ADVERTISEMENT

‘ಶತಕ’ದ ಹೋರಾಟ ಜೋರಾಗಿಸಲು ನಿರ್ಧಾರ

ವಿವಿಧ ಸಂಘಟನೆಗಳು, ಮುಖಂಡರ ಜೊತೆ ಹೋರಾಟಗಾರರ ಪೂರ್ವಭಾವಿ ಸಭೆ

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2026, 5:03 IST
Last Updated 1 ಫೆಬ್ರುವರಿ 2026, 5:03 IST
ಕೊಪ್ಪಳದಲ್ಲಿ ಶನಿವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಮುಖಂಡ ದಾನಪ್ಪ ಕವಲೂರು ಮಾತನಾಡಿದರು
ಕೊಪ್ಪಳದಲ್ಲಿ ಶನಿವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಮುಖಂಡ ದಾನಪ್ಪ ಕವಲೂರು ಮಾತನಾಡಿದರು   

ಕೊಪ್ಪಳ: ಪರಿಸರಕ್ಕೆ ಮಾಲಿನ್ಯ ಉಂಟು ಮಾಡುತ್ತಿರುವ ಕಾರ್ಖಾನೆಗಳು ಮತ್ತು ವಿಸ್ತರಣೆಗೆ ಮುಂದಾಗಿರುವ ಹೊಸ ಕಂಪನಿಗಳ ನಡೆ ಖಂಡಿಸಿ ನಗರದಲ್ಲಿ ನಡೆಯುತ್ತಿರುವ ಅನಿರ್ದಿಷ್ಟ ಹೋರಾಟ ಫೆ. 7ರಂದು ನೂರು ದಿನಗಳನ್ನು ಪೂರೈಸಲಿದ್ದು, ಅಂದು ಎಲ್ಲರನ್ನೂ ಒಳಗೊಂಡ ಕಾರ್ಯಕ್ರಮವನ್ನು ದೊಡ್ಡಪ್ರಮಾಣದಲ್ಲಿ ನಡೆಸಲು ನಿರ್ಧರಿಸಲಾಯಿತು.

ಈ ಕುರಿತು ಚರ್ಚಿಸಲು ನಗರದ ಬಾಲಾಜಿ ಕಲ್ಯಾಣ ಮಂಟಪದಲ್ಲಿ ಶನಿವಾರ ವಿವಿಧ ಸಂಘಸಂಸ್ಥೆಗಳ ಮುಖಂಡರು, ಹೋರಾಟಗಾರರು, ದಾನಿಗಳು ಹಾಗೂ ಪ್ರಮುಖರ ಜೊತೆ ನಡೆದ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಯಿತು. ಜಿಲ್ಲಾ ಬಚಾವೊ ಆಂದೋಲನ ಸಮಿತಿ ಹಾಗೂ ಪರಿಸರ ಹಿತರಕ್ಷಣಾ ವೇದಿಕೆ ಇದರ ಜಂಟಿ ಕ್ರಿಯಾ ವೇದಿಕೆ ನೇತೃತ್ವದಲ್ಲಿ ಹೋರಾಟ ನಡೆಯುತ್ತಿದೆ.

ಮುಖಂಡ ದಾನಪ್ಪ ಕವಲೂರ ದೊಡ್ಡ ಹೋರಾಟಕ್ಕೆ ಕರೆ ನೀಡಿ ‘ಇಲ್ಲಿರುವ ಒಂದೂವರೆ ಲಕ್ಷ ಜನರಲ್ಲಿ ಅರ್ಧದಷ್ಟು ಜನ ದೂಳು, ಹೊಗೆ, ಬೂದಿ ಬಾಧನೆಗೆ ತುತ್ತಾಗಿದ್ದಾರೆ. 20 ಬಾಧಿತ ಹಳ್ಳಿಯ ಐವತ್ತು ಸಾವಿರ ಜನರು ಅನಾರೋಗ್ಯದ ಗಂಭೀರ ಸಮಸ್ಯೆಯಿಂದ ಸಾವಿನ ದವಡೆಗೆ ಸಿಲುಕಿದ್ದಾರೆ. ಆದ್ದರಿಂದ ನಮ್ಮ ಹೋರಾಟ ತಾರ್ಕಿಕ ಅಂತ್ಯದ ತನಕ ಮುಂದುವರಿಯಬೇಕು’ ಎಂದು ಕರೆ ನೀಡಿದರು.

ADVERTISEMENT

ವೇದಿಕೆಯ ಪ್ರಧಾನ ಸಂಚಾಲಕ ಅಲ್ಲಮಪ್ರಭು ಬೆಟ್ಟದೂರು ಮಾತನಾಡಿ ‘ಅತಿಥಿಗಳಾದ ಸಾಣೇಹಳ್ಳಿ ಶಿವಾಚಾರ್ಯ ಸ್ವಾಮೀಜಿ, ಗದುಗಿನ ತೋಂಟದಾರ್ಯ ಸ್ವಾಮೀಜಿ, ಸಾಹಿತಿ ರಂಜಾನ್ ದರ್ಗಾ, ಅಸ್ಲಂ ದರ್ಗಾ, ಮೈನಳ್ಳಿ ಸ್ವಾಮೀಜಿ ಹೀಗೆ ಅನೇಕರು ಬರಲಿದ್ದಾರೆ’ ಎಂದು ತಿಳಿಸಿದರು.

ಹಿರೇಬಗನಾಳ ಗ್ರಾಮದ ಬಾಧಿತ ರೈತ ಮಹೇಶ ವದ್ನಾಳ ಮಾತನಾಡಿ ‘ನಮ್ಮ ಸ್ಥಿತಿ ಸಾವು ಬದುಕುವ ಹೋರಾಟ ಆಗಿದೆ. ಮಕ್ಕಳು ಕೂಡ ಗಂಭೀರ ಖಾಯಿಲೆಗೆ ತಾತ್ತಾಗುತ್ತಿದ್ದಾರೆ. ಯಾವ ಸಾರ್ಥಕತೆಗಾಗಿ ಬದುಕಬೇಕು ಎನ್ನುವುದು ಗೊತ್ತಾಗುತ್ತಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

ಸಮಿತಿ ಪ್ರಮುಖರಾದ ಸಾಹಿತಿ ಎಚ್.ಎಸ್. ಪಾಟೀಲ್, ಡಿ.ಎಚ್. ಪೂಜಾರ, ಡಿ.ಎಂ. ಬಡಿಗೇರ, ಮಲ್ಲಿಕಾರ್ಜುನ ಬಿ. ಗೋನಾಳ, ಡಾ. ಮಂಜುನಾಥ ಸಜ್ಜನ್, ಮಂಜುನಾಥ ಜಿ. ಗೊಂಡಬಾಳ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎ.ವಿ. ಕಣವಿ, ಪೀರಾಹುಸೇನ್ ಹೊಸಳ್ಳಿ, ರಾಜು ಬಾಕಳೆ, ಸೌಮ್ಯ ನಾಲವಾಡ, ಮಾಲಾ ಬಡಿಗೇರ, ಸರೋಜಾ ಬಾಕಳೆ, ಶ್ವೇತಾ ಅಕ್ಕಿ, ವಿಜಯ ದೊರೆರಾಜು, ಹನುಮಂತರಾವ ವಕೀಲರು ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.