್ಲಿದ್ದು, ಮಾಲಿನ್ಯ ಪ್ರಮಾಣದ ಮಾಹಿತಿ ಸಂಗ್ರಹಿಸುತ್ತಿದೆ. ಬಳಿಕ ಬೇರೆ ಕಾರ್ಖಾನೆಗಳ ಸಮೀಪ ಮಾಲಿನ್ಯ ತಪಾಸಣೆ ನಿಗದಿ ಮಾಡಲಾಗುತ್ತದೆ.
ವಾಮಮಾರ್ಗದ ಆರೋಪ: ಪರಿಸರ ಮಾಲಿನ್ಯದ ಮೇಲೆ ನಿಗಾ ವಹಿಸುವ ಮೊಬೈಲ್ ವಾಹನ ಬರುವ ವಿಚಾರವನ್ನು ಅಧಿಕಾರಿಗಳು ಕಾರ್ಖಾನೆಯವರಿಗೆ ಮೊದಲೇ ತಿಳಿಸಿ ಪರೋಕ್ಷವಾಗಿ ನೆರವಾಗುತ್ತಿದ್ದಾರೆ ಎಂದು ಹೋರಾಟಗಾರರು ಆರೋಪಿಸಿದ್ದಾರೆ.
‘ಮೊಬೈಲ್ ವಾಹನ ಬರುವ ಮಾಹಿತಿಯನ್ನು ಮೊದಲೇ ನೀಡಿದ್ದರಿಂದ ಕೆಲ ಕಾರ್ಖಾನೆಗಳು ಮಾಲಿನ್ಯ ಹೊರಬಿಡುವ ಪ್ರಮಾಣವನ್ನು ಕಡಿಮೆ ಮಾಡಿವೆ. ಇನ್ನು ಕೆಲವರು ಕಾರ್ಖಾನೆ ಬಂದ್ ಮಾಡಿದ್ದಾರೆ’ ಎಂದು ಹೋರಾಟಗಾರ ಡಿ.ಎಚ್.ಪೂಜಾರ ಆರೋಪಿಸಿದ್ದಾರೆ.
ಬಾಧಿತ ಗ್ರಾಮಗಳ ರೈತರು ಹಾಗೂ ಸಾರ್ವಜನಿಕರು ಕೂಡ ಶುಕ್ರವಾರ ಮಾಲಿನ್ಯ ನಿಯಂತ್ರಣ ಮಂಡಳಿ ಕಚೇರಿಗೆ ಕರೆ ಮಾಡಿ ‘ನೀವು ಮೊಬೈಲ್ ವಾಹನ ನಿಲ್ಲಿಸಿದ್ದೀರಿ, ಕೆಲವರು ಕಾರ್ಖಾನೆಗಳನ್ನೇ ಬಂದ್ ಮಾಡಿದ್ದಾರೆ. ವಾಹನ ಹೋದ ಬಳಿಕ ಮತ್ತೆ ಕಾರ್ಯಾಚರಣೆ ಆರಂಭಿಸುತ್ತಾರೆ’ ಎನ್ನುವ ದೂರುಗಳನ್ನೂ ಹೇಳಿದ್ದಾರೆ.
ಉತ್ತರ ಕರ್ನಾಟಕಕ್ಕೆ ಒಂದೇ ಮೊಬೈಲ್ ವ್ಯಾನ್ ಇದೆ. ಹೀಗಾಗಿ ಆರು ತಿಂಗಳು ಅಥವಾ ವರ್ಷಕ್ಕೊಮ್ಮೆ ಕಾರ್ಖಾನೆಗಳ ಬಳಿ ಮಾಲಿನ್ಯದ ಗುಣಮಟ್ಟ ತಪಾಸಣೆ ಮಾಡಲಾಗುತ್ತಿದೆ. ಈಗ ಹಾಲವರ್ತಿ ಗ್ರಾಮದ ಬಳಿ ತಪಾಸಣೆ ನಡೆಸಲಾಗಿದೆವೈ. ಹರಿಶಂಕರ್ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿ
ಮಾಲಿನ್ಯದ ತಪಾಸಣೆ ಸರಿಯಾದ ಮಾರ್ಗದಲ್ಲಿ ಆಗಬೇಕು. ಅಧಿಕಾರಿಗಳು ಕೂಡ ವಾಸ್ತವ ವರದಿ ಕೊಟ್ಟು ಜನ ಅನುಭವಿಸುತ್ತಿರುವ ಸಮಸ್ಯೆ ಸರ್ಕಾರಕ್ಕೆ ಗೊತ್ತಾಗುವಂತೆ ಮಾಡಬೇಕುಅಲ್ಲಮಪ್ರಭು ಬೆಟ್ಟದೂರು ಜಂಟಿ ಕ್ರಿಯಾ ವೇದಿಕೆಯ ಪ್ರಧಾನ ಸಂಚಾಲಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.